ರಾಜ್ಯ ರಾಜಧಾನಿ ಬೆಂಗಳೂರು ಅಭಿವೃದ್ಧಿ ಹೊಂದುತ್ತಿರುವ ಐಟಿ ಕೇಂದ್ರವಾಗಿದೆ. ಆದರೂ ಹಲವಾರು ಮೂಲಭೂತ ಸಮಸ್ಯೆಗಳಿಂದ ಕೂಡಿದೆ ಎಂದು ಬೆಂಗಳೂರು ನವನಿರ್ಮಾಣ ಪಕ್ಷದ (ಬಿಎನ್‌ಪಿ) ಸದಸ್ಯರು ದೂರಿದ್ದಾರೆ.
“ನಗರದ ಫುಟ್‌ಪಾತ್‌ಗಳನ್ನು ವ್ಯಾಪಾರಿಗಳು ಅತಿಕ್ರಮಣ ಮಾಡಿರುವುದು, ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ನಿರ್ಲಕ್ಷ್ಯ, ಖಾಸಗಿ ವಾಹನಗಳಿಂದ ರಸ್ತೆ ತಡೆ, ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ಮಾರಾಟಗಾರರು, ಬಿಬಿಎಂಪಿ ಕಸದ ಟ್ರಕ್‌ಗಳನ್ನು ರಾತ್ರಿಯಿಡೀ ಜನನಿಬಿಡ ಪ್ರದೇಶಗಳಲ್ಲಿ ನಿಲ್ಲಿಸುವುದರಿಂದ ದುರ್ವಾಸನೆ ಬರುತ್ತಿದೆ. ಇದರಿಂದ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಆಹಾರ ಮಾರಾಟಗಾರರು ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಅತಿಕ್ರಮಿಸುತ್ತಿದ್ದಾರೆ. ಇಷ್ಟೆಲ್ಲ ಮೂಲಭೂತ ಸಮಸ್ಯೆಗಳಿಂದ ಬೆಂಗಳೂರು ನಗರ ಕೂಡಿದೆ. ಮೂಲಭೂತ ಸಮಸ್ಯೆಗಳಿಗೆ ಜೆ.ಪಿ.ನಗರ ಪ್ರಮುಖ ಉದಾಹರಣೆಯಾಗಿದೆ” ಎಂದು ಸದಸ್ಯರು ತಿಳಿಸಿದರು.
“ಈ ಎಲ್ಲ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಗಮನಹರಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಈ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಬಿಎನ್‌ಪಿ ಒತ್ತಾಯಿಸಿದೆ.
“ಇದಲ್ಲದೆ, ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಅಸಮರ್ಥ ಆಡಳಿತ ಎಂದು ಸೂಚಿಸುತ್ತದೆ. ನಗರದ ನಿವಾಸಿಗಳ ಸಮಸ್ಯೆಯನ್ನು ಕಾಳಜಿಯಿಂದ ಪರಿಣಾಮಕಾರಿಯಾಗಿ ಪರಿಹರಿಸಬೇಕಿದೆ. ಈ ಸಮಸ್ಯೆಗಳನ್ನು ಪರಿಹರಿಸದ ಆಡಳಿತದ ಸಾಮರ್ಥ್ಯದಲ್ಲಿನ ಗಮನಾರ್ಹ ಅಂತರವನ್ನು ಎತ್ತಿ ತೋರಿಸುತ್ತದೆ” ಎಂದಿದೆ.
ಜೆ.ಪಿ.ನಗರದ ಕಾಸಾ ಅನ್ಸಲ್ ಅಪಾರ್ಟ್‌ಮೆಂಟ್‌ನ ನಿವಾಸಿ ಎನ್.ತ್ಯಾಗರಾಜನ್ ಮಾತನಾಡಿ, “ಬೀದಿಬದಿ ತಿಂಡಿ-ತಿನಿಸು ಗಾಡಿಗಳಿಂದ ಕಾಸಾ ಅನ್ಸಾಲ್ ಅಪಾರ್ಟ್‌ಮೆಂಟ್‌ನ ಮೂರು ಸುತ್ತುಮುತ್ತಲಿನ ಕಡೆ ಸಂಚಾರ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದು ದೈನಂದಿನ ಸಮಸ್ಯೆಯಾಗಿದೆ. ಕಸದ ಸಂಗ್ರಹಣೆ, ಸಂಚಾರ ದಟ್ಟಣೆ, ಅತಿಕ್ರಮಣಗೊಂಡ ಪಾದಚಾರಿ ಮಾರ್ಗಗಳು ಹಾಗೂ ಬೀದಿಬದಿ ವ್ಯಾಪಾರಿಗಳು ಮತ್ತು ಚಾಲಕರೊಂದಿಗಿನ ವಿವಾದಗಳು ನಮ್ಮ ಜೀವನ ಪರಿಸ್ಥಿತಿಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತಾಪಮಾನ ಏರಿಕೆ | ವೇತನ ಸಹಿತ ಅರ್ಧ ದಿನದ ಕೆಲಸದ ಸಮಯಕ್ಕೆ ಪೌರಕಾರ್ಮಿಕರ ಒತ್ತಾಯ
“ಈ ಹಿಂದೆ ಇಲ್ಲಿನ ಮೂಲಭೂತ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಮುಖಂಡರಿಗೆ ಮನವಿ ಪತ್ರ ಸಲ್ಲಿಸಿದ್ದರೂ ಸಮಸ್ಯೆಗಳಿಗೆ ಪರಿಹಾರ ಇನ್ನೂ ಕಂಡಿಲ್ಲ. ನೋ-ಪಾರ್ಕಿಂಗ್ ವಲಯಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಟ್ರಾಫಿಕ್ ಸಮಸ್ಯೆ ಮತ್ತು ಪಾದಚಾರಿಗಳ ಓಡಾಡಕ್ಕೆ ತೊಡಕುಂಟು ಮಾಡುವಂತಹ ಒತ್ತುವರಿಗಳನ್ನು ತೆಗೆದುಹಾಕಬೇಕು” ಎಂದು ವಿನಂತಿಸಿದರು.
ಬಿಎನ್‌ಪಿ ಆಡಳಿತ ಮಂಡಳಿ ಸದಸ್ಯ ಪೂಂಗೊತೈ ಪರಮಶಿವಂ, “ಮೂಲಭೂತ ಸಮಸ್ಯೆಗಳನ್ನು ಅಧಿಕಾರಿಗಳು ಹೆಚ್ಚಾಗಿ ನಿರ್ಲಕ್ಷ ಮಾಡುತ್ತಾರೆ. ಗಂಭೀರವಾದ ಘಟನೆ ಸಂಭವಿಸುವವರೆಗೆ ಹಲವಾರು ದೂರುಗಳನ್ನು ಸಾಮಾನ್ಯವಾಗಿ ಕಡೆಗಣಿಸಲಾಗುತ್ತದೆ. ಈ ನಿರ್ಲಕ್ಷ್ಯದಿಂದ ನಾಗರಿಕರು ತೊಂದರೆ ಅನುಭವಿಸುತ್ತಿರುವುದು ವಿಷಾದನೀಯ. ಬಿಬಿಎಂಪಿ ಚುನಾವಣೆ ವಿಳಂಬದಿಂದ ನಗರದಲ್ಲಿ ಚುನಾಯಿತ ಪ್ರತಿನಿಧಿ ಇಲ್ಲದಿರುವುದೇ ನಿರಂತರ ಸಮಸ್ಯೆಗಳು ಪರಿಹಾರವಾಗದಿರಲು ಕಾರಣ” ಎಂದು ಹೇಳಿದರು.
“ಸದ್ಯ ನಗರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಗಮನಹರಿಸಬೇಕು” ಎಂದು ಬಿಎನ್‌ಪಿ ಒತ್ತಾಯಿಸಿದೆ.
2019ರಲ್ಲಿ ಆರಂಭವಾದ ಈ ಬೆಂಗಳೂರು ನವನಿರ್ಮಾಣ ಪಕ್ಷ ಭಾರತೀಯ ರಾಜಕೀಯ ಪಕ್ಷವಾಗಿದೆ. ಈ ಪಕ್ಷ ಬೆಂಗಳೂರಿನ ಬಿಬಿಎಂಪಿ ಚುನಾವಣೆಗಳ ಮೇಲೆ ಮಾತ್ರ ಕೇಂದ್ರೀಕೃತವಾಗಿದೆ. ಬೆಂಗಳೂರು ನಿವಾಸಿಗಳು ಸ್ಥಾಪಿಸಿದ ಪಕ್ಷದ ಸದಸ್ಯರು ಘನತ್ಯಾಜ್ಯ ನಿರ್ವಹಣೆ, ಪ್ರಾಣಿ ಕಲ್ಯಾಣ, ನೀರಿನ ಸಂರಕ್ಷಣೆ, ತ್ಯಾಜ್ಯನೀರಿನ ನಿರ್ವಹಣೆ, ಶುದ್ಧ ಇಂಧನ, ರಸ್ತೆಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ತಳಮಟ್ಟದ ಸಂಘಟಕರನ್ನು ಒಳಗೊಂಡಿದೆ. ‘ನನ್ನ ನಗರ! ನನ್ನ ಹೆಮ್ಮೆ! ನನ್ನ ಜವಾಬ್ದಾರಿ!’ ಎಂಬುದು ಬಿಎನ್‌ಪಿಯ ಧ್ಯೇಯವಾಕ್ಯ.