ಪ್ರತಿಭಟನೆಗಳಿಗೆಂದೆ ಸೀಮಿತವಾಗಿರುವ ಬೆಂಗಳೂರಿನ ಹೃದಯಭಾಗದಲ್ಲಿರುವ ಫ್ರೀಡಂಪಾರ್ಕ್ ಅನ್ನು ನವೀಕರಿಸಿ ಪ್ರೇಕ್ಷಣೀಯ ಸ್ಥಳ ಹಾಗೂ ಹೆರಿಟೇಜ್ ಹಬ್ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ. ಜತೆಗೆ, ಇದರಿಂದ ಬಿಬಿಎಂಪಿಗೆ ಆದಾಯ ಬರುವಂತೆ ಮಾಡಿಕೊಳ್ಳಲು ಯೋಜಿಸಿದೆ.
ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಸದ್ಯ ಪ್ರತಿಭಟನೆಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಸ್ಥಳ ಪ್ರತಿಭಟನೆ ನಡೆಯಲು ಮಾತ್ರ ಸೀಮಿತವಾಗಿದೆ ಎನ್ನುವಂತಾಗಿದೆ. ಇದೀಗ, 21 ಎಕರೆಯಲ್ಲಿರುವ ಈ ಫ್ರೀಡಂ ಪಾರ್ಕ್ ಅನ್ನು ನವೀಕರಣಗೊಳಿಸಲು ಬಿಬಿಎಂಪಿ ₹5 ಕೋಟಿ ಮೀಸಲಿಟ್ಟಿದ್ದು, ನವೀಕರಣ ಮಾಡಿ ಪ್ರೇಕ್ಷಣೀಯ ಸ್ಥಳದ ಜತೆಗೆ, ಹೆರಿಟೇಜ್ ಹಬ್ ಮಾಡಲು ಬಿಬಿಎಂಪಿ ಯೋಜಿಸಿದೆ.
ಇದೀಗ, ಫ್ರೀಡಂ ಪಾರ್ಕ್‌ನಲ್ಲಿ ಅಸ್ತಿತ್ವದಲ್ಲಿರುವ ಕಟ್ಟಡಗಳ ನವೀಕರಣ, ಹಳೆಯ ಸೆಂಟ್ರಲ್ ಜೈಲ್ ರಚನೆಗಳು, ವಿದ್ಯುತೀಕರಣ ಹಾಗೂ ದುರಸ್ತಿಗಾಗಿ ಬಿಬಿಎಂಪಿ ಯೋಜನೆ ರೂಪಿಸಿದೆ. ಜತೆಗೆ, ಕಟ್ಟಡಗಳಿಗೆ ಹಾನಿ ಸೇರಿದಂತೆ ನಾನಾ ಕಾಮಗಾರಿಯೊಂದಿಗೆ ರಾಮಚಂದ್ರ ರಸ್ತೆಯಿಂದ ಫ್ರೀಡಂ ಪಾರ್ಕ್ಗೆ ಎರಡನೇ ಪ್ರವೇಶ ದ್ವಾರ ನಿರ್ಮಾಣಕ್ಕೆ ಯೋಜನೆ ನಡೆದಿದೆ.
ಫ್ರೀಡಂ ಪಾರ್ಕ್ ಅನ್ನು 2008ರಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು. ಈ ಫ್ರೀಡಂ ಪಾರ್ಕ್‌ನಲ್ಲಿ ಈ ಹಿಂದಿನ ಕೇಂದ್ರ ಕಾರಾಗೃಹ ಒಳಗೊಂಡಿದೆ. ಕಾಲಾನಂತರದಲ್ಲಿ, ಫ್ರೀಡಂ ಪಾರ್ಕ್ ಹದಗೆಟ್ಟಿದೆ. ವಿಶೇಷವಾಗಿ ಕೇಂದ್ರ ಕಾರಾಗೃಹ ಭಾಗ ಸಂಪೂರ್ಣವಾಗಿ ಹದಗೆಟ್ಟಿದೆ. ಸದ್ಯ ಫ್ರೀಡಂ ಪಾರ್ಕ್ ಒಳಗಡೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಮುಂದಿನ ದಿನಗಳಲ್ಲಿ ಪಾರ್ಕ್ ನವೀಕರಣ ಮಾಡಿ ವಾಣಿಜ್ಯ ಆದಾಯ ಬರುವಂತೆ ಮಾಡಲು ಪಾಲಿಕೆ ಯೋಜಿಸಿದೆ.
ಈಗ ಬಿಬಿಎಂಪಿಯು ಫ್ರೀಡಂ ಪಾರ್ಕ್ನ ಅಸ್ತಿತ್ವದಲ್ಲಿರುವ ರಚನೆಗಳ ನವೀಕರಣ, ಅಕೌಸ್ಟಿಕ್ಸ್ ಮತ್ತು ವಿದ್ಯುದ್ದೀಕರಣಕ್ಕಾಗಿ ಟೆಂಡರ್ ಕರೆದಿದೆ. ಸಂಪೂರ್ಣ ಕಾಮಗಾರಿಗೆ ₹5 ಕೋಟಿ ವೆಚ್ಚವಾಗಬಹುದು ಎಂದು ಬಿಬಿಎಂಪಿ ಬಜೆಟ್ ನೀಡಿದೆ. ಕೋವಿಡ್ ಕಾಲದಲ್ಲಿ ₹2 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ಫ್ರೀಡಂ ಪಾರ್ಕ್ ಅನ್ನು ನವೀಕರಿಸಿದೆ. ಈ ಸಮಯದಲ್ಲಿ ಖಾಲಿ ಇದ್ದ ಸ್ಥಳದಲ್ಲಿ ಆಂಫಿ ಥಿಯೇಟರ್, ಹೊರ ಸಭಾಂಗಣ ಹಾಗೂ ಗಾರ್ಡನ್ ಅನ್ನು ಹೊಸದಾಗಿ ನಿರ್ಮಿಸಲಾಗಿತ್ತು. ಆದರೆ, ಕಳಪೆ ಕಾಮಗಾರಿಯಿಂದ ಎಲ್ಲವೂ ಸಂಪೂರ್ಣ ಹಾಳಾಗಿದೆ. ಜತೆಗೆ, ಪಾರ್ಕ್ ಒಳಗಿರುವ ಹಳೆಯ ಜೈಲು ಕುಸಿಯುವ ಹಂತದಲ್ಲಿದೆ.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ತಾಂತ್ರಿಕ ದೋಷದಿಂದ ನೇರಳೆ ಮಾರ್ಗದ ಮೆಟ್ರೋ ಸಂಚಾರ ವ್ಯತ್ಯಯ: ನಿಲ್ದಾಣಗಳಲ್ಲಿ ಜನಸಂದಣಿ
ಪಾರ್ಕ್ ನವೀಕರಿಸಲು ಬಿಬಿಎಂಪಿ ₹8 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. ಆದರೀಗ, ನವೀಕರಣಕ್ಕೆ ₹5 ಕೋಟಿ ಬಜೆಟ್ ಇದೆ. ಈ ಹಿನ್ನೆಲೆ, ಆಂಫಿಥಿಯೇಟರ್ ಒಳಗೆ ಹವಾನಿಯಂತ್ರಣ ಮತ್ತು ಅಕೌಸ್ಟಿಕ್ಸ್ ಯೋಜನೆಗಳನ್ನು ಬಿಬಿಎಂಪಿ ಕೈಬಿಟ್ಟಿದೆ ಎನ್ನಲಾಗಿದೆ.
60 ಆಸನಗಳ ಆಂಫಿಥಿಯೇಟರ್ ಅನ್ನು ನವೀಕರಿಸುವ ಯೋಜನೆಯನ್ನು ಪಾಲಿಕೆ ಕೈಬಿಟ್ಟಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಪ್ರಸ್ತುತ, ಬಿಬಿಎಂಪಿಯು ಪ್ರವೇಶ ಶುಲ್ಕವಿಲ್ಲದೆ ಫ್ರೀಡಂ ಪಾರ್ಕ್ ಒಳಗೆ ಪ್ರವಾಸಿಗರಿಗೆ ಅವಕಾಶ ನೀಡುತ್ತಿದೆ.