ಕಾವೇರಿ 5ನೇ ಹಂತದ ಕಾಮಗಾರಿ ಕೈಗೊಂಡ ಹಿನ್ನೆಲೆ, ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಇದೀಗ ನೀರು ಪೂರೈಕೆ ಸಹಜ ಸ್ಥಿತಿಗೆ ಮರಳಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ಕಾವೇರಿ 5ನೇ ಹಂತದ ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ಗುರುವಾರ ಇಡೀ ನಗರಕ್ಕೆ ಕಾವೇರಿ ನೀರಿನ ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಇದರಿಂದ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಶುಕ್ರವಾರ ಮಧ್ಯಾಹ್ನದ ವೇಳೆಗೆ ನೀರಿನ ಪೂರೈಕೆ ಸಹಜ ಸ್ಥಿತಿಗೆ ಮರಳಿದೆ ಎಂದು ಜಲಮಂಡಳಿ ತಿಳಿಸಿದೆ.
220ಕೆವಿ ವಿದ್ಯುತ್ ಸರಬರಾಜು ಪಂಪಿಂಗ್ ಉಪಕೇಂದ್ರಕ್ಕೆ ವಿದ್ಯುತ್ ವೈರಿಂಗ್ ಅನ್ನು ಕೈಗೆತ್ತಿಕೊಂಡ ಬಿಡಬ್ಲೂಎಸ್ಎಸ್ಬಿ, 775 ಎಮ್ಎಲ್ಡಿ ನೀರನ್ನು ಪೂರೈಸುವ ಕಾವೇರಿ-ಹಂತ 5ರ ಪೂರ್ವ ನಿಯೋಜನೆ ಮತ್ತು ಕಾರ್ಯಾರಂಭದ ಕೆಲಸವನ್ನು ಪೂರ್ಣಗೊಳಿಸಿದೆ. ಕಾವೇರಿ 5ನೇ ಹಂತ ಜುಲೈನಲ್ಲಿ ಕಾರ್ಯಾರಂಭ ಮಾಡಲಿದೆ.
“ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಕಾಮಗಾರಿಗಳಲ್ಲದೆ, ವಾಜರಹಳ್ಳಿ, ವಸಂತಪುರ ಮತ್ತು ಕೊತ್ತನೂರು ದಿನ್ನೆ ಪ್ರದೇಶದಲ್ಲಿ ಬಲ್ಕ್ ಫ್ಲೋ ಮೀಟರ್ ಅಳವಡಿಕೆ, ಲಕ್ಕಸಂದ್ರ ಮೆಟ್ರೊ ನಿಲ್ದಾಣದ ಬಳಿ ದೊಡ್ಡ ನೀರಿನ ಪೈಪ್ಗಳಲ್ಲಿ ಸೋರಿಕೆ ತಡೆಯುವ ಕೆಲಸ, ಬಿಎಂಆರ್ಸಿಎಲ್ನ ಮಾರತ್ತಹಳ್ಳಿ ಸೇತುವೆ ಬಳಿ ದೊಡ್ಡ ಪೈಪ್ಗಳನ್ನು ಜೋಡಿಸುವ ಕಾರ್ಯವನ್ನು ಜೂನ್ 6 ಮತ್ತು 7ರಂದು ನಡೆಸಲಾಗಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವ್ಯಕ್ತಿಯ ಹತ್ಯೆ; ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಎಸೆದು ಕ್ರೌರ್ಯ
ಕಾಮಗಾರಿ ಹಿನ್ನೆಲೆಯಲ್ಲಿ ಕಾವೇರಿ 1, 2, ಮತ್ತು 3ನೇ ಹಂತದ ನೀರು ಸರಬರಾಜು ಘಟಕವನ್ನು 12 ಗಂಟೆ ಕಾವೇರಿ 4ನೇ ಹಂತ, 1ನೇ, 2ನೇ ಘಟ್ಟಗಳ ನೀರು ಸರಬರಾಜು ಘಟಕಗಳನ್ನು 4 ಗಂಟೆ ಕಾಲ ಸ್ಥಗಿತಗೊಳಿಸಲಾಗಿತ್ತು.
ಇದೀಗ, ಕಾಮಗಾರಿ ಪೂರ್ಣಗೊಂಡಿದ್ದು, ಶನಿವಾರದಿಂದ ನೀರು ಪೂರೈಕೆ ಸಾಮಾನ್ಯವಾಗಿರಲಿದೆ. ಕಾವೇರಿ 5ನೇ ಹಂತ ಜುಲೈನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.