ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಾಲಾ ಸಂಸ್ಥೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬರುವುದು ಮುಂದುವರೆದಿದೆ. ಇದೀಗ ಮತ್ತೆ ಬೆಂಗಳೂರಿನ ಕೇಂದ್ರೀಯ ವಿದ್ಯಾಲಯ ಭಾರತೀಯ ವಿದ್ಯಾಸಂಸ್ಥೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Sahukarisrinuvasarao65@gmail.com ಎಂಬ ಇ-ಮೇಲ್ ಮೂಲಕ ಕೇಂದ್ರೀಯ ವಿದ್ಯಾಲಯ ಭಾರತೀಯ ವಿದ್ಯಾಸಂಸ್ಥೆಗೆ ಬಾಂಬ್ ಬೆದರಿಕೆ ಬಂದಿದೆ. ಸದ್ಯ ಪೊಲೀಸ್ ಹಾಗು ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದ್ದಾರೆ.
ನಗರದ ಕೇಂದ್ರೀಯ ವಿದ್ಯಾಲಯ ಭಾರತೀಯ ವಿದ್ಯಾಸಂಸ್ಥೆಯ ಒಳಗೆ ಬಾಂಬ್ ಇಟ್ಟಿದ್ದೇವೆ. ಬೆಳಗ್ಗೆ 10.20ಕ್ಕೆ ಬ್ಲಾಸ್ಟ್ ಆಗುತ್ತೆ ಎಂದು ಇ-ಮೇಲ್ನಲ್ಲಿ ಬೆದರಿಕೆ ಸಂದೇಶ ಕಳಿಸಿದ್ದಾರೆ.
ಶಾಲಾ ಆಡಳಿತ ಮಂಡಳಿ ಮೇಲ್ ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಶಾಲೆಗೆ ಬಂದ ಪೊಲೀಸ್ ಹಾಗು ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಹೇಳಿದ್ದಾರೆ.
ಸದ್ಯ ಕೇಂದ್ರೀಯ ವಿದ್ಯಾಲಯ ಪ್ರಿನ್ಸಿಪಾಲ್ ಅಮೃತಬಾಲ ಅವರು ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳು
2023ರ ಡಿಸೆಂಬರ್ನಲ್ಲಿ ಇದೇ ರೀತಿ ಬೆಂಗಳೂರಿನ 60 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶವನ್ನು ಕೆಲ ಕಿಡಿಗೇಡಿಗಳು ಕಳಿಸಿ ಭಯದ ವಾತಾವರಣ ಸೃಷ್ಟಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಎಂಟಿಸಿ ಬಸ್ ಢಿಕ್ಕಿ; ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೃತ್ಯು; ಚಾಲಕನ ಬಂಧನ
ಇ ಮೇಲ್ನಲ್ಲಿ ಶಾಲಾ ಕ್ರೀಡಾಂಗಣ, ಆವರಣದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಬರೆಯಲಾಗಿತ್ತು. ಇದು ಭಾರೀ ಸುದ್ದಿ ಮಾಡಿತ್ತು. ಇದೀಗ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಇಟ್ಟಿರುವುದಾಗಿ ಇಮೇಲ್ ಮೂಲಕ ಬೆದರಿಕೆಯೊಡ್ಡಿದ್ದಾರೆ.