ಡೆಲಿವರಿ ಬಾಯ್ ಮೇಲೆ ಬಿಯರ್ ಬಾಟಲ್ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಓರ್ವ ಲಿಂಗತ್ವ ಅಲ್ಪಸಂಖ್ಯಾತ ಸೇರಿದಂತೆ ನಾಲ್ವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಸಂಕೇತ್ ಹಲ್ಲೆಗೊಳಗಾದವರು. ದಾಮಿನಿ, ಮರಿಯನ್, ನಾಗೇಂದ್ರ ಹಾಗೂ ಕಿರಣ್ ಬಂಧಿತರು. ಮೊಬೈಲ್ ಫೋನ್‌ಗಳು ಅದಲು-ಬದಲಾದ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರು ಶಾಮೀಲಾಗಿ ಡೆಲಿವರಿ ಬಾಯ್ ಸಂಕೇತ್‌ನ ಮೇಲೆ ಹಲ್ಲೆ ನಡೆಸಿದ್ದಾರೆ.
ಏಪ್ರಿಲ್ 23 ರಂದು, ಕಂಠೀರವ ಸ್ಟುಡಿಯೋ ಬಳಿ ಸಂಕೇತ್ ಫುಡ್ ಡೆಲಿವರಿ ಮಾಡುತ್ತಿದ್ದರು. ಆ ಸಮಯದಲ್ಲಿ ಆಕಸ್ಮಿಕವಾಗಿ ದಾಮಿನಿ ಮತ್ತು ಸಂಕೇತ್ ಅವರ ಫೋನ್‌ಗಳು ಅದಲು-ಬದಲಾಗಿದ್ದವು. ಅದರ ಅರಿವಾಗದೇ ಇಬ್ಬರೂ ಆ ಸ್ಥಳದಿಂದ ತೆರಳಿದ್ದರು.
ಬಳಿಕ, ಫೋನ್‌ಗಳು ‘ಎಕ್ಸ್‌ಚೇಂಜ್’ ಆಗಿರುವ ಬಗ್ಗೆ ಅರಿತ ದಾಮಿನಿ ತಮ್ಮ ಫೋನ್ ವಾಪಸ್ ಕೊಡುವಂತೆ ಸಂಕೇತ್‌ಗೆ ಮನವಿ ಮಾಡಿದ್ದರು. ಕೆಲಸಗಳಲ್ಲಿ ನಿರತರಾಗಿದ್ದ ಸಂಕೇತ್, ಕೆಲ ಸಮಯದ ನಂತರ ಹಿಂದಿರುಗಿಸುವುದಾಗಿ ಹೇಳಿದ್ದರು. ಬಳಿಕ, ದಾಮಿನಿ ಫೋನ್‌ಗಾಗಿ ಮತ್ತೆ ಸಂಪರ್ಕ ಮಾಡಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೊಸ ಕಾರಿನ ಮೇಲೆ ಬಿದ್ದ ದೊಡ್ಡ ಮರ; ಕಾರು ಸಂಪೂರ್ಣ ಜಖಂ
ಸಂಕೇತ್‌ನ ಪ್ರತಿಕ್ರಿಯೆಯಿಂದ ಕೋಪಗೊಂಡಿದ್ದ ದಾಮಿನಿ ಮತ್ತು ಇತರರು ಆತನಿಗಾಗಿ ಹುಡುಕಾಟ ಪ್ರಾರಂಭಿಸಿದ್ದರು. ಏಪ್ರಿಲ್ 28ರಂದು ನಾಗರಭಾವಿ ಸರ್ಕಲ್ ಬಳಿ ಸಂಕೇತ್‌ನನ್ನು ಕಂಡು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ.
ಸಂತ್ರಸ್ತ ಸಂಕೇತ್ ಈ ಬಗ್ಗೆ ನಗರದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಸದ್ಯ ಆರೋಪಿಗಳನ್ನು ಬಂಧಿಸಿದ್ದಾರೆ.