ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಗೆ ಹತ್ತಾರು ಊರುಗಳಿಂದ ತೇರು ಬರುತ್ತವೆ. ಹೀಲಲಿಗೆ ಗ್ರಾಮದಿಂದ ಜಾತ್ರೆಗೆ ಬರುತ್ತಿದ್ದ ಸುಮಾರು 120 ಅಡಿ ಉದ್ದದ ತೇರು ನೆಲಕ್ಕುರುಳಿದ ಘಟನೆ ನಡೆದಿದೆ.
ಆನೇಕಲ್ ತಾಲೂಕಿನ ಹೀಲಲಿಗೆಯಿಂದ ಹುಸ್ಕೂರಿಗೆ ಸುಮಾರು 70 ಎತ್ತುಗಳು ಹಾಗೂ ಟ್ರ್ಯಾಕ್ಟರ್ ಮೂಲಕ ತೇರನ್ನು ಎಳೆದುಕೊಂಡು ಹೋಗಲಾಗುತ್ತಿತ್ತು. ತೇರು ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿನಲ್ಲಿ ಎಡಭಾಗಕ್ಕೆ ವಾಲಿಕೊಂಡು ನಿಧಾನವಾಗಿ ತೇರು ನೆಲಕ್ಕೆ ಅಪ್ಪಳಿಸಿದೆ. ರಥವು ಹೆಚ್ಚು ಎತ್ತರದಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ತೇರು ಕುಸಿದು ಬಿದ್ದಿದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಸಾವುನೋವು ಸಂಭವಿಸಿಲ್ಲ.
ಇನ್ನು ಈ ಘಟನೆ ಇದೇ ಮೊದಲಲ್ಲ, 2018ರಲ್ಲಿಯೂ ಮದ್ದೂರಮ್ಮ ಜಾತ್ರೆಯಲ್ಲಿ ತೇರು ಕುಸಿದು ಬಿದ್ದಿತ್ತು.
Huskuru Maduramma Temple Ratha fell down #bengaluru pic.twitter.com/4NpfUwcKlI
— Kamran (@CitizenKamran) April 6, 2024
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಿಂದ 5 ಕಿ.ಮೀ. ದೂರದಲ್ಲಿರುವ ಹುಸ್ಕೂರು ಮದ್ದೂರಮ್ಮನ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಈ ದೇವಾಲಯವನ್ನು ಚೋಳ ರಾಜರು ನಿರ್ಮಿಸಿದ್ದಾರೆ ಎಂಬ ಇತಿಹಾಸವಿದೆ.
ಈ ಸುದ್ದಿ ಓದಿದ್ದೀರಾ? ಏ.6 ರಿಂದ ಏ.10 ರವರೆಗೆ ತಾಪಮಾನದಲ್ಲಿ ಏರಿಕೆ ಸಾಧ್ಯತೆ: ಜನರಿಗೆ ಸಲಹೆ ನೀಡಿದ ಹವಾಮಾನ ಇಲಾಖೆ
ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮದ್ದೂರಮ್ಮನ ಜಾತ್ರೆ ನಡೆಯುತ್ತದೆ. ಹುಸ್ಕೂರಿನ ಮದ್ದೂರಮ್ಮ ದೇವಸ್ಥಾನಕ್ಕೆ ಸುತ್ತಲಿನ 10ಕ್ಕೂ ಅಧಿಕ ಗ್ರಾಮಗಳಿಂದ ತೇರನ್ನು ತೆಗೆದುಕೊಂಡು ಬರಲಾಗುತ್ತದೆ. ಇಲ್ಲಿನ ಗ್ರಾಮೀಣ ಭಾಗದ ಜನರು ಅತಿ ಎತ್ತರದ ತೇರುಗಳನ್ನು ನಿರ್ಮಿಸಿಕೊಂಡು ಬಂದು ಮದ್ದೂರಮ್ಮನಿಗೆ ಅರ್ಪಣೆ ಮಾಡುತ್ತಿದ್ದರು.