- ಏಕಾಏಕಿ ಬೀಸಿದ ಗಾಳಿಗೆ ಕಾವೇರಿ ಪೈಪ್‌ಲೈನ್‌ನಲ್ಲಿ ಜೊಂಡು ಸಿಕ್ಕಿಕೊಂಡು ನೀರು ಹರಿವಿನಲ್ಲಿ ತೊಂದರೆ
- 10 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯ ವೇಳೆವರೆಗೆ ಕಾರ್ಯಾಚರಣೆ ನಡೆಸಿದ ಜಲಮಂಡಳಿ
ನೀರಿನ ಕೊರತೆಯ ಬೆನ್ನಲ್ಲೇ, ನಾಲೆಗಳ ಪಾತ್ರದಲ್ಲಿ ಬೆಳೆದುಕೊಂಡಿರುವ ಜೊಂಡು (ನೀರಿನಲ್ಲಿ ಬೆಳೆಯುವ ಸಸ್ಯಗಳು) ಕಾವೇರಿ ನೀರಿನ ಪೈಪ್‌ಲೈನ್‌ನಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ನೀರಿನ ಹರಿವಿನಲ್ಲಿ ತೊಂದರೆ ಎದುರಾಗಿತ್ತು. ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಜಲಮಂಡಳಿ ನಗರಕ್ಕೆ ಎದುರಾಗಬಹುದಾಗಿದ್ದ ದೊಡ್ಡ ನೀರಿನ ಕೊರತೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದೆ.
ಮಾರ್ಚ್ 23ರಂದು ರಾತ್ರಿ ಏಕಾಏಕಿ ಬೀಸಿದ ಗಾಳಿಯ ಪರಿಣಾಮ ನೀರಿನ ಕಳೆ ಗಿಡಗಳು ನಾಲೆಯ ಪ್ರವೇಶದ ಹರಿವಿನಲ್ಲಿ ಸಿಕ್ಕಿಕೊಂಡು, ಬೆಂಗಳೂರಿಗೆ ನೀರು ಸರಬರಾಜು ಆಗುತ್ತಿದ್ದ ಪ್ರಮುಖ ನಾಲೆಯಲ್ಲಿ ನೀರಿನ ಹರಿವನ್ನ ಶೇಕಡಾ 50ರಷ್ಟು ಇಳಿಸಿದ್ದವು. ಇದರ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಜಲಮಂಡಳಿ ಅಧ್ಯಕ್ಷರು ವಿಶೇಷ ತಂಡಕ್ಕೆ ರಿಪೇರಿ ನಡೆಸುವಂತೆ ಸೂಚಿಸಿದ್ದರು.
ಮಂಡಳಿ ಸಿಬ್ಬಂದಿ ಯುದ್ದೋಪಾದಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳೆಗಳಿಂದ ಆಗಿದ್ದ ಹರಿವಿನ ತಡೆಯನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯ ವರೆಗೆ ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ಮಾಡಿರುವ ಸಿಬ್ಬಂದಿ ಆಗಿದ್ದ ತೊಂದರೆಯನ್ನು ಸರಿಪಡಿಸಿದ್ದಾರೆ. ಸರಿಯಾದ ಸಮಯದಲ್ಲಿ ಈ ತೊಂದರೆಯನ್ನು ನಿವಾರಿಸದೇ ಇದ್ದಲ್ಲಿ, ನಗರಕ್ಕೆ 1000 ಎಂಎಲ್‌ಡಿ ಯಷ್ಟು ನೀರು ಕೊರತೆ ಉಂಟಾಗುತ್ತಿತ್ತು. ಇದನ್ನ ಈಗ 100 ಎಂಎಲ್‌ಡಿ ಗೆ ಇಳಿಸಲಾಗಿದೆ.
100 ಎಂಎಲ್‌ಡಿ ಕೊರತೆಯಿಂದ ನಗರದ ಕೆಲವೇ ಭಾಗದಲ್ಲಿ ಮಾರ್ಚ್ 24 ಮತ್ತು 25ರಂದು ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ. ಆದರೆ, ನಗರದ ಬಹುತೇಕ ಪ್ರದೇಶಗಳಲ್ಲಿ ನೀರಿನ ಸರಬರಾಜ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.
ಈ ಸುದ್ದಿ ಓದಿದ್ದೀರಾ? ದೆಹಲಿ | ಎಎಪಿ ಕಚೇರಿ ‘ಸೀಲ್’ ಮಾಡಿದ ಪೊಲೀಸರು; ಆರೋಪ
ವ್ಯತ್ಯಯ ಆಗಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಆಕಸ್ಮಿಕವಾಗಿ ಆಗಿರುವ ತಾಂತ್ರಿಕ ತೊಂದರೆಯಿಂದ ಜನರಿಗೆ ಆಗಿರುವ ಅನಾನುಕೂಲಕ್ಕೆ ಜಲಮಂಡಳಿ ವಿಷಾದ ವ್ಯಕ್ತಪಡಿಸುತ್ತದೆ.
ರಾತ್ರಿಯಲ್ಲಿ ಯುದ್ದೋಪಾದಿಯ ಕಾರ್ಯಾಚರಣೆ ನಡೆಸುವ ಮೂಲಕ ದೊಡ್ಡ ತೊಂದರೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾದ ಜಲಮಂಡಳಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮಯೋಚಿತ ಕಾರ್ಯಕ್ಕೆ ನಗರದ ಜನತೆಯ ಪರವಾಗಿ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅಭಿನಂದಿಸಿದ್ದಾರೆ.