ರಾಜ್ಯ ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ಬೊಮ್ಮನಹಳ್ಳಿಯ ಕೂಡ್ಲು, ಸಿಂಗಸಂದ್ರ ಬಳಿ ಅ.29ರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದೆ. ಸದ್ಯ ಚಿರತೆ ಸೆರೆ ಹಿಡಿಯಲು ತಂಡಗಳಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಚಿರತೆಯ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ, ಬೊಮ್ಮನಹಳ್ಳಿ, ಹೆಚ್‌ಎಸ್‌ಆರ್ ಲೇಔಟ್, ಬಿಟಿಎಂ ಲೇಔಟ್ನ ಜನರಲ್ಲಿ ಚಿರತೆ ಆತಂಕ ಮನೆ ಮಾಡಿದೆ.
ಅಕ್ಟೋಬರ್ 28ರ ಮಧ್ಯರಾತ್ರಿ ಆನೇಕಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ 8 ಅಡಿ ಎತ್ತರದ ಗೋಡೆ ಹಾರಿ ಚಿರತೆ ನುಗ್ಗಿತ್ತು. ಇದರ ಬೆನ್ನಲ್ಲೇ ಬೊಮ್ಮನಹಳ್ಳಿಯ ಕೂಡ್ಲು, ಸಿಂಗಸಂದ್ರ ಬಳಿ ಅ.29ರ ರಾತ್ರಿ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ಜನರು ಹೊರಗಡೆ ಓಡಾಡಲು ಆಗದೇ, ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ.
“ಸದ್ಯ ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಚಿರತೆ ಇರುವ ಕುರುಹು ಸಿಕ್ಕಿದೆ. ಖಾಲಿ ಕಟ್ಟಡದಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತು ಇದೆ. ಜತೆಗೆ 3 ದಿನಗಳ ಹಿಂದೆ ಚಿರತೆ ಮಲ ವಿಸರ್ಜನೆ ಮಾಡಿರುವುದು ಪತ್ತೆಯಾಗಿದೆ. ಚಿರತೆ ಈ ಸ್ಥಳದಲ್ಲಿ ಓಡಾಡಿರುವ ಕಾರಣ ಚಿರತೆಯ ಸೆರೆಗೆ ಅಧಿಕಾರಿಗಳು ಸ್ಥಳದಲ್ಲಿ ಬೋನ್ ಇಟ್ಟಿದ್ದಾರೆ. ಚಿರತೆ ಎಲ್ಲಿದೆ ಎಂಬುದನ್ನು ಡ್ರೋನ್ ಸಹಾಯದಿಂದ ಕಂಡು ಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಇನ್ನು ಚಿರತೆ ಸೆರೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಎಇಸಿಎಫ್ ಲೇಔಟ್‌ಗೆ ಹೊಂದಿಕೊಂಡಿರುವ ಖಾಲಿ ಜಾಗದಲ್ಲಿ ಎರಡು ಬೋನ್ ಇರಿಸಲಾಗಿದ್ದು, ಅದರಲ್ಲಿ ಜೀವಂತ ಕೋಳಿಗಳನ್ನು ಬಿಡಲಾಗಿದೆ” ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಲುಲು ಮಾಲ್‌ನಲ್ಲಿ ಯುವತಿ ಜತೆ ಅಶ್ಲೀಲ ವರ್ತನೆ ತೋರಿದ ವ್ಯಕ್ತಿ ವಿರುದ್ಧ ದೂರು ದಾಖಲು
ರಾತ್ರಿ ವೇಳೆ ಜನರು ಒಂಟಿಯಾಗಿ ಓಡಾಡದಂತೆ ಅರಣ್ಯ ಅಧಿಕಾರಿಗಳು ಸೂಚಿಸಿದ್ದಾರೆ.
ಚಿರತೆ ಸೆರೆಗಾಗಿ ಸಿಸಿಎಸ್ ಲಿಂಗರಾಜು, ಡಿಎಫ್ಓ ರವೀಂದ್ರ ನೇತೃತ್ವದಲ್ಲಿ 5 ತಂಡಗಳ ರಚನೆ ಮಾಡಲಾಗಿದೆ. ಆನೇಕಲ್, ಬನ್ನೇರುಘಟ್ಟ, ಕಗ್ಗಲೀಪುರ, ಕೆ.ಆರ್.ಪುರಂ ಆರ್‌ಎಫ್‌ಓ ಅಧಿಕಾರಿಗಳು ಈ ತಂಡದಲ್ಲಿದ್ದಾರೆ.