ಚಿನ್ನಾಭರಣಕ್ಕಾಗಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದಿದೆ. ಕೊಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಒಂದು ವಾರದ ಹಿಂದೆ ಮಹಿಳೆಯ ಕೊಲೆ ನಡೆದಿದೆ. ಯಾವುದೇ ಸಾಕ್ಷ್ಯ ಸಿಗದಂತೆ ಮಹಿಳೆಯನ್ನು ಕೊಲೆ ಮಾಡಿ ಪೆಟ್ರೋಲ್ನಿಂದ ಸುಟ್ಟು ಹಾಕಲಾಗಿದೆ. ವಾರದ ಹಿಂದೆ ತಲೆ ಬುರುಡೆ, ಮೂಳೆಗಳು ಪತ್ತೆಯಾಗಿದ್ದವು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸುಕನ್ಯಾ (36) ಮೃತ ದುರ್ದೈವಿ. ಈಕೆ ಮೂಲತಃ ದೊಡ್ಡಕಮ್ಮನಹಳ್ಳಿ ನಿವಾಸಿ. ಅದೇ ಗ್ರಾಮದ ಜಶ್ವಂತ (20) ಕೊಲೆ ಮಾಡಿದ ಆರೋಪಿ. ಈತ ಸುಕನ್ಯಾಳ ಪತಿಯ ತಂಗಿ ಮಗ.
ಫೆಬ್ರುವರಿ 12ರಂದು ಸುಕನ್ಯಾ ನಾಪತ್ತೆಯಾಗಿದ್ದಾರೆ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಳಿಕ ಬಿಂಗೀಪುರ ಗ್ರಾಮದಲ್ಲಿ ಅಪರಿಚಿತ ಮಹಿಳೆಯ ತಲೆ ಬುರುಡೆ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ಅತ್ತೆ ಸುಕನ್ಯಾ ಅವರ ಜತೆಗೆ ಸಲುಗೆಯಿಂದ ಇದ್ದ ಜಶ್ವಂತ ಆಕೆ ಬಳಿ ಪದೇಪದೆ ಹಣಕ್ಕೆ ಬೇಡಿಕೆ ಇಡುತ್ತಿದ್ದನು. ಅಲ್ಲದೇ, ತನ್ನ ಕಾರು ರೀಪೇರಿಗೆ ದುಡ್ಡು ಕೇಳುತ್ತಿದ್ದನು. ಇನ್ನಿತರ ಖರ್ಚು ವೆಚ್ಚಗಳಿಗಾಗಿ ಪದೇಪದೆ ಹಣಕ್ಕೆ ಬೇಡಿಕೆ ಇಡುತ್ತಿದ್ದನು. ಮೃತ ಮಹಿಳೆ ಸುಕನ್ಯಾ ಹಣ ನೀಡದೆ ಇದ್ದಾಗ ಆಕೆಯ ಚಿನ್ನಾಭರಣ ನೀಡುವಂತೆ ಪೀಡಿಸುತ್ತಿದ್ದನು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವ್ಹೀಲಿಂಗ್ ಮಾಡುವವರ ವಿರುದ್ದ ಕಾರ್ಯಾಚರಣೆಗಿಳಿದ ಪೊಲೀಸರು
ಅತ್ತೆ ಸುಕನ್ಯಾಳನ್ನು ಜಶ್ವಂತ ತನ್ನ ಕಾರಿನಲ್ಲಿ ಒಂದು ದಿನ ಬಿಂಗೀಪುರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿರುವ ಗುರುತು ಸಿಗಬಾರದು ಎಂದು ಆಕೆಯ ಕೂದಲನ್ನು ಕತ್ತರಿಸಿ, ಮೃತದೇಹವನ್ನ ನಿರ್ಜನ ಪ್ರದೇಶದ ಕಾಂಪೌಂಡ್ ಬಳಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಬಳಿಕ ಆಕೆಯ ಚಿನ್ನಾಭರಣ ತೆಗೆದುಕೊಂಡು ಗೋವಾದಲ್ಲಿ ವ್ಯಾಲಂಟೈನ್ಸ್ ಡೇ ಸೆಲೆಬ್ರೆಷನ್ ಮಾಡಿದ್ದನು ಎಂದು ತಿಳಿದುಬಂದಿದೆ.