ಮನೆ ಮಾರಾಟ ಮಾಡಲು ಹೊರಟಿರುವ ಮಹಿಳೆಯೊಬ್ಬರ ಆಸ್ತಿ ದಾಖಲೆ ಪತ್ರಗಳನ್ನು ನಕಲು ಮಾಡಿ ಬೆಂಗಳೂರಿನ ಮೂರು ಬ್ಯಾಂಕ್‌ಗಳಲ್ಲಿ ಬರೋಬ್ಬರಿ ₹3 ಕೋಟಿ ಸಾಲ ಪಡೆದಿದ್ದ ಐವರು ಆರೋಪಿಗಳನ್ನು ಸದ್ಯ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ ಪೊಲೀಸರು) ಬಂಧಿಸಿದ್ದಾರೆ.
ಅಂಬುಜಾಕ್ಷಿ ನಾಗರಕಟ್ಟಿ (75) ಮೋಸ ಹೋದವರು. ಇವರು ಬೆಂಗಳೂರಿನ ಜೆ.ಪಿ.ನಗರದ 6ನೇ ಹಂತದ ನಿವಾಸಿ. ಇವರು ತಮ್ಮ 1,350 ಚದರ ಅಡಿಯ ನಿವೇಶನವನ್ನು ಮಾರಾಟ ಮಾಡಿ ತಮ್ಮ ಮಗನ ಜತೆಗೆ ವಿದೇಶದಲ್ಲಿ ವಾಸ ಮಾಡಲು ನಿರ್ಧಾರ ಮಾಡಿದ್ದರು.
ಈ ಹಿನ್ನೆಲೆ, ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ತಮ್ಮ ನಿವಾಸವನ್ನು ಮಾರಾಟ ಮಾಡಲು ನಿರ್ಧಾರ ಮಾಡಿದ್ದರು. ಹಾಗಾಗಿ, ಈ ಬಗ್ಗೆ ತಮ್ಮ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು.
ಅವರ ನೆರೆಹೊರೆಯವರ ಪೈಕಿ ಮಂಜುನಾಥ್ ಎಂಬುವವರು ತಮ್ಮ ಸ್ನೇಹಿತ್ ಭಾಸ್ಕರ್ ಕೃಷ್ಣ ಎಂಬುವವರು ಮನೆ ಖರೀದಿ ಮಾಡುತ್ತಾರೆ ಎಂದು ಪರಿಚಯ ಮಾಡಿಕೊಟ್ಟಿದ್ದಾರೆ.
ಮನೆ ಖರೀದಿ ವಿಚಾರವಾಗಿ ಕೃಷ್ಣ ಅಂಬುಜಾಕ್ಷಿ ಅವರನ್ನು ಭೇಟಿ ಮಾಡಿ ಮನೆ ಖರಿದೀಸುತ್ತೇನೆ ಎಂದು ತಿಳಿಸಿ, ಮುಂಗಡವಾಗಿ ₹10 ಸಾವಿರ ಹಣ ನೀಡಿದ್ದರು. ಬಳಿಕ, ಕಾನೂನು ಅನುಮತಿ ಪಡೆಯಬೇಕು ಎಂದು ಮಹಿಳೆಯಿಂದ ಆಸ್ತಿ ದಾಖಲೆ ಪತ್ರಗಳ ನಕಲು ಪ್ರತಿಗಳನ್ನು ತೆಗೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ಎಕ್ಸ್‌ನಲ್ಲಿ ಅಭಿಯಾನ ಆರಂಭ
ಮತ್ತೆ ಕೆಲವು ದಿನಗಳ ಬಳಿಕ, ಕೃಷ್ಣ ತನ್ನ ಸ್ನೇಹಿತ್ ಮಹೇಶ ಹಾಗೂ ಇತರ ಸ್ನೇಹಿತರೊಂದಿಗೆ ಬ್ಯಾಂಕ್ ಅಧಿಕಾರಿಗಳಂತೆ ಅಂಬುಜಾಕ್ಷಿಯವರ ಮನೆಗೆ ತೆರಳಿದ್ದಾರೆ.
ಈ ವೇಳೆ, ಕೃಷ್ಣ ತನಗೆ ಸಾಲ ಬೇಕಿದ್ದು, ಹಾಗಾಗಿ ಅಂಬುಜಾಕ್ಷಿ ಅವರ ಸಹಿ ಬೇಕು ಎಂದು ತಿಳಿಸಿದ್ದಾನೆ. ಈ ಹಿಂದೆ ಬ್ಯಾಂಕ್ ಉದ್ಯೋಗಿಯಾಗಿದ್ದ ಅಂಬುಜಾಕ್ಷಿ ಆತನ ಉದ್ದೇಶವನ್ನು ಅರಿತು ಪ್ರಶ್ನೆ ಮಾಡಿದ್ದಾಳೆ. ಬಳಿಕ, ತನ್ನ ಆಸ್ತಿಯನ್ನು ಆತನಿಗೆ ಮಾರಲು ನಿರಾಕರಿಸಿದ್ದಾಳೆ.
ನಂತರ ಅಂಬುಜಾಕ್ಷಿ ಅವರ ಹೆಸರಿನಲ್ಲಿ ಈಗಾಗಲೇ ಮೂರು ಬ್ಯಾಂಕ್‌ಗಳಲ್ಲಿ ₹3 ಕೋಟಿ ಸಾಲ ಪಡೆದಿರುವ ಬಗ್ಗೆ ತಿಳಿದುಬಂದಿದೆ. ಆರೋಪಿಗಳು ಬ್ಯಾಂಕ್‌ಗಳಿಂದಲೂ ಹಣ ಡ್ರಾ ಮಾಡಿಕೊಂಡಿದ್ದರು.
ಅಂಬುಜಾಕ್ಷಿ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದು, ಮತ್ತಿಬ್ಬರು ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.