ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ನಲ್ಲಿರುವಾಗಲೇ ಕೊಲೆ ಆರೋಪಿಯ ಮನೆಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಕನಕಪುರ ರಸ್ತೆಯ ಗೊಲ್ಲಹಳ್ಳಿಯಲ್ಲಿ ನಡೆದಿದೆ.
ಬೆಂಕಿಯಿಂದ ಯಾರಿಗೂ ಗಾಯಗಳಾಗಿಲ್ಲ. ಆದರೆ, ಸುಮಾರು ₹2 ಲಕ್ಷ ನಷ್ಟವಾಗಿದೆ. ಅಪರಿಚಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 436ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಗೊಲ್ಲಹಳ್ಳಿಯ ಎಂ.ರವೀಶ (38) ಅವರನ್ನು ಗೊಲ್ಲಹಳ್ಳಿಯ ಅವರ ಸೋದರಸಂಬಂಧಿ ಎನ್.ರವಿಕುಮಾರ್ (40) ಅಲಿಯಾಸ್ ‘ಮಸಾಜ್’ ರವಿ ಬುಧವಾರ ಕೊಲೆ ಮಾಡಿದ್ದಾರೆ.
ಮಸಾಜ್ ರವಿ ಅವರ ತಾಯಿಯ ಬಗ್ಗೆ ಕುಡಿದ ಅಮಲಿನಲ್ಲಿ ರವೀಶ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಕುಪಿತಗೊಂಡ ಮಸಾಜ್ ರವಿ, ರವೀಶಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ರವೀಶನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ರವಿಯನ್ನು ಕೋಡಿಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರವೀಶನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ರವೀಶನ ಕುಟುಂಬಸ್ಥರು ಪ್ರತಿಜ್ಞೆ ಮಾಡಿದರು ಎಂದು ತಿಳಿದುಬಂದಿದೆ.
ಸಂತ್ರಸ್ತೆಯ ಕುಟುಂಬ ಮತ್ತು ಸಂಬಂಧಿಕರಿಂದ ಪ್ರತೀಕಾರದ ದಾಳಿಯ ನಿರೀಕ್ಷೆ ಇದ್ದ ಹಿನ್ನೆಲೆ, ಕೊಲೆ ಆರೋಪಿಯ ಮನೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಏಳು ಪೊಲೀಸ್ ಸಿಬ್ಬಂದಿ ಮನೆಗೆ ಕಾವಲು ಕಾಯುತ್ತಿದ್ದರು. ಹಿಂಬದಿಯಿಂದ ಮನೆಯ ಕಾಂಪೌಂಡ್ಗೆ ನುಗ್ಗಿದ ದುಷ್ಕರ್ಮಿಗಳು ಗುರುವಾರ ರಾತ್ರಿ ಬಿದಿರಿನಿಂದ ತಯಾರಿಸಿದ ರೇಷ್ಮೆ ಹುಳು ಸಾಕಣೆ ತಟ್ಟೆಗಳಿಗೆ ಬೆಂಕಿ ಹಚ್ಚಿದ್ದಾರೆ. ನಂತರ ಬೆಂಕಿ ಮನೆಗೆ ವ್ಯಾಪಿಸಿದೆ. ಬೆಂಕಿ ನಂದಿಸಲು ಪೊಲೀಸ್ ಸಿಬ್ಬಂದಿಗೆ ಸ್ಥಳೀಯರ ಸಹಾಯ ಸಿಗಲಿಲ್ಲ.
ಕೊಲೆ ಆರೋಪಿಯ ಮನೆಯಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಶುಕ್ರವಾರ ಕೋಡಿಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 436 ರ ಅಡಿಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೆಟ್ರೋ ನಿಲ್ದಾಣದ ಬಳಿ ಅಗ್ನಿ ಅವಘಡ; ಸುಟ್ಟು ಕರಕಲಾದ 4 ಬೈಕ್‌ಗಳು
“ಕೊಲೆ ಪ್ರಕರಣ ಮತ್ತು ಬೆಂಕಿಯ ಕಿಡಿಗೇಡಿತನಕ್ಕೆ ಸಂಬಂಧವಿದೆ. ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬೆಂಕಿಯಿಂದ ಯಾರಿಗೂ ಗಾಯಗಳಾಗಿಲ್ಲ. ಸುಮಾರು 2 ಲಕ್ಷ ರೂಪಾಯಿ ನಷ್ಟವಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.