ಬೆಂಗಳೂರಿನ ವಿಜಯನಗರ ಹೋಟೆಲ್‌ವೊಂದರಲ್ಲಿ ಯುವತಿಯೊಬ್ಬರ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ, ”ಸ್ನೇಹಿತರು ಸವಾಲು ಹಾಕಿದ್ದಕ್ಕೇ ಯುವತಿಯ ಜತೆಗೆ ಅಸಭ್ಯವಾಗಿ ವರ್ತಿಸಿದೆ” ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಚಂದನ್ ಬಂಧಿತ ಆರೋಪಿ. ಈತ ಬೆಂಗಳೂರಿನ ಹಂಪಿನಗರ ನಿವಾಸಿಯಾಗಿದ್ದು, ಗ್ಯಾಸ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ.
ಬೆಂಗಳೂರಿನ ಆರ್‌ಪಿಸಿ ಲೇಔಟ್‌ನಲ್ಲಿರುವ ಹೋಟೆಲ್‌ವೊಂದರಲ್ಲಿ ಯುವತಿಯೊಬ್ಬರ ಜತೆ ಬಂಧಿತ ಆರೋಪಿ ಅಸಭ್ಯವಾಗಿ ವರ್ತಿಸಿದ್ದನು. ಈ ಘಟನೆಗೆ ಸಾಕ್ಷಿಯಾಗಿದ್ದ ವಿಜಯನಗರ ಹೋಟೆಲ್ ಮಹಿಳಾ ಕ್ಯಾಷಿಯರ್ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಏನಿದು ಪ್ರಕರಣ?
ಬಂಧಿತ ಆರೋಪಿ ಚಂದನ ತನ್ನ ಸ್ನೇಹಿತರ ಜತೆಗೆ, ಡಿಸೆಂಬರ್ 30ರಂದು ಸಂಜೆ 7:30ರ ಸುಮಾರಿಗೆ ಆರ್‌ಪಿಸಿ ಲೇಔಟ್‌ನಲ್ಲಿರುವ ಹೋಟೆಲ್‌ವೊಂದಕ್ಕೆ ತಿಂಡಿ ತಿನ್ನಲು ಬಂದಿದ್ದರು. ತಿಂಡಿ ತಿಂದು ಹೋಟೆಲ್‌ನಲ್ಲಿ ನಿಂತು ಮೂವರು ಸ್ನೇಹಿತರು ಮಾತನಾಡುತ್ತಿದ್ದರು.
ಇದೇ ಸಮಯಕ್ಕೆ ಹೋಟೆಲ್‌ಗೆ ಬಂದ ಯುವತಿಯೊಬ್ಬರು ಕ್ಯಾಷ್ ಕೌಂಟರ್‌ನಲ್ಲಿ ಇರುವುದನ್ನು ಮೂವರು ಗಮನಿಸಿದ್ದಾರೆ. ಈ ವೇಳೆ, ಬಂಧಿತ ಆರೋಪಿ ಚಂದನ್ ಯುವತಿಯ ಬಳಿ ಬಂದು ಹಿಂಬದಿಯಿಂದ ಆಕೆಯನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ. ಚಂದನ್ ಯುವತಿಯನ್ನು ಮುಟ್ಟಿದ ಬಳಿಕ ಆತನ ಸ್ನೇಹಿತರು ಶಿಳ್ಳೆ ಹೊಡೆದಿದ್ದಾರೆ.
ಈ ವೇಳೆ, ಯುವತಿ ಗಲಾಟೆ ಆರಂಭಿಸಿದಾಗ ಹೋಟೆಲ್‌ನಲ್ಲಿ ಜನ ಜಮಾಯಿಸಿದ್ದಾರೆ. ಆರೋಪಿ ಯುವಕರು ಈ ವೇಳೆ, ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಘಟನೆಯ ಸಂಪೂರ್ಣ ದೃಶ್ಯ ಹೋಟೆಲ್‌ನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಘಟನೆಯ ಪ್ರತ್ಯಕ್ಷದರ್ಶಿ ಮಹಿಳಾ ಕ್ಯಾಷಿಯರ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 354 (ಮಹಿಳೆಯ ಮೇಲೆ ದೌರ್ಜನ್ಯ ನಡೆಸುವ ಸಂಚಿಗೆ ಸಂಬಂಧಿಸಿದ್ದು) ಮತ್ತು 509 (ಲೈಂಗಿಕ ಕಿರುಕುಳ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ವಿಶ್ವದ ‘ಕುಖ್ಯಾತ ಮಾರುಕಟ್ಟೆ’ಗಳ ಪಟ್ಟಿಯಲ್ಲಿ ಬೆಂಗಳೂರಿನ ಎಸ್‌ಪಿ ರೋಡ್ ಉಲ್ಲೇಖ
ಸ್ನೇಹಿತರೊಬ್ಬರು ಸವಾಲು ಹಾಕಿದ್ದರಿಂದ ಮಹಿಳೆಯನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾಗಿ ಆರೋಪಿಯು ಪೊಲೀಸರಿಗೆ ತಿಳಿಸಿದ್ದಾನೆ.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಾಗಿ ಶೋಧ ನಡೆಸುತ್ತಿದ್ದ ಪೊಲೀಸರು, ಬುಧವಾರ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.