ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿ ಮಾಲೀಕನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಬೆಂಗಳೂರಿನ ದೇವಿನಗರದಲ್ಲಿ ನಡೆದಿದೆ.
ಬೆಂಗಳೂರಿನ ಕೊಡಿಗೆಹಳ್ಳಿ ವ್ಯಾಪ್ತಿಯ ದೇವಿಹಳ್ಳಿಯಲ್ಲಿರುವ ಲಕ್ಷ್ಮಿ ಬ್ಯಾಂಕರ್ಸ್ ಮತ್ತು ಜ್ಯುವೆಲರಿ ಶಾಪ್‌ಗೆ ನುಗ್ಗಿದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಮಾರ್ಚ್ 14ರ ಬಳಿಗ್ಗೆ 11 ಗಂಟೆ ಸುಮಾರಿಗೆ ದೇವಿನಗರದ ಆರ್‌ಎಮ್‌ವಿ ಅಪಾರ್ಟ್‌ಮೆಂಟ್ ಮುಂಭಾಗದಲ್ಲಿರುವ ಲಕ್ಷ್ಮಿ ಬ್ಯಾಂಕರ್ಸ್ ಮತ್ತು ಜ್ಯುವೆಲರಿ ಶಾಪ್‌ಗೆ ದರೋಡೆ ಮಾಡಲು ನಾಲ್ವರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದಿದ್ದಾರೆ. ಅಂಗಡಿಗಳಿಗೆ ನುಗ್ಗಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಎರಡು ಬೈಕ್‌ಗಳಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳಲ್ಲಿ, ಇಬ್ಬರು ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ಅಪ್ಪುರಾಮ್ ಎಂಬವರ ಹೊಟ್ಟೆಗೆ ಗುಂಡು ತಗುಲಿದೆ. ಅಲ್ಲದೇ, ಅಭಿರಾಮ್ ಎಂಬವವರ ಕಾಲಿಗೆ ಗುಂಡು ತಗುಲಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪ್ಪುರಾಮ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಚಿನ್ನಾಭರಣ ದೋಚಲು ದುಷ್ಕರ್ಮಿಗಳು ವಿಫಲ ಯತ್ನ ನಡೆಸಿದ್ದಾರೆ. ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಪರಾರಿಯಾಗಿದ್ದು, 1 ಪಿಸ್ತೂಲ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಎಫ್‌ಎಸ್‌ಎಲ್ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, “ಸುಮಾರು 11 ಗಂಟೆ ವೇಳೆಗೆ ನಾಲ್ವರು ಆರೋಪಿಗಳು ಬಂದು ಫೈರಿಂಗ್ ಮಾಡಿದ್ದಾರೆ. ದುಷ್ಕರ್ಮಿಗಳು ರಾಬರಿ ಮಾಡುವುದಕ್ಕೆ ಬಂದ ಹಾಗೇ ಇದೆ. ಇಬ್ಬರ ಮೇಲೆ ಫೈರಿಂಗ್ ಮಾಡಿದ್ದಾರೆ. ಸದ್ಯ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಾದ್ಯಂತ ತಾಪಮಾನ ಹೆಚ್ಚಳ; ಮಳೆ ಮುನ್ಸೂಚನೆ ಸದ್ಯಕ್ಕಿಲ್ಲ
ಘಟನಾ ಸ್ಥಳಕ್ಕೆ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಕಮಿಷನರ್ ದಯಾನಂದ್ ಹಾಗೂ ಕೋಡಿಗೆಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.