ರಾಜ್ಯ ರಾಜಧಾನಿ ಬೆಂಗಳೂರು ಅಭಿವೃದ್ಧಿ ಹೊಂದುತ್ತಿರುವ ನಗರ. ನಗರದಲ್ಲಿ ಒಂದು ಸ್ವಂತ ಮನೆ ಮಾಡುವುದು ಹಲವು ಜನರ ಕನಸಾಗಿರುತ್ತದೆ. ಆದರೆ, ಇಲ್ಲಿ ಮನೆ ಕೊಂಡುಕೊಳ್ಳೋಕೆ ಜೀವಮಾನದ ಸಂಪಾದನೆ ವ್ಯಯಿಸಬೇಕಾಗುತ್ತದೆ. ಇನ್ನು ಕೆಲವು ಪ್ರತಿಷ್ಟಿತ ಏರಿಯಾಗಳಲ್ಲಿಯಂತೂ ಕೊಂಡುಕೊಳ್ಳುವುದು ಕೆಲವರಿಗೆ ಕನಸಿನ ಮಾತಾಗಿದೆ. ಇದೀಗ, ದುಬಾರಿ ಇರುವ ಏರಿಯಾಗಳ ಪೈಕಿ ಕೋರಮಂಗಲದ ಮೂರನೇ ಬ್ಲಾಕ್ ಕೂಡ ಒಂದಾಗಿದೆ.
ಕೋರಮಂಗಲವನ್ನು ಬಿಲಿಯನೇರ್ ಸ್ಟ್ರೀಟ್ ಎಂದೂ ಹೇಳುವುದುಂಟು. ಸಾವಿರಾರು ಕೋಟಿ ರೂಪಾಯಿ ಒಡೆಯರಿರುವ ಈ ಏರಿಯಾದಲ್ಲಿ ಇತ್ತಿಚೆಗೆ, 10,000 ಚದರಡಿಯ ನಿವೇಶನವೊಂದಕ್ಕೆ ಕ್ವೆಸ್ ಕಾರ್ಪ್ ಕಂಪನಿಯ ಸಂಸ್ಥಾಪಕ ಅಜಿತ್ ಅಬ್ರಹಾಂ ಐಸಾಕ್ ಎಂಬುವವರು ಬರೋಬ್ಬರಿ ₹67.5 ಕೋಟಿಗೆ ಈ ಪ್ರಾಪರ್ಟಿ ಖರೀದಿಸಿದ್ದಾರೆ. ಇದು ಪ್ರತಿ ಚದರ ಅಡಿ ಬೆಲೆ ₹70,300 ಆಗಿದ್ದು, ಬೆಂಗಳೂರು ಆಸ್ತಿ ಮಾರುಕಟ್ಟೆಗೆ ಹೊಸ ಮಾನದಂಡವನ್ನು ನೀಡಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಇದು ಅತ್ಯಂತ ದುಬಾರಿ ಆಸ್ತಿ ಎನಿಸಿದೆ.
ಟಿಇಎಸ್ ಮೋಟಾರ್ಸ್ ₹65 ಕೋಟಿ ಕೊಟ್ಟು ಖರೀದಿಸಿದ ನಿವೇಶನ 9,488 ಚದರಡಿ ವಿಸ್ತೀರ್ಣದ್ದಾಗಿದೆ. ಚದರಡಿಗೆ ₹68,508 ನಂತೆ ಇದು ಬೆಲೆ ಪಡೆದಿದೆ. ಈ ಏರಿಯಾದಲ್ಲಿ ಭೂಮಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ದೊಡ್ಡ ದೊಡ್ಡ ಉದ್ಯಮಿಗಳು ಇಲ್ಲಿ ಪ್ರಾಪರ್ಟಿ ಪಡೆಯಲು ಮುಂದಾಗುತ್ತಾರೆ.
ಕಳೆದ ವಾರ ಈ ಆಸ್ತಿಯ ಒಪ್ಪಂದ ಮಾಡಲಾಯಿತು. ಈ ಆಸ್ತಿ ಅರವಿಂದ್ ರೆಡ್ಡಿ ಮತ್ತು ಗೀತಾ ರೆಡ್ಡಿ ಎಂಬುವವರಿಗೆ ಸೇರಿತ್ತು.
ಕಳೆದ ದಶಕದಲ್ಲಿ ಭಾರತದ ಪ್ರಮುಖ ವ್ಯಾಪಾರ ಸೇವಾ ಪೂರೈಕೆದಾರರಾಗಿ ಕ್ವೆಸ್ ಕಾರ್ಪ್ ತ್ವರಿತ ಬೆಳವಣಿಗೆಯ ಕಾಣುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕ್ವೆಸ್ ಕಾರ್ಪ್ ಅನ್ನು 2007ರಲ್ಲಿ ಸ್ಥಾಪಿಸಲಾಯಿತು. ಈ ಕಂಪನಿಯೂ ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಕ್ವೆಸ್ ಇಂದು ಭಾರತ, ಆಗ್ನೇಯ ಏಷ್ಯಾ ಮತ್ತು ಉತ್ತರ ಅಮೇರಿಕಾದಲ್ಲಿ 644 ಸ್ಥಳಗಳಲ್ಲಿ ಅಸ್ತಿತ್ವ ಹೊಂದಿದೆ.
ಬೆಂಗಳೂರು ನಗರದಲ್ಲಿ ಕೋರಮಂಗಲ ಉದ್ಯಮಶೀಲತೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕೇಂದ್ರವಾಗಿ ಹೊರಹೊಮ್ಮಿದೆ. ಅಲ್ಲದೇ, ವ್ಯಾಪಾರ ಕೇಂದ್ರಗಳಿಗೆ ಪ್ರಮುಖ ಸ್ಥಳವಾಗಿದೆ. ಸ್ಟಾರ್ಟ್‌ಅಪ್‌ಗಳು ಮತ್ತು ಸ್ವಯಂ-ನಿರ್ಮಿತ ಬಿಲಿಯನೇರ್‌ಗಳಿಗೆ ಸಮಾನ ಬೇಡಿಕೆಯ ನೆರೆಹೊರೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ; ನ್ಯಾಯಕ್ಕಾಗಿ ರಾಷ್ಟ್ರಪತಿಗೆ ಕರವೇ ಮನವಿ
ವಾಸ್ತವವಾಗಿ, ಕೋರಮಂಗಲದ ಮೂರನೇ ಬ್ಲಾಕ್ ಗಣ್ಯ ಎನ್‌ಕ್ಲೇವ್ ಎಂದು ಖ್ಯಾತಿಯನ್ನು ಗಳಿಸಿದೆ. ಯಶಸ್ವಿ ಉದ್ಯಮಿಗಳ ಮನೆ ಎಂದು ಕರೆಯುತ್ತಾರೆ. ಯಶಸ್ವಿ ಉದ್ಯಮಿಗಳು ಇಲ್ಲಿ ನೆಲೆಸಿದ್ದಾರೆ. ಈ ಪೈಕಿ ಫ್ಲಿಪ್‌ಕಾರ್ಟ್ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್ ಅವರು 2019ರಲ್ಲಿ ಕೋರಮಂಗಲದಲ್ಲಿ ₹45 ಕೋಟಿ ಮೌಲ್ಯದ ಆಸ್ತಿಯನ್ನು ಪಡೆದಿದ್ದಾರೆ.
ಅಜಿತ್ ಅಬ್ರಹಾಂ ಐಸಾಕ್ ಅವರು ಮೂರು ವರ್ಷದ ಹಿಂದೆ ಇದೇ ಏರಿಯಾದಲ್ಲಿ ಮತ್ತೊಂದು ಪ್ರಾಪರ್ಟಿ ಖರೀದಿಸಿದ್ದರು. ₹52 ಕೋಟಿಗೆ 9,507 ಚದರಡಿ ವಿಸ್ತೀರ್ಣದ ಬಂಗಲೆ ಖರೀದಿ ಮಾಡಿದ್ದರು. ಸಿಂಗಾಪುರದಲ್ಲಿರುವ ಎನ್ಆರ್ಐ ಬ್ರಿಜೇಶ್ ಆರ್ ವಾಹಿ ಎಂಬುವವರಿಂದ ಅಜಿತ್ ಈ ಬಂಗಲೆ ಪಡೆದಿದ್ದರು. ಚದರಡಿಗೆ ₹58,000 ಬೆಲೆಯಂತೆ ಇದರ ಸೇಲ್ ಆಗಿತ್ತು.
ಐಸಾಕ್ ಅವರು ಇನ್ಫೋಸಿಸ್‌ನ ಸಹ-ಸಂಸ್ಥಾಪಕರಾದ ನಂದನ್ ನಿಲೇಕಣಿ ಮತ್ತು ಕ್ರಿಸ್ ಗೋಪಾಲಕೃಷ್ಣನ್, ಹೆಸರಾಂತ ಹೃದಯ ಶಸ್ತ್ರಚಿಕಿತ್ಸಕ ಡಾ. ದೇವಿ ಶೆಟ್ಟಿ ಮತ್ತು ಪ್ರಸಿದ್ಧ ಉದ್ಯಮಿ ಮತ್ತು ರಾಜಕಾರಣಿ ರಾಜೀವ್ ಚಂದ್ರಶೇಖರ್ ಅವರು ಕೂಡ ಇಲ್ಲಿ ನೆಲೆಸಿದ್ದಾರೆ. ಅವರು ಇವರ ನೆರೆಹೊರೆಯವರಾಗಿದ್ದಾರೆ.
ಭಾರತದಲ್ಲಿನ ಐಷಾರಾಮಿ ರಿಯಲ್ ಎಸ್ಟೇಟ್ ಮಾರುಕಟ್ಟೆಯು ₹50 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಉನ್ನತ-ಮಟ್ಟದ ಮನೆಗಳ ಮಾರಾಟ ಮೌಲ್ಯದಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದೆ.
ಈ ಐಷಾರಾಮಿ ಆಸ್ತಿಗಳ ಮಾರಾಟದ ಮೌಲ್ಯವು 2023 ರಲ್ಲಿ ₹4,319 ಕೋಟಿ ತಲುಪಿದೆ. ಇದು 2022ರಲ್ಲಿ ದಾಖಲಾದ ₹2,859 ಕೋಟಿಗೆ ಹೋಲಿಸಿದರೆ ಸುಮಾರು 1.5 ಪಟ್ಟು ಗಮನಾರ್ಹ ಹೆಚ್ಚಳವಾಗಿದೆ. ಸೂಪರ್ ಐಷಾರಾಮಿ ಮನೆಗಳ ಮಾರಾಟವು ಮುಂಬೈ, ದೆಹಲಿ-ಎನ್‌ಸಿಆರ್‌ನಲ್ಲಿ ಪ್ರಧಾನವಾಗಿ ಮುನ್ನಡೆ ಸಾಧಿಸಿದೆ. ಬೆಂಗಳೂರಿನ ಆಸ್ತಿಗಳು ಗಣನೀಯ ಬೇಡಿಕೆ ಕಂಡಿದೆ.