ಕಳೆದ ವಾರ ಮಹಾ ಶಿವರಾತ್ರಿಯ ದಿನ ಕುಖ್ಯಾತ ರೌಡಿಶೀಟರ್ ಕಾಟನ್ಪೇಟೆ ಶಿವ ಅಲಿಯಾಸ್ ವರ್ತೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್‌ಪೇಟೆ ಪೊಲೀಸರು ಸದ್ಯ ಆರು ಜನರನ್ನು ಬಂಧಿಸಿದ್ದಾರೆ.
35 ವರ್ಷದ ರೌಡಿ ಶಿವ ಅಲಿಯಾಸ್ ವರ್ತೆ ಎಂಬಾತನನ್ನು ಸೆಂಟ್ರಲ್ ಬೆಂಗಳೂರಿನ ಕಾಟನ್‌ಪೇಟೆಯ ಅಂಜನಪ್ಪ ಗಾರ್ಡನ್ನ ಓಣಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹಳೆಯ ದ್ವೇಷ ಹಾಗೂ ಸ್ಥಳೀಯ ಗ್ಯಾಂಗ್ಗಳ ನಡುವಿನ ಕಿತ್ತಾಟವೇ ಈ ಕೊಲೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಟೀಫನ್ ಅಲಿಯಾಸ್ ಸೈಲೆಂಟ್, ಚಂದ್ರಶೇಖರ್, ಸಿಂಬಾ ಅಲಿಯಾಸ್ ಸಿಂಬು, ಶೇಖರ್ ಅಲಿಯಾಸ್ ಡೋರಿ, ಮಣಿ ಮತ್ತು ಕಿರಣ ಬಂಧಿತರು.
ಹತ್ಯೆಯಾದ ಶಿವ ಮಾರ್ಚ್ 8ರಂದು ರಾತ್ರಿ 9.30ರ ಸುಮಾರಿಗೆ ಪಾರ್ಟಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಹೊಂಚು ಹಾಕಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇನ್ನಿತರ ಮಾಹಿತಿ ಆಧರಿಸಿ ಶಂಕಿತರನ್ನು ಪತ್ತೆಹಚ್ಚಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಬಿಎಂಪಿ ಡಂಪಿಂಗ್ ಯಾರ್ಡ್‌ನಲ್ಲಿ ಸಿಗರೇಟ್‌ನಿಂದ ಹೊತ್ತಿಕೊಂಡ ಬೆಂಕಿ
“ಆರೋಪಿ ಚಂದ್ರಶೇಖರನ ಆಪ್ತ ಸ್ನೇಹಿತನಿಗೆ ಶಿವ ಥಳಿಸಿದ್ದನು. ಈ ಮಧ್ಯೆ, ಶಿವು ಸಿಂಬು ಮತ್ತು ಡೋರಿಯೊಂದಿಗೆ ಜಗಳವಾಡಿದ್ದನು. ಈ ಮೂವರು ವ್ಯಕ್ತಿಗಳು ಶಿವನೊಂದಿಗೆ ವೈಯಕ್ತಿಕ ದ್ವೇಷ ಹೊಂದಿದ್ದರು. ಇನ್ನೂ ಮೂವರನ್ನು ಕರೆತಂದು, ಸ್ಥಳ ಆಯ್ಕೆ ಮಾಡಿ ಹಬ್ಬದ ದಿನ ರಾತ್ರಿಯೇ ಕೊಲೆ ಮಾಡಿದ್ದಾರೆ” ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
2020ರಲ್ಲಿ ರೌಡಿಶೀಟರ್ ಪ್ರಭಾಕರ್ ಅಲಿಯಾಸ್ ಸಾಕ್ರೆ ಕೊಲೆ ಪ್ರಕರಣದಲ್ಲಿ ಶಿವನನ್ನು ಬಂಧಿಸಲಾಗಿತ್ತು. ಕೊಲೆಯ ನಂತರ, ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಶಿವ ವಿರುದ್ಧ ರೌಡಿ ಶೀಟ್ ತೆರೆಯಲಾಗಿತ್ತು. ಶಿವ ಜಾಮೀನಿನ ಮೇಲೆ ಹೊರಗಿದ್ದರೂ ವಿಚಾರಣೆ ಪ್ರಗತಿಯಲ್ಲಿತ್ತು.