ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ‘ನಮ್ಮ ಮೆಟ್ರೋ’ದಲ್ಲಿ ಇನ್ನುಮುಂದೆ ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗುವುದು ಎಂದು ನಿಗಮ ತಿಳಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇಷ್ಟುದಿನ ಮೆಟ್ರೋ ಆವರಣದಲ್ಲಿ ಕ್ಯಾಮರಾ ಬಳಕೆ, ಚಿತ್ರೀಕರಣಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಅನುಮತಿಗಾಗಿ ಸಿನಿಮಾ, ಧಾರಾವಾಹಿ ನಿರ್ಮಾಪಕರು ಕಾಯಬೇಕಿತ್ತು. ಆದರೆ, ಇದೀಗ ಬಿಎಂಆರ್‌ಸಿಎಲ್ ಶೂಟಿಂಗ್ ನಡೆಸಲು ಅನುಮತಿ ನೀಡಿದ್ದು, ಇನ್ನುಮುಂದೆ ಮೆಟ್ರೋ ನಿಲ್ದಾಣಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಸಿನಿತಾರೆಯರು ಕಾಣಸಿಗುವ ಸಾಧ್ಯತೆಯಿದೆ.
ದಿನಕ್ಕೆ ನಮ್ಮ ಮೆಟ್ರೋದಲ್ಲಿ 7 ಲಕ್ಷ ಜನ ಪ್ರಯಾಣಿಸುತ್ತಾರೆ. ಮೆಟ್ರೋ ನಿಲ್ದಾಣದಲ್ಲಿ ಸಿನಿಮಾ-ಧಾರಾವಾಹಿ ಚಿತ್ರೀಕರಣ ನಡೆಯುವುದರಿಂದ ಜನರು ನೇರವಾಗಿ ಚಿತ್ರೀಕರಣ ಯಾವ ರೀತಿ ನಡೆಯುತ್ತದೆ ಎಂಬುದನ್ನು ಕಾಣಬಹುದು.
ಈಗಾಗಲೇ ಚೆನ್ನೈ, ದೆಹಲಿ ಮೆಟ್ರೋ ಆವರಣದಲ್ಲಿ ಶೂಟಿಂಗ್‌ಗೆ ಅವಕಾಶ ನೀಡಲಾಗಿದೆ. ಅದರಂತೆ, ಬೆಂಗಳೂರು ಮೆಟ್ರೋ ಕೂಡ ಇದೀಗ ಅನುಮತಿ ನೀಡಿದೆ. ಕೆಲವು ಮಾರ್ಗಸೂಚಿಗಳನ್ನು ನೀಡಿದೆ.
- ಶೂಟಿಂಗ್ ಸ್ಕ್ರಿಪ್ಟ್‌ನ್ನು ಸಲ್ಲಿಸುವುದು ಕಡ್ಡಾಯ, ಪೀಕ್ ಸಮಯದಲ್ಲಿ ಚಿತ್ರೀಕರಣ ಮಾಡುವಂತಿಲ್ಲ.
- ಚಿತ್ರೀಕರಣದ ವೇಳೆ ಮೆಟ್ರೋ ಬಾಗಿಲು ತೆರೆಯಲು ಅನುಮತಿ ಇಲ್ಲ, ಅನುಮತಿ ನೀಡುವ ಸ್ಥಳದಲ್ಲಿ ಮಾತ್ರ ಚಿತ್ರೀಕರಣ ನಡೆಸಬಹುದು. ಶೂಟಿಂಗ್ ಸಮಯದಲ್ಲಿ ಮೆಟ್ರೋ ಸಿಬ್ಬಂದಿ ಹಾಜರಿರುತ್ತಾರೆ.
- ಮೆಟ್ರೋಗೆ ಹಾನಿಯಾದರೆ, ಅಥವಾ ಅವಘಡ ನಡೆದರೆ ಅದಕ್ಕೆ ಚಿತ್ರತಂಡವೇ ಸಂಪೂರ್ಣ ಜವಾಬ್ದಾರಿ, ಚಿತ್ರೀಕರಣದ ತಂಡದಲ್ಲಿರುವ ಮಹಿಳೆಯರ ಸುರಕ್ಷತೆ ಜವಾಬ್ದಾರಿಯೂ ಚಿತ್ರತಂಡದ್ದೇ, ಸೂಕ್ತ ಭದ್ರತೆಗೆ ಹೆಚ್ಚುವರಿ ಸಿಬ್ಬಂದಿ, ಪೊಲಿಸ್ ಗೃಹ ರಕ್ಷಕ ಸಿಬ್ಬಂದಿ ನಿಯೋಜನೆಗೆ ಸೂಚನೆ.
- ರೈಲಿನಲ್ಲಿ ಚಿತ್ರೀಕರಣಕ್ಕೆ ದಿನಕ್ಕೆ ₹6 ಲಕ್ಷ ಶುಲ್ಕ ನಿಗದಿಪಡಿಸಲಾಗಿದ್ದು, ಕನ್ನಡ ಚಿತ್ರಗಳಿಗೆ 25% ರಿಯಾಯಿತಿ ಸಿಗಲಿದೆ.
- ಮೆಟ್ರೋ ನಿಲ್ದಾಣದಲ್ಲಿ ಅಥವಾ ರೈಲಿನ ಮೇಲೆ ಡ್ರೋನ್ ಕ್ಯಾಮೆರಾ ಬಳಸಿ ಚಿತ್ರೀಕರಣ ನಡೆಸಬೇಕಾದರೆ ವಿಶೇಷ ಅನುಮತಿ ಪಡೆಯಬೇಕು, ಇಂತಹ ಶೂಟಿಂಗ್‌ಗೆ 25% ಅಧಿಕ ಶುಲ್ಕ ಪಾವತಿಸಬೇಕು.
- ಮೆಟ್ರೋ ಆವರಣದಲ್ಲಿ ಸಾಕು ಪ್ರಾಣಿಗಳನ್ನು ಶೂಟಿಂಗ್‌ಗೆ ಬಳಸುವುದು, ಡ್ರೈವರ್ ಕ್ಯಾಬಿನ್‌ನಲ್ಲಿ ಚಿತ್ರೀಕರಣ ನಿಷೇಧಿಸಲಾಗಿದೆ.
- ಮೆಟ್ರೋ ಆವರಣದಲ್ಲಿ ಚಿತ್ರೀಕರಣ ಮಾಡಲಾದರೆ, ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸ್ಕ್ರಿಪ್ಟ್ ತೋರಿಸಿ ನಿರಪೇಕ್ಷಣಾ ಪತ್ರ ಪಡೆಯಬೇಕು.
- ಚಿತ್ರೀಕರಣದ ಸಂದರ್ಭದಲ್ಲಿ ಆದಷ್ಟು ಕಡಿಮೆ ಹಾಗೂ ಅಗತ್ಯವಿರುವ ಸಿಬ್ಬಂದಿ ಮಾತ್ರ ಇರಬೇಕು, ಪ್ರಯಾಣಿಕರಿಗೆ ಸಮಸ್ಯೆ ಆಗದ ರೀತಿ ಚಿತ್ರೀಕರಣ ನಡೆಯಬೇಕು.
- ಚಿತ್ರೀಕರಣಕ್ಕೆ 30 ದಿನ ಇರುವಾಗಲೇ ಸಿನಿಮಾ ಅಥವಾ ಸೀರಿಯಲ್ ಸ್ಕ್ರಿಪ್ಟ್ ಜತೆಗೆ ಶೂಟ್ ಮಾಡುವ ಮುನ್ನ ಅಪ್ಲಿಕೇಶನ್ ಹಾಕುವುದು ಕಡ್ಡಾಯ.
- ಯಾವ ಡೇಟ್ ನಲ್ಲಿ ಶೂಟಿಂಗ್ ಮಾಡುತ್ತೇವೆ. ಯಾವ ಲೊಕೇಶನ್ ನಲ್ಲಿ ಮಾಡ್ತೇವೆ ಅಂತ ಉಲ್ಲೇಖ ಮಾಡಬೇಕು.
- ಲಾ ಅಂಡ್ ಅರ್ಡರ್ ಸಮಸ್ಯೆ ಆಗುವ, ಸಮಾಜಕ್ಕೆ ಹಾನಿ ಉಂಟಾಗುವ, ಜನರ ಭಾವನೆಗೆ ಧಕ್ಕೆ ಉಂಟಾಗುವ ಯಾವುದೇ ಸಿನಿಮಾ ಅಥವಾ ಸೀರಿಯಲ್ ಶೂಟಿಂಗ್‌ಗೆ ನಿರ್ಬಂಧ ಹೇರಿದೆ.
ಈ ಸುದ್ದಿ ಓದಿದ್ದೀರಾ? ‘ಬೆಂಗಳೂರು ಕಂಬಳ’ಕ್ಕೆ ಚಾಲನೆ ನೀಡಲಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್
ಇದು ತುಂಬಾ ಒಳ್ಳೆಯ ವಿಚಾರ ಕನ್ನಡ ಚಲನಚಿತ್ರರಂಗ ಇದನ್ನು ಸ್ವಾಗತಿಸುತ್ತದೆ. ಕನ್ನಡಿಗರಿಗೆ 25% ರಿಯಾಯಿತಿ ನೀಡಿರುವುದು ಸಂತಸದ ವಿಷಯ. ಇದರಿಂದ ನಮ್ಮ ಕನ್ನಡ ಚಿತ್ರರಂಗ ಬೆಳೆಯುತ್ತದೆ. ಬೇರೆಬೇರೆ ಭಾಷೆಯ ಚಲನಚಿತ್ರಗಳು ನಮ್ಮ ರಾಜ್ಯದಲ್ಲಿ ಚಿತ್ರೀಕರಣ ಆಗುತ್ತದೆ. ಬೆಂಗಳೂರಿನ ಮೆಟ್ರೋಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿದ್ದು ಸಂತಸದ ವಿಷಯ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಪ್ರಮೀಳಾ ಜೋಷಾಯ್ ಹೇಳಿದರು.