ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆಂಗೇರಿಯ ಕೋನಸಂದ್ರದಲ್ಲಿ ಒಂಟಿ ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆಗೈದು ಚಿನ್ನಾಭರಣ ಕಳವು ಮಾಡಿರುವ ಘಟನೆ ನಡೆದಿತ್ತು. ಇದೀಗ, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯ ಮನೆಯಲ್ಲಿ ಬಾಡಿಗೆ ಇದ್ದ ಯುವತಿಯೇ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಯುವತಿ ತನ್ನ ಸಾಲ ತೀರಿಸಲು, ತನ್ನ ಪ್ರಿಯತಮನಿಗೆ ವಾಹನ ಕೊಡಿಸಲು ಹಾಗೂ ಶೋಕಿ ಜೀವನ ನಡೆಸುವುದಕ್ಕಾಗಿ ಕೊಲೆ ಮಾಡಿದ್ದಾಳೆ ಎಂದು ಹೇಳಲಾಗಿದೆ.
ಕೊನಸಂದ್ರದಲ್ಲಿ ವಾಸವಾಗಿರುವ ಮೋನಿಕಾ (24) ಬಂಧಿತ ಆರೋಪಿ. ದಿವ್ಯಾ (36) ಕೊಲೆಯಾದ ಮನೆ ಮಾಲಕಿ. ಬಂಧಿತ ಯುವತಿ ಮೋನಿಕಾ ಕೊಲೆಯಾದ ದಿವ್ಯಾ ಮನೆಯಲ್ಲಿ ಬಾಡಿಗೆ ಇದ್ದಳು.
ಮೇ 10ರಂದು ಈ ಘಟನೆ ನಡೆದಿತ್ತು. ಕೊಲೆಯಾದ ದಿವ್ಯಾಳ ಪತಿ ಗುರುರಾಜ್ ಸಲೂನ್ ಶಾಪ್ ಹೊಂದಿದ್ದಾರೆ. ದಂಪತಿಗಳು ಕೋನಸಂದ್ರದಲ್ಲಿ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು.
ಮೇ 10ರಂದು ಮಧ್ಯಾಹ್ನ 1.30ರ ಸುಮಾರಿಗೆ ದಿವ್ಯಾ ಕತ್ತುಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದರು. ಘಟನೆ ಬಗ್ಗೆ ದಿವ್ಯಾ ಅವರ ಪತಿ ಗುರುಮೂರ್ತಿ ನೀಡಿದ ದೂರಿನಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದ ಪೊಲೀಸರು ನಾನಾ ಆಯಾಮದಲ್ಲಿ ತನಿಖೆ ನಡೆಸಿದ್ದಾರೆ. ದಿವ್ಯಾ ಅವರ ಮನೆಯ ಮಹಡಿ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಮೋನಿಕಾ ಎಂಬ ಯುವತಿಯನ್ನು ಬಂಧಿಸಿದ್ದಾರೆ.
ಇದೀಗ ಆರೋಪಿಯನ್ನು ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದು, ಆರೋಪಿತೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?
ಬಂಧಿತೆ ಮೋನಿಕಾ ಮೂಲತಃ ಕೋಲಾರದವಳು. ಕಳೆದ ಮೂರು ತಿಂಗಳಿಂದ ಕೊಲೆಯಾದ ದಿವ್ಯಾ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದಳು. ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದಳು. ಕಳೆದ ಕೆಲವು ದಿನಗಳ ಹಿಂದೆ ಆ ಕೆಲಸವನ್ನು ಬಿಟ್ಟಿದ್ದಳು.
ಕೆಲಸ ಬಿಟ್ಟ ಬಳಿಕ ಮೋನಿಕಾಗೆ ತನ್ನ ಸಾಲ ತೀರಿಸಲು, ತನ್ನ ಪ್ರಿಯಕರನಿಗೆ ವಾಹನ ಕೊಡಿಸಲು ಹಾಗೂ ತನ್ನ ಶೋಕಿ ಜೀವನ ನಡೆಸಲು ಕಷ್ಟವಾಗಿತ್ತು. ಯುವತಿ ಜೊತೆ ಸಲುಗೆ ಬೆಳೆಸಿಕೊಂಡಿದ್ದ ಯುವಕ ಟಾಟಾ ಏಸ್ ವಾಹನ ಖರೀದಿಗೆ ಹಣದ ಮುಗ್ಗಟ್ಟು ಎದುರಿಸಿದ್ದನು. ಇದೇ ಸಮಯದಲ್ಲಿ, ದಿವ್ಯಾ ಮೈಮೇಲಿದ್ದ ಒಡವೆಗಳು ಮೋನಿಕಾಳ ಕಣ್ಣಿಗೆ ಬಿದ್ದದ್ದವು. ಮನೆ ಮಾಲೀಕರ ಚಲನವಲನ ಗಮನಿಸಿದ್ದ ಯುವತಿ, ಹತ್ಯೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಒಂಟಿ ಮಹಿಳೆಯ ಕೊಲೆಗೈದು ಚಿನ್ನದ ಸರ ಕಳವು: ದೂರು ದಾಖಲು
ದಿವ್ಯಾ ಗಂಡ ಗುರುಮೂರ್ತಿ ಎಂದಿನಂತೆ ಕೆಲಸಕ್ಕಾಗಿ ತೆರಳಿದ್ದರು. ಈ ವೇಳೆ ದಿವ್ಯಾ ಒಬ್ಬಂಟಿ ಇರುವುದನ್ನು ಅರಿತ ಮೋನಿಕಾ ಮನೆಗೆ ನುಗ್ಗಿ, ದಿವ್ಯಾಳ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಳು. ಬಳಿಕ ಆಕೆ ಮೈಮೇಲಿದ್ದ 36 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಳು.
ಕೆಲಸ ಮುಗಿಸಿ ಗುರುಮೂರ್ತಿ ಮನೆಗೆ ಬಂದ ಬಳಿಕ ಕೊಲೆಯಾಗಿರುವ ವಿಷಯ ಬೆಳಕಿಗೆ ಬಂದಿತ್ತು. ಕುತ್ತಿಗೆ ಮೇಲೆ ಗಾಯದ ಗುರುತುವಿರುವುದು ಹಾಗೂ ಚಿನ್ನದ ಸರ ಇಲ್ಲದಿರುವುದನ್ನ ಕಂಡು ಪತ್ನಿಯನ್ನ ಹತ್ಯೆ ಮಾಡಿದ್ದಾರೆ ಎಂಬುದನ್ನು ಅರಿತು, ಪೊಲೀಸರಿಗೆ ದೂರು ನೀಡಿದ್ದರು.
ಬಂಧಿತೆ ಮೋನಿಕಾ ತಾನು ಕದ್ದ ಚಿನ್ನದ ಸರವನ್ನ ಅಂಗಡಿಯೊಂದರಲ್ಲಿ ಗಿರವಿ ಇಟ್ಟಿದ್ದಳು. ಕೊಲೆ ಮಾಡಿ ಅದೇ ಮನೆಯಲ್ಲೇ ಉಳಿದುಕೊಂಡಿದ್ದಳು. ತನಗೆ ಈ ಬಗ್ಗೆ ಏನು ಗೋತ್ತೇ ಇಲ್ಲ ಎಂಬಂತೆ ಇದ್ದಳು.
ಈ ಪ್ರಕರಣದ ತನಿಖೆ ಕೈಗೊಂಡ ಇನ್ ಸ್ಪೆಕ್ಟರ್ ಕೊಟ್ರೇಶಿ ನೇತೃತ್ವದ ತಂಡ ಅನುಮಾನದ ಮೇರೆಗೆ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಬಾಯ್ಬಿಟ್ಟಿದ್ದಾಳೆ. ಸದ್ಯ ಆಕೆಯನ್ನ ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.