ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಹುಕ್ಕಾ ಬಾರ್ಗಳ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಆದರೂ ನಗರದ ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಹುಕ್ಕಾ ಬಾರ್ ನಡೆಸಲಾಗುತ್ತಿತ್ತು. ಈ ಬಗ್ಗೆ ಸೂಕ್ತ ಮಾಹಿತಿ ಆಧರಿಸಿದ ಸಿಸಿಬಿ ಪೊಲೀಸರು ಬೆಂಗಳೂರಿನ ಕೆಲವೆಡೆ ಮಂಗಳವಾರ ದಾಳಿ ನಡೆಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್, ಹೆಚ್ಎಎಲ್ ಹಾಗೂ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಸಿಸಿಬಿ ದಾಳಿ ವೇಳೆ ಏಳು ಜನರನ್ನು ಬಂಧಿಸಲಾಗಿದ್ದು, ಬರೋಬ್ಬರಿ ₹12.5 ಲಕ್ಷ ಮೌಲ್ಯದ 710 ಹುಕ್ಕಾ ಫ್ಲೇವರ್, 36 ಹುಕ್ಕಾ ಪ್ಯಾಕೇಟ್, 28 ಬಾಕ್ಸ್ ಫಾಯಿಲ್ ಪೇಪರ್, 19 ಪಿಲ್ಟರ್ಗಳು ಜತೆಗೆ 25 ಹುಕ್ಕಾ ಪೈಪ್ಗಳನ್ನು ಸಿಸಿಬಿ ಸೀಜ್ ಮಾಡಿದೆ.
ಹುಕ್ಕಾ ಬಾರ್ ನಿಷೇಧ
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕದಲ್ಲಿ ತಕ್ಷಣದಿಂದ ಹುಕ್ಕಾ ಬಾರ್‌ಗಳನ್ನು ನಿಷೇಧಿಸುವ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ.ಪದ್ಮ ಅಧಿಸೂಚನೆ ಹೊರಡಿಸಿದ್ದರು.
ಸಂವಿಧಾನದ 47ನೇ ವಿಧಿ ಅನ್ವಯ ರಾಜ್ಯ ಸರ್ಕಾರಕ್ಕೆ ಲಭ್ಯವಿರುವ ಅಧಿಕಾರ ಬಳಸಿ, ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಎಲ್ಲ ಬಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಸಂಗ್ರಹಣೆ, ಜಾಹೀರಾತು, ಸೇವನೆಗೆ ಪ್ರಚೋದನೆ ಹಾಗೂ ವ್ಯಾಪಾರವನ್ನು ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿತ್ತು.
ಕರ್ನಾಟಕದಲ್ಲಿ ಹುಕ್ಕಾ ನಿಷೇಧ ಮಾಡಿದರೂ ಸುಮಾರು 20 ಹುಕ್ಕಾ ಬಾರ್ಗಳು ಅನಧಿಕೃತವಾಗಿ ನಡೀತಾ ಇತ್ತು. ಎಲ್ಲೆಲ್ಲಿ ಅನಧಿಕೃತವಾಗಿ ಹುಕ್ಕಾ ಬಾರ್ ನಡೆಸಲಾಗುತ್ತಿದೆ. ಅಂತಹ ಹುಕ್ಕಾ ಕೇಂದ್ರಗಳನ್ನು ಪತ್ತೆ ಮಾಡಿ ಅಧಿಕಾರಿಗಳು ಬಂದ್ ಮಾಡುತ್ತಿದ್ದಾರೆ.
ಹುಕ್ಕಾ, ತಂಬಾಕು ಅಥವಾ ನಿಕೋಟಿನ್ ಒಳಗೊಂಡ ನಿಕೋಟಿನ್ ರಹಿತ ತಂಬಾಕು ರಹಿತ ಸ್ವಾಧಭರಿತ, ಸ್ವಾಧರಹಿತ ಮೇಲಾಸಿಸ್ , ಶಿಶಾ ಹಾಗೂ ಇದೇ ಮಾದರಿಯ ಇನಿತ್ತರ ಹೆಸರುಗಳಿಂದ ಕರೆಯುವ ಹುಕ್ಕಾ ಉತ್ಪನ್ನ ಮಾರಾಟವನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾತೃಭಾಷೆ ಕಡ್ಡಾಯವಾಗಬೇಕೆಂಬ ಕುವೆಂಪು ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ: ನ್ಯಾ. ಎನ್ ವಿ ಅಂಜಾರಿಯ
ಈ ಆದೇಶ ಉಲ್ಲಂಘನೆ ಮಾಡಿದವರ ವಿರುದ್ಧ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (ಕೋಟ್ಪಾ) ಕಾಯ್ದೆ–2003, ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆ–2015, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006, ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ನಿಯಮ–2015 ಮತ್ತು ಭಾರತೀಯ ದಂಡಸಂಹಿತೆ ಹಾಗೂ ಅಗ್ನಿ ನಿಯಂತ್ರಣ ಮತ್ತು ಸುರಕ್ಷತಾ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ವಿ. ಪದ್ಮ ಆದೇಶದಲ್ಲಿ ಸೂಚಿಸಿದ್ದಾರೆ.