ಫೆ.28ರೊಳಗೆ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ವಾಣಿಜ್ಯ ಮಳಿಗೆಗಳ ಮುಂದೆ ಹಾಕಬೇಕು ಎಂದು ಸರ್ಕಾರ ಗಡುವು ನೀಡಿತ್ತು. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಇನ್ನು ಅನ್ಯ ಭಾಷೆಯ ನಾಮಫಲಕಗಳು ರಾಜಾಜಿಸುತ್ತಿವೆ.
ರಾಜ್ಯಾದ್ಯಂತ ಅಂಗಡಿ ಮುಂಗಟ್ಟು, ಶಾಪ್ಗಳು ಸೇರಿದಂತೆ ದೊಡ್ಡ ದೊಡ್ಡ ಶೋರೂಂಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಮಸೂದೆ ಮಂಡನೆ ಮಾಡಿದೆ. ಈ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕನ್ನಡ ನಾಮಫಲಕಗಳ ಅಳವಡಿಕೆಗೆ ಫೆ 28 ರವರೆಗೆ ಸರ್ಕಾರ ಗಡುವು ನೀಡಿತ್ತು.
ಸರ್ಕಾರ ನೀಡಿದ ಗಡುವುನಂತೆ ಅಂಗಡಿಗಳ ಮುಂದೆ ಶೇ.60 ರಷ್ಟು ಕನ್ನಡ ಭಾಷೆಯಲ್ಲೇ ನಾಮಫಲಕ ಇರಬೇಕು. ಆದರೆ, ಇಂದು ಸರ್ಕಾರ ನೀಡಿದ ಗಡುವಿನ ಕೊನೆ ದಿನ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಚ್ಚೆತ್ತಿರುವ ವ್ಯಾಪಾರಿಗಳು ಹಳೆಯ ನಾಮಫಲಕ ತೆಗೆದು ಹೊಸ ನಾಮಫಲಕ ಹಾಕಿದ್ದಾರೆ. ದೊಡ್ಡ ಅಕ್ಷರದಲ್ಲಿ ಕನ್ನಡ ನಾಮಫಲಕ ಹಾಕಿರುವುದು ಹಲವೆಡೆ ಕಂಡು ಬಂದಿದೆ. ಆದರೆ ಮತ್ತೊಂದಷ್ಟು ಕಡೆ ಕನ್ನಡವನ್ನು ನಿರ್ಲಕ್ಷಿಸಲಾಗಿದೆ.
ಕಳೆದ ಎರಡು ತಿಂಗಳಿನಿಂದ ನಗರದಲ್ಲಿ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಸದ ವ್ಯಾಪಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೋಟಿಸ್ ನೀಡುತ್ತಿದೆ. ಆದರೂ, ನಗರದ ಮಲ್ಲೇಶ್ವರಂ, ಯಶವಂತಪುರ, ಚಾಮರಾಜಪೇಟೆ, ರಾಜಾಜಿನಗರ, ವಿಜಯನಗರ, ಆರ್.ಆರ್.ನಗರ, ಕೋರಮಂಗಲ, ಜಯನಗರ, ಎಚ್‌ಎಸ್‌ಆರ್ ಲೇಔಟ್, ಎಂ.ಜಿ ರಸ್ತೆ, ರೆಸಿಡೆನ್ಸಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಇಂದಿಗೂ ಅನ್ಯ ಭಾಷೆಯ ನಾಮಫಲಕಗಳು ನೇತಾಡುತ್ತಿವೆ.
ನಗರದಲ್ಲಿ ಈಗಾಗಲೇ 50,216 ವ್ಯಾಪಾರಿಗಳಿಗೆ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸುವಂತೆ ಬಿಬಿಎಂಪಿ ನೋಟಿಸ್ ನೀಡಿದೆ. ಈ ಪೈಕಿ ಈಗಾಗಲೇ 46,600 ವ್ಯಾಪಾರಿಗಳು ಕನ್ನಡ ನಾಮಫಲಕ ಅಳವಸಿಕೊಂಡಿದ್ದಾರೆ. ಇನ್ನೂ 3,616 ವ್ಯಾಪಾರಿಗಳು ಕನ್ನಡ ನಾಮ ಫಲಕ ಅಳವಡಿಸಿಕೊಳ್ಳುವುದು ಬಾಕಿ ಇದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಈ ಹಿಂದೆ ಮಾಹಿತಿ ನೀಡಿದ್ದರು.
ಬಿಬಿಎಂಪಿಯಿಂದ ಉದ್ದಿಮೆ ಪರವಾನಗಿ ಪಡೆದ ವ್ಯಾಪಾರಿಗಳಿಗೆ ಮಾತ್ರ ಬಿಬಿಎಂಪಿ ಆರೋಗ್ಯಾಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ. ಆದರೆ, ನಗರದಲ್ಲಿ ಸಾವಿರಾರು ಸಂಖ್ಯೆಯ ಪರವಾನಗಿ ಪಡೆಯದ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದಾರೆ. ಆ ವಾಣಿಜ್ಯ ಮಳಿಗೆಗಳ ಮೇಲೆ ಅನ್ಯ ಭಾಷೆಯ ನಾಮಫಲಕ ಇಂದಿಗೂ ಇವೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಕ್ರಮ ಕೈಗೊಳ್ಳಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ಅಂಗಡಿಗಳ ಮುಂದೆ ಶೇ.60 ರಷ್ಟು ಕನ್ನಡ ಭಾಷೆಯಲ್ಲೇ ನಾಮಫಲಕ ಇರಬೇಕು. ಬೆಂಗಳೂರಿನ ಅವೆನ್ಯೂ ರೋಡ್, ಚಿಕ್ಕಪೇಟೆಯಲ್ಲಿ ವ್ಯಾಪಾರಿಗಳು ಕನ್ನಡ ನಾಮಫಲಕ ಹಾಕಿದ್ದಾರೆ. ಈ ಹಿಂದೆ ಚಿಕ್ಕದಾಗಿದ್ದ ಕನ್ನಡ ಬೋರ್ಡ್ಗಳನ್ನು ಬದಲಾವಣೆ ಮಾಡಿ ಈಗ ದೊಡ್ಡ ದೊಡ್ಡ ಅಕ್ಷರಗಳಲ್ಲೇ ಕನ್ನಡ ನಾಮಫಲಕ ಅಳವಡಿಸಲಾಗಿದೆ. ಕೆಲ ಅಂಗಡಿ-ಮುಂಗಟ್ಟುಗಳಲ್ಲಿ ಮಾತ್ರ ಚಿಕ್ಕದಾಗಿ ಕನ್ನಡ ಬರಹ ಹಾಕಲಾಗಿದೆ.
ಈ ಸುದ್ದಿ ಓದಿದ್ದೀರಾ? ‘ನಾಸೀರ್ ಸಾಬ್ ಜಿಂದಾಬಾದ್’ ಘೋಷಣೆ ತಿರುಚಿದ ಬಿಜೆಪಿ; ಆದರೂ, ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್
ಬೆಂಗಳೂರಿನ ಹಲವೆಡೆ ಇನ್ನೂ ಕೂಡ ನಾಮಫಲಕ ಬದಲಾಯಿಸಿಲ್ಲ. 60% ರಷ್ಟು ನಾಮಫಲಕ ಬದಲಾಗಿದೆ. ಶೇ40% ಇನ್ನೂ ಬದಲಾಗಬೇಕಿದೆ. ಸರ್ಕಾರ ಆದೇಶ ಮಾಡಿ ಕ್ರಮವಹಿಸದ ಹಿನ್ನಲೆ, ಕರವೇ ಮತ್ತೆ ಹೋರಾಟದ ಎಚ್ಚರಿಕೆ ನೀಡಿದೆ. ನಾಮಫಲಕ ಬಳಕೆ ವಿರುದ್ಧ ಬೆಂಗಳೂರು ಸ್ಥಬ್ದ ಮಾಡುವ ಎಚ್ಚರಿಕೆ ನೀಡಿದೆ.
“ಇವತ್ತು ರಾತ್ರಿ ವೇಳೆಗೆ ನಗರದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳ ಮುಂದೆ ಇರುವ ನಾಮಫಲದಲ್ಲಿ ಶೇ.60 ರಷ್ಟು ಕನ್ನಡ ಇರಬೇಕು. ಇಲ್ಲದಿದ್ದರೇ, ನಾಳೆಯಿಂದ ನಾವೇ ನಾಮಫಲಕಗಳನ್ನು ತೆಗೆಯುತ್ತೇವೆ. ಕನ್ನಡ ನಾಮಫಲಕ ಹಾಕದ ಅಂಗಡಿ ಮಾಲೀಕರ ವಿರುದ್ಧ ಪಾಲಿಕೆ ಅಧಿಕಾರಿಗಳು ಕಠಿಣ ಕ್ರಮಗೊಳ್ಳಬೇಕು” ಎಂದು ಕರವೇ ಹೇಳಿದೆ.