ಬೆಂಗಳೂರಿನ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 2023 ರಿಂದ 2024ರ ಫೆ.27 ರವರೆಗೆ (ಆರು ತಿಂಗಳು) ವ್ಹೀಲಿಂಗ್ ಮಾಡಿದ 46 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 34 ಮಂದಿ ವಯಸ್ಕರಾಗಿದ್ದು, 12 ಮಂದಿ ಅಪ್ರಾಪ್ತರಾಗಿದ್ದಾರೆ.
“ವ್ಹೀಲಿಂಗ್ ಮಾಡಿ ವಾಹನ ಚಾಲನೆ ಮಾಡಿದ ಪ್ರಕರಣಗಳಲ್ಲಿ ಭಾಗಿಯಾದ ವಾಹನ ಸವಾರರ ನೊಂದಣಿ ಪ್ರಮಾಣ ಪತ್ರಗಳನ್ನು ಜಪ್ತಿ ಮಾಡಲಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಅಮಾನತು ಪಡಿಸಲು ಕಳುಹಿಸಿಕೊಡಲಾಗಿದೆ” ಎಂದು ಬೆಂಗಳೂರಿನ ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಹೇಳಿದ್ದಾರೆ.
“ಸೆಪ್ಟೆಂಬರ್ 2023 ರಿಂದ 2024ರ ಫೆ.27 ರವರೆಗೆ ಒಟ್ಟು 46 ವ್ಹೀಲಿಂಗ್ ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಈ ಪೈಕಿ 34 ಮಂದಿ ವಯಸ್ಕರಾಗಿದ್ದು, ಉಳಿದ 12 ಮಂದಿ ಅಪ್ರಾಪ್ತ ಬಾಲಕರಾಗಿದ್ದಾರೆ. ಇಲ್ಲಿಯವರೆಗೆ 30 ವಾಹನ ನೊಂದಣಿ ಪ್ರಮಾಣ ಪತ್ರಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಅಮಾನತು ಮಾಡಲು ಕಳುಹಿಸಿ ಕೊಡಲಾಗಿದೆ. ಈ ಪೈಕಿ 8 ನೊಂದಣಿ ಪ್ರಮಾಣ ಪತ್ರಗಳನ್ನು 3 ತಿಂಗಳ ಅವಧಿಗೆ ಅಮಾನತು ಪಡಿಸಲಾಗಿದೆ. ಉಳಿದ 16 ನೊಂದಣಿ ಪತ್ರಗಳನ್ನು ಸಹ ಶೀಘ್ರವಾಗಿ ಅಮಾನತು ಪಡಿಸಲು ಸಂಬಂಧಪಟ್ಟ ಆರ್‌ಟಿಓ ಕಚೇರಿಗಳಿಗೆ ಪತ್ರ ವ್ಯವಹಾರ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
“ಒಟ್ಟು 46 ವ್ಹೀಲಿಂಗ್ ಪ್ರಕರಣಗಳನ್ನು ದಾಖಲು ಮಾಡಿದ್ದು, 28 ಪ್ರಕರಣಗಳಲ್ಲಿ ಕಲಂ 107 ಸಿ.ಆರ್.ಪಿ.ಸಿ. ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಉಳಿದ 18 ಪ್ರಕರಣಗಳ ಮೇಲೂ ಸಹ ಕಲಂ 107 ಸಿ.ಆರ್.ಪಿ.ಸಿ. ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಳ
ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಳವಾಗಿದ್ದು, ಪೊಲೀಸರು ಎಷ್ಟೇ ಕ್ರಮ ಕೈಗೊಂಡರು ಯುವಕರು ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಇದೀಗ, ಬೆಂಗಳೂರು ಸಂಚಾರ ಪೊಲೀಸರು ಕಳೆದ ಹದಿನೈದು ದಿನಗಳಿಂದ ವ್ಹೀಲಿಂಗ್ ಮಾಡುವವರ ವಿರುದ್ದ ಕಾರ್ಯಾಚರಣೆ ನಡೆಸಿ, ಎಫ್‌ಐಆರ್ ದಾಖಲಿಸುತ್ತಿದ್ದಾರೆ.
ಬೆಂಗಳೂರಿನ ಸಂಚಾರ ಪೊಲೀಸರು ನಡೆಸುತ್ತಿರುವ ಈ ವಿಶೇಷ ಕಾರ್ಯಾಚರಣೆಯಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ತನಿಖೆ ನಡೆಸಿ ಪ್ರಕರಣ ದಾಖಲಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವ್ಹೀಲಿಂಗ್ ಮಾಡುವವರ ವಿರುದ್ದ ಕಾರ್ಯಾಚರಣೆಗಿಳಿದ ಪೊಲೀಸರು
ಫೆ.27 ರಂದು ಕೆ.ಆರ್.ಪುರ, ಪುಲಕೇಶಿನಗರ ಹಾಗೂ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ಭಟ್ಟರಹಳ್ಳಿ ಮುಖ್ಯರಸ್ತೆ, ಹೇನ್ಸ್ ರಸ್ತೆ, ಹಾಲ್ ರಸ್ತೆ ಮತ್ತು ಕಬ್ಬನ್ ರಸ್ತೆಯಲ್ಲಿ ವ್ಹಿಲಿಂಗ್ ಮಾಡುತ್ತಿದ್ದ 6 ದ್ವಿಚಕ್ರ ವಾಹನ ಸವಾರರು ಮತ್ತು ವಾಹನಗಳನ್ನು ಕೆ.ಆರ್.ಪುರ, ಪುಲಕೇಶಿನಗರ ಮತ್ತು ಶಿವಾಜಿನಗರ ಸಂಚಾರ ಠಾಣೆಯ ಪೊಲೀಸರು ಪತ್ತೆ ಮಾಡಿ ಜಪ್ತಿ ಮಾಡಿದ್ದಾರೆ.
ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು, “ವ್ಹೀಲಿಂಗ್ ಮಾಡುತ್ತಿದ್ದ ಆರು ದ್ವಿಚಕ್ರ ವಾಹನ ಸವಾರರು ವಯಸ್ಕರಾಗಿದ್ದು, ಸವಾರರ ವಿರುದ್ದ 6 ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ” ಎಂದಿದ್ದಾರೆ.