ಚಿತ್ರದುರ್ಗ ಲೋಕಸಭಾ ಕ್ಷೇತ್ರ | ಈ ಬಾರಿಯೂ ಸ್ಥಳೀಯರಲ್ಲದವರು ಕಣದಲ್ಲಿ!

Date:

ಕಾಂಗ್ರೆಸ್‌ ಈಗಾಗಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅಭ್ಯರ್ಥಿಯನ್ನೇ ಘೋಷಣೆ ಮಾಡಿದೆ. ಬಿಜೆಪಿಯ ಅಭ್ಯರ್ಥಿಯನ್ನು ಇನ್ನೂ ಘೋಷಣೆ ಮಾಡಿಲ್ಲ.

 

ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದೇ ಕರೆಯಲಾಗುವ ಲೋಕಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ. ಅದರ ಭಾಗವಾಗಿಯೇ ದೇಶದೆಲ್ಲೆಡೆ ಚರ್ಚೆ, ಕುತೂಹಲಗಳು ಜೋರಾಗಿವೆ. ರಾಜ್ಯದಲ್ಲಿಯೂ ಕುತೂಹಲ ಕೆರಳಿಸುವಂತಹ ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ. ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಟಿಕೆಟ್‌ಗಾಗಿ ಲಾಬಿ, ಒತ್ತಡಗಳು ಈಗ ಇಳಿಮುಖವಾಗಿವೆ. ಯಾಕೆಂದರೆ, ಬಹುಪಾಲು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಈಗಾಗಲೇ ಘೋಷಣೆ ಮಾಡಲಾಗಿದೆ.

ಇದುವರೆಗೆ ಕಾಂಗ್ರೆಸ್‌ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಿಜೆಪಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಉಳಿದ ಬೆಳಗಾವಿ, ಉತ್ತರ ಕನ್ನಡ, ರಾಯಚೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆ ಆಗಬೇಕಿದೆ. ಟಿಕೆಟ್‌ ನಿರೀಕ್ಷೆಯಲ್ಲಿದ್ದ ಕೆಲವರು ಟಿಕೆಟ್‌ ಸಿಗದಿರುವುದಕ್ಕೆ ಅಸಮಾಧಾನದಿಂದ ಕುದಿಯುತ್ತಿದ್ದಾರೆ. ಟಿಕೆಟ್‌ ಪಡೆದವರು ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಬಿರುಸಿನ ತಯಾರಿಯಲ್ಲಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿಯೂ ಇಂಥ ವಿದ್ಯಮಾನಗಳು ಸಾಮಾನ್ಯವಾಗಿದೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಮತ್ತು ತುಮಕೂರು ಜಿಲ್ಲೆಯ ಸಿರಾ, ಪಾವಗಡ ಗಳನ್ನು ಒಳಗೊಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಂಗ್ರೆಸ್‌ ಈಗಾಗಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅಭ್ಯರ್ಥಿ ಬಿ ಎನ್‌ ಚಂದ್ರಪ್ಪ ಅವರನ್ನೇ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಬಿಜೆಪಿ, ಈ ಕ್ಷೇತ್ರದಲ್ಲಿ 2019ರಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿ ತನ್ನದಾಗಿಸಿಕೊಂಡಿತ್ತು. ಆದರೆ, ಈ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಇನ್ನೂ ಘೋಷಣೆ ಮಾಡಿಲ್ಲ.

ಸ್ಥಳೀಯರಲ್ಲದವರಿಗೆ ಟಿಕೆಟ್ 

ಬಹುಪಾಲು ಬೇರೆ ಬೇರೆ ಕ್ಷೇತ್ರಗಳಲ್ಲಿ ಇದ್ದಂತೆ ಟಿಕೆಟ್‌ ಪಡೆಯಲು ಅಭ್ಯರ್ಥಿಗಳಿಗೆ ತನ್ನ ಪ್ರಾಬಲ್ಯ ವರ್ಚಸ್ಸುಗಳೇ ಮಾನದಂಡಗಳಾಗಿರುತ್ತವೆ. ಚಿತ್ರದುರ್ಗ ಕ್ಷೇತ್ರದಲ್ಲಿ ಪ್ರಾಬಲ್ಯ ವರ್ಚಸ್ಸುಗಳನ್ನೂ ಒಳಗೊಂಡು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವಿಭಿನ್ನ ಸಂಗತಿಯೊಂದನ್ನು ಕಾಣಬಹುದು. ಅದೇನೆಂದರೆ, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸ್ಥಳೀಯ ಮತ್ತು ಹೊರಗಿನ ಎಂಬ ಸಂಗತಿ. ಕಳೆದ ಎರಡು ಬಾರಿಯೂ ಎರಡೂ ಪಕ್ಷಗಳಿಂದಲೂ ಸ್ಥಳೀಯರಲ್ಲದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿರುವುದು ಸಾಮಾನ್ಯವಾದ್ದೆ. ಆದರೆ, ಸ್ಥಳೀಯ ನಾಯಕರಲ್ಲಿ ಇದು ಅಸಮಾದಾನಕ್ಕೆ ಕಾರಣವಾಗಿದೆ.

ಬಿಜೆಪಿಯ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ತಮ್ಮ ಮಗನಿಗೆ ಟಿಕೆಟ್ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಈ ನಡುವೆ ಅಭ್ಯರ್ಥಿಯಾಗಿ ಗೋವಿಂದ ಎಂ ಕಾರಜೋಳ ಅವರ ಹೆಸರು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕ ಎಂ ಚಂದ್ರಪ್ಪ ಅವರ ಬೆಂಬಲಿಗರು ಸ್ಥಳೀಯರಲ್ಲದವರಿಗೆ ಟಿಕೆಟ್ ನೀಡಬಾರದೆಂದು ಜಿಲ್ಲಾ ಬಿಜೆಪಿ ಕಚೇರಿವರೆಗೂ ಶನಿವಾರ ಸಂಜೆ ಮೆರವಣಿಗೆ ನಡೆಸಿದರು. ಮೆರವಣಿಗೆಯ ಉದ್ಧಕ್ಕೂ ‘ಗೋ ಬ್ಯಾಕ್ ಗೋವಿಂದ ಕಾರಜೋಳ’ ಎಂಬ ಘೋಷಣೆಯನ್ನು ಕೂಗುತ್ತಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ತನ್ನ ಆಂತರಿಕ ಸಮೀಕ್ಷೆಯನ್ನು ಆಧರಿಸಿ ಮಾಜಿ ಸಂಸದ ಬಿ.ಎನ್‌ ಚಂದ್ರಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರ್ಲಕುಂಟೆ ರಾಮಪ್ಪ ಹಾಗೂ ಜೆ.ಜೆ ಹಟ್ಟಿ ತಿಪ್ಪೇಸ್ವಾಮಿ ಅವರನ್ನು ಶಿಫಾರಸ್ಸು ಮಾಡಲಾಗಿ ಅಂತಿಮವಾಗಿ ಬಿ.ಎನ್‌ ಚಂದ್ರಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಬಿ.ಎನ್.‌ ಚಂದ್ರಪ್ಪ ನವರು ಸ್ಪರ್ಧಿಸದಂತೆ ತಡೆಯಲು ಜಾತಿ ಪ್ರಮಾಣ ಪತ್ರ ಹಾಗೂ ಶಾಲಾ ವರ್ಗಾವಣೆ ಪತ್ರದ ನಕಲಿ ಪ್ರಮಾಣ ಪತ್ರಗಳನ್ನು ಹರಿಯಬಿಡಲಾಗಿತ್ತು ಎಂದು ಆರೋಪಿಸಿ ಬಿ.ಎನ್.‌ ಚಂದ್ರಪ್ಪನವರು ಹೈಕಮಾಂಡ್‌ ಗಮನಕ್ಕೆ ತಂದು ಈಗ ದೂರು ನೀಡಿದ್ದಾರೆ. ಇದರ ನಡುವೆ ಕ್ಷೇತ್ರದಿಂದ ಹಲವು ಆಕಾಂಕ್ಷಿಗಳಿದ್ದು ಇದೇ ಸಂದರ್ಭದಲ್ಲಿ ಸ್ಥಳೀಯ ಅಭ್ಯರ್ಥಿಯ ಆಯ್ಕೆ ತಂದಿಟ್ಟ ಬಿಕ್ಕಟ್ಟು ಹಾಗೂ ಆರ್.ಬಿ. ತಿಮ್ಮಾಪುರ ಅವರು ತಮ್ಮ ಮಗ ವಿನಯ್‌ ತಿಮ್ಮಾಪುರಗೆ ಟಿಕೆಟ್‌ ಕೊಡಿಸುವ ಪ್ರಯತ್ನಕ್ಕೆ ತೆರೆ ಬಿದ್ದಿದೆ.

ಬಿಜೆಪಿ ವಿರುದ್ಧ ಅಲೆ

ಸದ್ಯ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ಅವರ ಹೆಸರು ಘೋಷಣೆಯ ಹಂತದಲ್ಲಿದೆ. ಮೊದಲಿಗೆ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಬಿಜೆಪಿ  ಸಂಪರ್ಕಿಸಿತ್ತು. ಆದರೆ ಅವರು ಚುನಾವಣಾ ರಾಜಕೀಯಕ್ಕೆ ಬರಲು ನಿರಾಕರಿಸಿದರು. ಆನಂತರವೇ ಗೋವಿಂದ ಕಾರಜೋಳ ಹೆಸರು ಮುನ್ನಲೆಗೆ ಬಂದಿತು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಿಜೆಪಿಗೆ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯ ಆಯ್ಕೆ ಅಥವಾ ಘೋಷಣೆಯಲ್ಲಿ ಸವಾಲಾಗಿರುವಂತದ್ದು ಏನು ಎಂದು ನೋಡಿದರೆ, ಕ್ಷೇತ್ರದಲ್ಲಿ ಬಿಜೆಪಿ ನಾಯಕರ ವಿರುದ್ಧದ ಅಲೆ ಎದ್ದು ಕಾಣುತ್ತಿದೆ.

ಪ.ಜಾತಿ ಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯ ಸೋಲು ಗೆಲುವಿಗೆ ಎಡಗೈ ಸಮುದಾಯವೇ ನಿರ್ಣಾಯಕ. ಬಿಜೆಪಿಯಲ್ಲಿನ ಸಂವಿಧಾನ ವಿರೋಧಿ ಧೋರಣೆ ಮತ್ತು ಒಳಮೀಸಲಾತಿಯಂತಹ ವಿಷಯದಲ್ಲಿನ ನಿಲುವುಗಳನ್ನು ಎಚ್ಚೆತ್ತ ದಲಿತ ಸಮುದಾಯ ಬಿಜೆಪಿಯ ವಿರುದ್ದದ ನಿರ್ಣಯಕ್ಕೆ ಬಂದಂತಿದೆ. ಈ ಹಿನ್ನೆಲೆಯಲ್ಲಿ ಎ.ನಾರಾಯಣ ಸ್ವಾಮಿ ಅವರಿಗೆ ಆಡಳಿತ ವಿರೋಧಿ ಅಲೆ ಜತೆಗೆ ಒಳಮೀಸಲಾತಿ ವಿಷಯದಲ್ಲಿ ತಾನು ಪ್ರತಿನಿಧಿಸುವ ಎಡಗೈ ಸಮುದಾಯಕ್ಕೆ ಪೂರಕ ನಿಲುವು ತಾಳದಿರುವುದು, ಅವರು ಕೇವಲ ಅಬ್ಬರದ ಮಾತಿಗಷ್ಟೇ ಸೀಮಿತ ಎಂಬುದು ಜನರ ಅರಿವಿಗೆ ಬಂದಂತಿದೆ.

ಹಾಗಾಗಿ ಎ.ನಾರಾಯಣ ಸ್ವಾಮಿಯವರಿಗೆ ಟಿಕೆಟ್‌ ತಪ್ಪಿದಂತಾಗಿದೆ. ಮತ್ತೊಂದು ಹೆಸರು ಮಾದಾರ ಚೆನ್ನಯ್ಯ ಸ್ವಾಮಿಜಿಯದ್ದು. ವಾಸ್ತವದಲ್ಲಿ, ಮಾದಾರ ಚೆನ್ನಯ್ಯ ಸ್ವಾಮಿಜಿಯವರ ಕುರಿತು ಕ್ಷೇತ್ರದಲ್ಲಿ ಇರುವ ಚರ್ಚೆ ಏನೆಂದರೆ, ಸ್ವಾಮೀಜಿಯವರು ಒಂದು ವೇಳೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ದಲಿತರ ಹಿತದೃಷ್ಟಿಯಿಂದ ಅವರನ್ನು ಗೆಲ್ಲಲು ಬಿಡಬಾರದುʼ ಎಂಬುದು. ಹಾಗಾಗಿ ಕ್ಷೇತ್ರದ ದಲಿತ ಮುಖಂಡರು ನಿರ್ಧರಿಸಿ ಸ್ವಾಮೀಜಿಯವರನ್ನು ಸೋಲಿಸಲು ಕಾರ್ಯೋನ್ಮುಖರಾಗಿದ್ದರು. ಹೀಗಾಗಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರ ಹೆಸರು ಹಿನ್ನೆಲೆಗೆ ಸರಿದಂತಾಯಿತು.

ಉಳಿದಂತೆ, ಕ್ಷೇತ್ರದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ಅವರ ಹೆಸರು ಮುಂದಾಗಿ ಚರ್ಚೆಯಲ್ಲಿದೆ. ಎಡಗೈ ಸಮುದಾಯದವರೆ ಆದ ಗೋವಿಂದ ಕಾರಜೋಳ ಅವರ ಬಗ್ಗೆ ಸಮುದಾಯದಲ್ಲಿ ಆಪ್ತ ಭಾವನೆನೂ ಹೊಂದಿಲ್ಲ. ಒಳ ಮೀಸಲಾತಿ ವಿಷಯದಲ್ಲಿಯು ಖಚಿತ ನಿಲುವನ್ನು ತಾಳದ ಇವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಅದೇಗೆ ನೆಲೆ ಕಾಣಬಲ್ಲರು ಎಂಬುದು ಕ್ಷೇತ್ರದ ಜನರ ಅಂಬೋಣ. ಬಿಜೆಪಿ ಲೆಕ್ಕಾಚಾರದಲ್ಲಿ ಉಳಿದವರು ಇನ್ಯಾರಾದರೂ ಇದ್ದಾರೇನೋ ಗೊತ್ತಿಲ್ಲ. ಎಲ್ಲದಕ್ಕೂ ಒಂದೆರಡು ದಿನದಲ್ಲಿ ಉತ್ತರ ಸಿಗಬಹುದು.

ಕೃಷ್ಣ ಕೆ ಎನ್‌ ಚಿತ್ರದುರ್ಗ
+ posts

ಪೋಸ್ಟ್ ಹಂಚಿಕೊಳ್ಳಿ:

3 COMMENTS

  1. ಕೃಷ್ಣ ಕೆ ಎನ್ ಚಿತ್ರದುರ್ಗ ಅವರ ಈ ಸಮಕಾಲೀನ ಸಂದರ್ಭದ ರಾಜಕೀಯ ವಿಶ್ಲೇಷಣೆ ರಾಷ್ಟ್ರೀಯ ಪಕ್ಷಗಳ ತಲೆಗೆ ಕೆಲಸ ಕೊಡುವಂತಿದೆ. ಪ್ರಾದೇಶಿಕ ಪಕ್ಷದ ಗೈರು ಈ ಕ್ಷೇತ್ರದಲ್ಲಿ ಎದ್ದು ಕಾಣುತ್ತಿರುವುದರ ಗುಟ್ಟೇನು ಉಳಿದಿಲ್ಲ. ಸ್ಥಳೀಯರಾದ ಕೃಷ್ಣ ಅವರು ಈ ಹಿಂದೆ ನಡೆದ ತಪ್ಪುಗಳು ಮರುಕಲಿಸದಿರಲಿ ಮತ್ತು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸುವಂತೆ ಕುಟುಕಿದ್ದಾರೆ.
    /-ಧನ್ಯವಾದಗಳು

  2. ಕೃಷ್ಣ ಕೆ ಎನ್ ಚಿತ್ರದುರ್ಗ ಅವರ ಈ ಸಮಕಾಲೀನ ಸಂದರ್ಭದ ರಾಜಕೀಯ ವಿಶ್ಲೇಷಣೆ ರಾಷ್ಟ್ರೀಯ ಪಕ್ಷಗಳ ತಲೆಗೆ ಕೆಲಸ ಕೊಡುವಂತಿದೆ. ಪ್ರಾದೇಶಿಕ ಪಕ್ಷದ ಗೈರು ಈ ಕ್ಷೇತ್ರದಲ್ಲಿ ಎದ್ದು ಕಾಣುತ್ತಿರುವುದರ ಹಿಂದಿನ ಗುಟ್ಟೇನು ಉಳಿದಿಲ್ಲ. ಸ್ಥಳೀಯರಾದ ಕೃಷ್ಣ ಅವರು ಈ ಹಿಂದೆ ನಡೆದ ತಪ್ಪುಗಳು ಮರುಕಲಿಸದಿರಲಿ ಮತ್ತು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸುವಂತೆ ಕುಟುಕಿದ್ದಾರೆ.
    /-ಧನ್ಯವಾದಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭೆ ಚುನಾವಣೆ| ನೀತಿ ಸಂಹಿತೆ ಉಲ್ಲಂಘನೆ; ಮೆಹಬೂಬಾ ಮುಫ್ತಿ ವಿರುದ್ಧ ಎಫ್‌ಐಆರ್

ಕಾಶ್ಮೀರದ ಚುನಾವಣಾ ಅಧಿಕಾರಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ...

ಪರಿಷತ್‌ ಚುನಾವಣೆ | ನನ್ನ ಅಭಿಪ್ರಾಯ ತಪ್ಪಾಗಿ ಅರ್ಥೈಸಿಕೊಳ್ಳಬೇಕಿಲ್ಲ: ಗೃಹ ಸಚಿವ ಪರಮೇಶ್ವರ್‌

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ಬಂಧನಕ್ಕೆ ಪಕ್ಷ...

ಕನ್ಯಾಕುಮಾರಿ| ವಿವೇಕಾನಂದ ಸ್ಮಾರಕದಲ್ಲಿ ಮೂರು ದಿನ ಪ್ರಧಾನಿ ಧ್ಯಾನ; 2 ಸಾವಿರ ಪೊಲೀಸ್ ಸಿಬ್ಬಂದಿಗಳ ಕಾವಲು!

ಕನ್ಯಾಕುಮಾರಿಯ ಪ್ರಸಿದ್ಧ ವಿವೇಕಾನಂದ ಸ್ಮಾರಕದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು...