ಬೆಂಗಳೂರಿನ ದಕ್ಷಿಣ ಹೊರವಲಯದಲ್ಲಿರುವ ಚಂದಾಪುರದ ಫ್ಲ್ಯಾಟ್‌ವೊಂದರಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಅರೆನಗ್ನವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಾವನ್ನಪ್ಪಿದ ಯುವತಿ ಮೂಲತಃ ಒಡಿಶಾದವಳು ಎನ್ನಲಾಗಿದೆ. ನಗರದ ಹೆಡ್ ಮಾಸ್ಟರ್ ಲೇಔಟ್‌ನ ನಾಲ್ಕನೇ ಮಹಡಿಯ ಫ್ಲಾಟ್‌ನಲ್ಲಿ ಮಧ್ಯಾಹ್ನ 2:30ರ ಸುಮಾರಿಗೆ ಶವ ಪತ್ತೆಯಾಗಿದೆ. ಫ್ಲ್ಯಾಟ್‌ನಲ್ಲಿ ದುರ್ವಾಸನೆ ಬರುತ್ತಿದ್ದ ಕಾರಣ ಮನೆಯ ಮಾಲೀಕರು ಫ್ಲ್ಯಾಟ್‌ಅನ್ನು ಪರಿಶೀಲಿಸಿದ್ದು, ಆಗ ಮೃತದೇಹ ಪತ್ತೆಯಾಗಿದೆ. ತಕ್ಷಣ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ.
ಯುವತಿ ಬಹುಶಃ ಐದು ದಿನಗಳ ಹಿಂದೆ ಸಾವನ್ನಪ್ಪಿದ್ದಾಳೆ. ಶವ ಬೆತ್ತಲೆಯಾಗಿದ್ದರೂ, ಯುವತಿಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಅಥವಾ ಗೀರುಗಳು ಪತ್ತೆಯಾಗಿಲ್ಲ ಎಂದು ಸೂರ್ಯನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ, ಅತ್ಯಾಚಾರ ಮತ್ತು ಅಪರಾಧ ಪ್ರಕರಣ ದಾಖಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಸುಮಾರು ಒಂದು ತಿಂಗಳ ಹಿಂದೆ ಫ್ಲಾಟ್ ಅನ್ನು ಯುವತಿ ಬಾಡಿಗೆಗೆ ಪಡೆದ್ದರು. ಯುವತಿಯ ತಂದೆ ಎಂದು ಪರಿಚಯಿಸಿಕೊಂಡಿದ್ದ 40ರ ಪ್ರಾಯದ ಪುರುಷ ಕೂಡ ಆಯೆಯ ಜೊತೆಗಿದ್ದರು. ಇದೀಗ ಪೊಲೀಸರು ಆತನಿಗಾಗಿ ಹುಡುಕುತ್ತಿದ್ದಾರೆ.
ಮನೆಯ ಮಾಲೀಕರು ತನ್ನ ಬಾಡಿಗೆದಾರರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸಿಲ್ಲ. ಅದೇ ಕಟ್ಟಡದಲ್ಲಿ ವಾಸವಾಗಿರುವ ಒಡಿಶಾ ಮೂಲದ ಮತ್ತೊಬ್ಬ ವ್ಯಕ್ತಿಯ ಶಿಫಾರಸಿನ ಮೇರೆಗೆ ಮನೆ ಮಾಲೀಕರು ಫ್ಲ್ಯಾಟ್ ಬಾಡಿಗೆಗೆ ನೀಡಲು ಒಪ್ಪಿಕೊಂಡಿದ್ದರು. ಬಾಡಿಗೆದಾರರು ತಾವು ಒಡಿಶಾ ಮೂಲದವರೆಂದು ಹೇಳಿಕೊಂಡಿದ್ದು, ತನ್ನ ಹೆಸರು ಸಪನ್ ಕುಮಾರ್ ಎಂದು ಪರಿಚರಿಸಿಕೊಂಡಿದ್ದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಶಿವರಾತ್ರಿ ಆಚರಣೆ ವೇಳೆ ವ್ಯಕ್ತಿಯೊಬ್ಬನ ಹತ್ಯೆ: ಮೂವರ ಬಂಧನ
ಬಾಡಿಗೆದಾರರನ್ನು ರೆಫರ್ ಮಾಡಿದ್ದ ವ್ಯಕ್ತಿಯೂ ನಾಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ. ಇಬ್ಬರೂ ಕೂಡ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅವರನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದಾಗ, ಫ್ಲ್ಯಾಟ್‌ನ ನೆಲದ ಮೇಲೆ ಸಿಗರೇಟ್ ತುಂಡುಗಳು ಹರಡಿಕೊಂಡಿದ್ದವು. ಅಡುಗೆಮನೆಯಲ್ಲಿನ ಪಾತ್ರೆಗಳನ್ನು ಸ್ವಚ್ಛಗೊಳಿಸಲಾಗಿರಲ್ಲ. ಮನೆ ಸಂಪೂರ್ಣ ಧೂಳಿನಿಂದ ತುಂಬಿತ್ತು ಎನ್ನಲಾಗಿದೆ.
ಇನ್ನು ನೆರಹೊರೆಯವರು ಒಡಿಸಾದ ಬಾಡಿಗೆದಾರರನ್ನು ಒಮ್ಮೆ ಅಥವಾ ಎರಡು ಬಾರಿ ಮಾತ್ರ ನೋಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.