ನೀರಿನ ಸಂಪ್ ಸ್ವಚ್ಛ ಮಾಡಲು ಕೆಳಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ತಿರುಪಾಳ್ಯ ಗ್ರಾಮದಲ್ಲಿ ನಡೆದಿದೆ.
ಚಂದನ್ ರಾಜ್ಬನ್ ಸಿಂಗ್(31), ಪಿಂಟು ರಾಜ್ಬನ್(22) ಮೃತ ಕೂಲಿ ಕಾರ್ಮಿಕರು. ಇವರು ಬಿಹಾರ ಮೂಲದವರಾಗಿದ್ದು, ಇಬ್ಬರು ಸಹೋದರರು ಎಂದು ತಿಳಿದುಬಂದಿದೆ. ಬುಧವಾರ ಸಂಜೆ ನೀರಿನ ಸಂಪ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಅಸ್ವಸ್ಥಗೊಂಡಿರುವ ಮತ್ತಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಿರುಪಾಳ್ಯ ಗ್ರಾಮದಲ್ಲಿ ಶ್ರೀನಿವಾಸ ರೆಡ್ಡಿ ಎಂಬುವವರಿಗೆ ಸೇರಿದ ಸನ್ಶೈನ್ ಹೋಲ್ಡಿಂಗ್ ಕಂಪನಿಯಲ್ಲಿ ಇಬ್ಬರು ಕಾರ್ಮಿಕರು ಆ್ಯಸಿಡ್ ಹಾಕಿ ನೀರಿನ ಸಂಪ್ ಸ್ವಚ್ಛ ಮಾಡುತ್ತಿದ್ದರು. ಸಂಪ್ ಸ್ವಚ್ಛ ಮಾಡುವ ವೇಳೆ, ಇಬ್ಬರು ಕಾರ್ಮಿಕರು ಉಸಿರುಗಟ್ಟಿ ನೀರಿನ ಸಂಪ್ನಲ್ಲೇ ಮೃತಪಟ್ಟಿದ್ದಾರೆ. ಇದನ್ನು ಕಂಡು ಕಾರ್ಮಿಕರ ರಕ್ಷಣೆಗೆ ಮುಂದಾಗಿದ್ದ ಕಂಪನಿ ಮಾಲೀಕ ಶ್ರೀನಿವಾಸರೆಡ್ಡಿ ಮತ್ತು ಕಾರ್ಮಿಕ ಜಗದೀಶ್ ಕೂಡ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಉಳಿದ ಕಾರ್ಮಿಕರು ಈ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿದ್ಯುತ್ ತಗುಲಿ ತಾಯಿ-ಮಗು ಸಾವು; ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.