ಬೆಂಗಳೂರಿನ ಕಾಡುಗೋಡಿ ಹೋಪ್ ಫಾರ್ಮ್ ಬಳಿ ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವನ್ನಪ್ಪಿದ್ದ ಘಟನೆ ಸಂಬಂಧ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ನೇತೃತ್ವದಲ್ಲಿ ವಿಚಾರಣೆ ಆರಂಭವಾಗಿದೆ.
ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯುತ್ ಮಾರ್ಗಗಳ ನಿರ್ವಹಣೆಯ ಲೋಪದಿಂದಾಗಿ ದುರ್ಘಟನೆ ನಡೆದಿದೆಯೇ ಎಂಬ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.
“ಬೆಸ್ಕಾಂನ ಕಚೇರಿ ಇರುವ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ದುರ್ಘಟನೆ ನಡೆದಿದೆ. ಹಿಂದಿನ ದಿನವೇ ತಂತಿ ತುಂಡಾಗಿ ಬಿದ್ದಿದ್ದರೂ ಅದನ್ನು ಅಧಿಕಾರಿಗಳು ಗಮನಿಸಿಲ್ಲ. ನಿಯಮಿತವಾಗಿ ವಿದ್ಯುತ್ ಮಾರ್ಗಗಳನ್ನು ಪರಿಶೀಲಿಸುವುದು, ಸಮಸ್ಯೆಯಿದ್ದಲ್ಲಿ ರಿಪೇರಿ ಮಾಡಿಸುವುದು ಬೆಸ್ಕಾಂ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ, ಅಧಿಕಾರಿಗಳು ತಮ್ಮ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿಲ್ಲ” ಎಂದು ಲೋಕಾಯುಕ್ತರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂನ ಮುಖ್ಯ ಎಂಜಿನಿಯರ್, ಪೂರ್ವ ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್, ವೈಟ್‌ಫೀಲ್ಡ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್, ಇ–4 ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.