ಬೆಂಗಳೂರು | 2025ಕ್ಕೆ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ನಮ್ಮ ಮೆಟ್ರೋ ಕಾಮಗಾರಿ ಪೂರ್ಣ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ನಮ್ಮ ಮೆಟ್ರೋದ ಪಾತ್ರ ಪ್ರಮುಖವಾಗಿದೆ. ಇದೀಗ ನಮ್ಮ ಮೆಟ್ರೋದ ಮಾರ್ಗವನ್ನು ವಿಸ್ತರಣೆ ಮಾಡುವ ಕಾರ್ಯ ನಡೆಯುತ್ತಿದ್ದು, ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ನಡೆಯುತ್ತಿರುವ ಮೆಟ್ರೋ ಕಾಮಗಾರಿ 2025ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ತಿಳಿಸಿದೆ.

1185.80 ಮೀ ಸುರಂಗ ಕೊರೆದು ಹೊರಬಂದ ಟಿಬಿಎಂ ಭದ್ರ

ವೆಂಕಟೇಶಪುರ ಮತ್ತು ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ 1185.80 ಮೀ ಸುರಂಗದ ಕಾಮಗಾರಿ ಪೂರ್ಣಗೊಳಿಸಿ ಫೆ.8 ರಂದು ಸುರಂಗ ಕೊರೆಯುವ ಯಂತ್ರ ಭದ್ರ ಕಾಡುಗೊಂಡನಹಳ್ಳಿ ನಿಲ್ದಾಣದಿಂದ ಹೊರಬಂದಿದೆ.

Advertisements

“ಈ ಯಂತ್ರವು 2023ರ ಫೆ.16 ರಂದು ವೆಂಕಟೇಶಪುರ ಸುರಂಗ ನಿಲ್ದಾಣದಿಂದ ಸುರಂಗ ಕಾಮಗಾರಿ ಪ್ರಾರಂಭಿಸಿತ್ತು. ಈ ಪ್ರಗತಿಯೊಂದಿಗೆ ಒಟ್ಟು 20,992 ಮೀ ಸುರಂಗ ಮಾರ್ಗದಲ್ಲಿ 19,120.70 ಮೀ (ಶೇ 91%) ರಷ್ಟು ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಕೆ.ಜಿ ಹಳ್ಳಿಯಿಂದ ರಿಟ್ರೇವಲ್ ಶಾಫ್ಟ್‌ ನಡುವಿನ (ನಾಗವಾರ ಸುರಂಗ ನಿಲ್ದಾಣದ ಬಳಿ) ಸುರಂಗ ಮಾರ್ಗದ ಕಾಮಗಾರಿಗಾಗಿ ಈ ಟಿಬಿಎಂ ಅನ್ನು ನಿಯೋಜಿಸಲಾಗುವುದು” ಎಂದು ನಿಗಮ ಹೇಳಿದೆ.

ಈ ವೇಳೇ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ”ಬೆಂಗಳೂರಿನಲ್ಲಿ ಜನರು ಹೆಚ್ಚಾಗಿ ಮೆಟ್ರೋ ಬಳಕೆ ಮಾಡಬೇಕು. ಮೆಟ್ರೋ ಸುರಂಗ ಕಾಮಗಾರಿ ನಡೆಯುತ್ತಿದೆ. ನಾಗವಾರದವರೆಗೆ 1.18 ಕಿಲೋ ಮೀಟರ್ ಸುರಂಗ ಕೊರೆಯಲಾಗಿದೆ. 13.76 ಕಿಲೋ ಮೀಟರ್ ಪಿಂಕ್ ಮಾರ್ಗ ನಿರ್ಮಾಣ ಮಾಡಲಾಗಿದೆ” ಎಂದರು.

”ಗೊಟ್ಟಿಗೆರೆ – ನಾಗವಾರದವರೆಗೆ ನೂತನವಾಗಿ ಪಿಂಕ್ ಮಾರ್ಗ ಕಲ್ಪಿಸಲಾಗುತ್ತಿದೆ. ಈ ಮಾರ್ಗದಲ್ಲಿ 4 ಅಂಡರ್ ಗ್ರೌಂಡ್ ಮೆಟ್ರೋ ನಿಲ್ದಾಣಗಳು ಬರಲಿವೆ. 2025ಕ್ಕೆ 4 ಮೆಟ್ರೋ ನಿಲ್ದಾಣಗಳು ಉದ್ಘಾಟನೆ ಆಗುವ ಸಾಧ್ಯತೆಯಿದೆ. ನಗರದಲ್ಲಿ ಅನೇಕ ಸುರಂಗ ಮಾರ್ಗ ಕೊರೆಯಲು ಕಾರ್ಯ ರೂಪಿಸಲಾಗಿದೆ. ಸುರಂಗ ಮಾರ್ಗ ಕೊರೆಯುವುದರಿಂದ ಆಗುವ ಎಫೆಕ್ಟ್ ಬಗ್ಗೆಯೂ ಚರ್ಚೆಗಳು ನಡೆಸಿದ್ದು, ಅದಕ್ಕಾಗಿಯೇ ಟನಲ್ ಕೊರೆಯುವ ಬಗ್ಗೆ ಪರಿಶೀಲನೆ ನಡೆಸಿದ್ದೇನೆ” ಎಂದರು.

ಸುರಂಗ ಕೊರೆಯುವ ಯಂತ್ರಗಳು

“ಬೆಂಗಳೂರಿನ ಟ್ಯಾನರಿ ರಸ್ತೆ ನಿಲ್ದಾಣದಿಂದ ನಾಗವಾರದ ರಾಂಪ್‌ವರೆಗಿನ 4.591 ಕಿಮೀ ಉದ್ದದ ಸುರಂಗ ಮಾರ್ಗದ ನಿರ್ಮಾಣ ಹಾಗೂ ಟ್ಯಾನರಿ ರಸ್ತೆ, ವೆಂಕಟೇಶಪುರ, ಕಾಡಗೊಂಡನಹಳ್ಳಿ ಮತ್ತು ನಾಗವಾರ ಈ ನಾಲ್ಕು ನೆಲದಡಿ ನಿಲ್ದಾಣಗಳನ್ನು ನಿರ್ಮಿಸಲು ಡಿಸೆಂಬರ್ 2019ರಲ್ಲಿ ಐಟಿಡಿ ಸಿಮೆಂಟೇಶನ್ ಇಂಡಿಯಾ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾಗಿದೆ” ಎಂದು ಬಿಎಂಆರ್‌ಸಿಎಲ್ ಹೇಳಿದೆ.

“ಗುತ್ತಿಗೆದಾರರು 2021ರಲ್ಲಿ ಟಿಬಿಎಂ-1(ಭದ್ರಾ) ಮತ್ತು ಟಿಬಿಎಂ-2 (ತುಂಗಾ) ಎಂಬ ಎರಡು ಇಪಿಬಿ ಮಾದರಿಯ ಸುರಂಗ ಕೊರೆಯುವ ಯಂತ್ರಗಳನ್ನು (ಟಿಬಿಎಂ) ಬಳಸಿಕೊಂಡು ಸುರಂಗ ಕಾಮಗಾರಿಯನ್ನು ಪ್ರಾರಂಭಿಸಿದರು. ಒಪ್ಪಂದದ ಪ್ಯಾಕೇಜ್‌ನಲ್ಲಿ ಮೂರು ಸುರಂಗ ಡ್ರೈವ್ ಗಳಿವೆ” ಎಂದು ತಿಳಿಸಿದೆ.

“ಡ್ರೈವ್ 1ರಲ್ಲಿ ವೆಂಕಟೇಶಪುರದಿಂದ ಶಾದಿಮಹಲ್ ವರೆಗೆ 1,066.80 ಮೀ ಸುರಂಗ ಮಾರ್ಗವಿರಲಿದ್ದು, ದಕ್ಷಿಣಮುಖಿ ಸುರಂಗ ಮಾರ್ಗವು 2022ರ ಆಗಸ್ಟ್‌ 24ರಂದು ಪೂರ್ಣಗೊಂಡಿದೆ. ಉತ್ತರಮುಖಿ ಸುರಂಗ ಮಾರ್ಗವು 2022ರ ಡಿಸೆಂಬರ್ 16ರಂದು ಪೂರ್ಣಗೊಂಡಿದೆ. ಡ್ರೈವ್ 2ರಲ್ಲಿ ವೆಂಕಟೇಶಪುರದಿಂದ ಕೆ.ಜಿ.ಹಳ್ಳಿ ವರೆಗೆ 1,185.80 ಮೀ ಸುರಂಗ ಮಾರ್ಗವಿದ್ದು, ದಕ್ಷಿಣಮುಖಿ ಸುರಂಗ ಮಾರ್ಗವು 2023ರ ಡಿಸೆಂಬರ್ 6ರಂದು ಪೂರ್ಣಗೊಂಡಿದೆ. ಉತ್ತರಮುಖಿ ಸುರಂಗ ಮಾರ್ಗವು 2024ರ ಫೆ.8ರಂದು ಪೂರ್ಣಗೊಂಡಿದೆ. ಇನ್ನು ಡ್ರೈವ್ 3ರಲ್ಲಿ ಕೆ.ಜಿ. ಹಳ್ಳಿಯಿಂದ ಕಟ್ ಮತ್ತು ಕವರ್-1 ವರೆಗಿನ ಸುರಂಗ ಮಾರ್ಗ 935 ಮೀ ಇದೆ. ದಕ್ಷಿಣಮುಖಿ ಸುರಂಗ ಮಾರ್ಗವು 2024ರ ಫೆಬ್ರುವರಿ 2ರಂದು ಪ್ರಾರಂಭಗೊಂಡಿದೆ. ಉತ್ತರಮುಖಿ ಸುರಂಗ ಮಾರ್ಗವು 2024ರ ಏಪ್ರಿಲ್ 7ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ” ಎಂದು ಮಾಹಿತಿ ನೀಡಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | 50,000ಕ್ಕೂ ಅಧಿಕ ದಂಡ ಬಾಕಿ ಇದ್ದರೆ, ಮನೆ ಬಾಗಿಲಿಗೆ ಬರ್ತಾರೆ ಸಂಚಾರ ಪೊಲೀಸರು!

ರೀಚ್ 6 ಮಾರ್ಗ ಕುರಿತು ಸಂಕ್ಷಿಪ್ತ ವಿವರ

  • ಹಂತ-2 ರ ಯೋಜನೆಯ ಅಡಿಯಲ್ಲಿ, ರೀಚ್ 6 ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.26 ಕಿ.ಮೀ ಉದ್ದವಿದ್ದು, 18 ನಿಲ್ದಾಣಗಳನ್ನು ಹೊಂದಿದೆ. ಇದರಲ್ಲಿ 7.50 ಕಿಮೀ ಎತ್ತರಿಸಿದ ಮಾರ್ಗವಾಗಿದ್ದು ಕಾಳೇನ ಅಗ್ರಹಾರದಿಂದ ಸ್ವಾಗತ್ ರಸ್ತೆವರೆಗೆ 6 ನಿಲ್ದಾಣಗಳನ್ನು ಮತ್ತು 13.76 ಕಿಮೀ ಸುರಂಗ ಮಾರ್ಗದಲ್ಲಿ ಡೈರಿ ವೃತ್ತದಿಂದ ನಾಗವಾರದವರೆಗೆ 12 ನಿಲ್ದಾಣಗಳನ್ನು ಒಳಗೊಂಡಿದೆ.
  • ದಕ್ಷಿಣ ರಾಂಪ್ (ಡೈರಿ ಸರ್ಕಲ್) ಮತ್ತು ನಾಗವಾರ ನಡುವೆ 13.76 ಕಿಮೀ ಸುರಂಗ ಮಾರ್ಗದ ಉದ್ದವಿದೆ. ಒಟ್ಟು ಸುರಂಗದ ಉದ್ದ 20.99 ಕಿಮೀ ಇದೆ. ಇಲ್ಲಿಯವರೆಗೂ 19.08 ಕಿಮೀ. (ಶೇ.91) ಸುರಂಗದ ಉದ್ದ ಪೂರ್ಣಗೊಂಡಿದೆ. ಈ ಸುರಂಗ ಕೊರೆಯಲು ಒಟ್ಟು 9 ಟಿಬಿಎಂಗಳನ್ನು ನಿಯೋಜನೆ ಮಾಡಲಾಗಿದೆ. ಇಲ್ಲಿಯವರೆಗೂ 7 ಟಿಬಿಎಂಗಳು ಕಾಮಗಾರಿ ಮುಗಿಸಿದ್ದರೆ, ಇನ್ನು 2 ಟಿಬಿಎಂಗಳು 2024ರ ಆಗಸ್ಟ್‌ನಲ್ಲಿ ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಳಿಸಲಿದೆ ಎಂದು ಅಂದಾಜಿಸಲಾಗಿದೆ.
  • ಜಯದೇವ ಬಳಿ ರೀಚ್ – 6, ಎಂ.ಜಿ ರಸ್ತೆಯ ಬಳಿ ಇಂಟರ್ ಚೇಂಜ್, ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ, ನಾಗವಾರ ಇಂಟರ್‌ಚೇಂಜ್ ನಿಲ್ದಾಣಗಳು ಈ ಭಾಗದ ಪ್ರಮುಖ ನಿಲ್ದಾಣಗಳಾಗಿವೆ. ಜಯದೇವ ಆಸ್ಪತ್ರೆ ಬಳಿ ಐದು ಹಂತದ ಎತ್ತರಿಸಿದ ಜಯದೇವ ಇಂಟರ್‌ಚೇಂಜ್ ನಿಲ್ದಾಣವನ್ನು ನಿರ್ಮಿಸಲಾಗಿದೆ.
  • ನಾಗವಾರ ಇಂಟರ್‌ಚೇಂಜ್ ನಿಲ್ದಾಣ: ರೀಚ್-6ರ ಮಾರ್ಗವನ್ನು (ಸುರಂಗ) ನಾಗವಾರದಲ್ಲಿ ಏರ್ ಪೋರ್ಟ್ ಮೆಟ್ರೋ ಮಾರ್ಗದೊಂದಿಗೆ (ಎತ್ತರಿಸಲಾದ) ಸಂಯೋಜಿಸಲಾಗುತ್ತದೆ. ಇದರಿಂದ ಪ್ರಯಾಣಿಕರು ರೀಚ್-6ರ ಮಾರ್ಗ ಮತ್ತು ಏರ್‌ಪೋರ್ಟ್ ಮೆಟ್ರೋ ಮಾರ್ಗಗಳ ನಡುವೆ ತಡೆರಹಿತವಾಗಿ ಬದಲಾವಣೆ ಮಾಡಲು ಅನುಕೂಲವಾಗುತ್ತದೆ.
  • ಎಂಜಿ ರಸ್ತೆ ನೆಲದಡಿ ನಿಲ್ದಾಣದ ಕಾಮಗಾರಿಗಾಗಿ ಮುಚ್ಚಿರುವ ಕಾಮರಾಜ್ ರಸ್ತೆಯನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಏಪ್ರಿಲ್ 2024ರ ವೇಳೆಗೆ ತೆರೆಯಲಾಗುವುದು. ಜತೆಗೆ, ರೀಚ್-6 ಮಾರ್ಗವನ್ನು 2025ರ ವೇಳೆಗೆ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದು ಹೇಳಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X