ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಎಲ್ಲೇಂದರಲ್ಲಿ ಗುಂಡಿಗಳು ಕಾಣಿಸುತ್ತಿವೆ. ನಗರದಲ್ಲಿ ಬರೋಬ್ಬರಿ 11,366 ರಸ್ತೆ ಗುಂಡಿಗಳಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಂಕಿ ಅಂಶಗಳು ತಿಳಿಸಿವೆ. ಇಷ್ಟು ತಿಂಗಳು ಮಳೆ ಇದ್ದ ಕಾರಣ ರಸ್ತೆ ಗುಂಡಿಗಳನ್ನು ಮುಚ್ಚಲು ಆಗಿಲ್ಲ ಎಂದು ಪಾಲಿಕೆ ತಿಳಿಸಿದೆ. ಇದೀಗ ಮಾನ್ಸೂನ್ ಮುಗಿದಿದ್ದು, ಪಾಲಿಕೆ ರಸ್ತೆ ಗುಂಡಿಗಳನ್ನು ಮುಚ್ಚಲು ಸಜ್ಜಾಗಿದೆ. ಗುಂಡಿಗಳನ್ನು ಮುಚ್ಚಲು 225 ವಾರ್ಡ್ಗಳಿಗೆ ತಲಾ ₹15 ಲಕ್ಷ ಬಿಡುಗಡೆ ಮಾಡಿದೆ.
ಬೆಂಗಳೂರಿನಲ್ಲಿ ಮಳೆಯ ಕಾರಣದಿಂದಾಗಿ ರಸ್ತೆ ಗುಂಡಿಗಳು ನಿರ್ಮಾಣ ಆಗುತ್ತವೆ. ಮಳೆ ಬಿಟ್ಟೂ ಬಿಡದೆ ಸುರಿಯುವ ಕಾರಣದಿಂದಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಬೆಂಗಳೂರು ನಗರ ಗುಂಡಿ ಮುಕ್ತ ಆಗುತ್ತಿಲ್ಲ ಎಂಬುವುದು ಬಿಬಿಎಂಪಿ ವಾದ. ನಗರದಲ್ಲಿ ಸದ್ಯ 11,366 ರಸ್ತೆ ಗುಂಡಿಗಳು ಇವೆ ಎಂದು ಬಿಬಿಎಂಪಿ ಅಂಕಿ ಅಂಶಗಳು ತಿಳಿಸಿವೆ. ಗುಂಡಿಗಳನ್ನು ಮುಚ್ಚಲು ಪ್ರತಿ ವಾರ್ಡ್ಗೆ ₹15 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದೆ. ಹಲವು ವಾರ್ಡ್ಗಳ ಟೆಂಡರ್ ಕರೆಯಲಾಗಿದ್ದು, ಕೆಲವು ಪ್ರದೇಶದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ.
225 ವಾರ್ಡ್ಗಳಿಗೆ ತಲಾ ₹15 ಲಕ್ಷದಂತೆ ₹33 ಕೋಟಿಯನ್ನು ಹಂಚಲಾಗಿದೆ. ಕಳೆದ ವರ್ಷ ವಾರ್ಡ್ವೊಂದಕ್ಕೆ ₹20 ಲಕ್ಷ ನೀಡಲಾಗಿತ್ತು. ಕಳೆದ ಬಾರಿಯ ಅನುದಾನ ಬಳಕೆ ತೃಪ್ತಿಕರವಾಗಿಲ್ಲದ ಕಾರಣ ಈ ಬಾರಿ ಹಣ ಕಡಿತ ಮಾಡಲಾಗಿದೆ ಎನ್ನಲಾಗಿದೆ. ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ, ₹15 ಲಕ್ಷದಲ್ಲಿ ವಾರ್ಡ್‌ಗಳಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಿಸಬಹುದು. 1 ಚದರ ಮೀಟರ್ ಗುಂಡಿ ಮುಚ್ಚಲು ₹1,200 ವೆಚ್ಚವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, “ನವೆಂಬರ್ನಿಂದ ಗುಂಡಿಗಳನ್ನು ಮುಚ್ಚಲು ವಲಯ ಮತ್ತು ವಾರ್ಡ್ ಎಂಜಿನಿಯರ್ಗಳಿಗೆ ತಿಳಿಸಲಾಗಿದೆ. ನವೆಂಬರ್‌ನಿಂದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಲಿದೆ. ವಾರ್ಡ್ ಸಮಿತಿ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಲಿದೆ. ಪ್ರತಿ ವಾರ್ಡ್ಗೆ ₹15 ಲಕ್ಷ ನೀಡಲಾಗಿದ್ದು ಅವುಗಳಲ್ಲಿ ಕೆಲವು ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಈ ಟೆಂಡರ್ ಒಪ್ಪಂದವು 12 ತಿಂಗಳ ಅವಧಿಗೆ ಇರುತ್ತದೆ”ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ; ಗಡುವು ವಿಸ್ತರಣೆ ಸಾಧ್ಯತೆ
ಬಿಬಿಎಂಪಿ ಅಂಕಿ ಅಂಶಗಳ ಪ್ರಕಾರ ನಗರದಲ್ಲಿ ಸದ್ಯ 11,366 ರಸ್ತೆ ಗುಂಡಿಗಳಿವೆ. ಈ ಪೈಕಿ ದಾಸರಹಳ್ಳಿ ವಲಯದಲ್ಲೇ ಅತಿ ಹೆಚ್ಚು ಗುಂಡಿಗಳಿವೆ. ಆರ್ ಆರ್ ನಗರ ವ್ಯಾಪ್ತಿಯಲ್ಲಿ 845, ಬೊಮ್ಮನ ಹಳ್ಳಿ ವಲಯದಲ್ಲಿ 319, ಮಹದೇವಪುರ 595, ಬೆಂಗಳೂರು ದಕ್ಷಿಣ 401, ಬೆಂಗಳೂರು ಪಶ್ಚಿಮ 422 ಹಾಗೂ ಯಲಹಂಕ ವಲಯದಲ್ಲಿ 423 ರಸ್ತೆ ಗುಂಡಿಗಳಿವೆ ಎಂದು ತಿಳಿದುಬಂದಿದೆ.
ಇನ್ನು ವಿಧಾನಸಭಾ ಕ್ಷೇತ್ರವಾರು ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಅನುದಾನ ಮೀಸಲಿಟ್ಟಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ₹3.6 ಕೋಟಿ ಹಣ ಮೀಸಲಿಡಲಾಗಿದೆ. ಶಿವಾಜಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ₹1.5 ಕೋಟಿ, ಚಿಕ್ಕಪೇಟೆ, ಜಯನಗರ ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ತಲಾ ₹90 ಲಕ್ಷ, ಮಲ್ಲೇಶ್ವರಂ ₹75 ಲಕ್ಷ, ಗೋವಿಂದರಾಜನಗರ ₹60 ಲಕ್ಷ, ಆರ್ ಆರ್ ನಗರ, ಹೆಬ್ಬಾಳ, ಪುಲಕೇಶಿ ನಗರ ಹಾಗೂ ಶಾಂತಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ತಲಾ ₹15 ಲಕ್ಷ ಅನುದಾನ ಮೀಸಲಿಡಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.