ರಾಜ್ಯದಲ್ಲಿ ಮಳೆಯಾಗದೇ ಬರದ ಛಾಯೆ ಮೂಡಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಬಿಸಿಗಾಳಿ ಬೀಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆ, ಆರೋಗ್ಯದ ಸಮಸ್ಯೆ ತಡೆಯುವ ನಿಟ್ಟಿನಲ್ಲಿ ವೇತನ ಕಡಿತ ಮಾಡದೇ ಅರ್ಧ ದಿನ ರಜೆ ನೀಡಬೇಕು ಎಂದು ಪೌರಕಾರ್ಮಿಕರು ಆಗ್ರಹ ಮಾಡಿದ್ದಾರೆ ಎಂದು ವರದಿಯಾಗಿದೆ.
ಶುದ್ಧ ನೀರು ಮತ್ತು ನೈರ್ಮಲ್ಯದ ಶೌಚಾಲಯಗಳಿಂದ ವಂಚಿತರಾಗಿರುವ ಪೌರಕಾರ್ಮಿಕರು ಈ ಬಿರು ಬೇಸಿಗೆಯ ಸಮಯದಲ್ಲಿ ರಸ್ತೆಯಲ್ಲಿ ಕೆಲಸ ಮಾಡುವುದರಿಂದ ಶಾಖ-ಸಂಬಂಧಿತ ಕಾಯಿಲೆಗಳು ಅವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬೆಂಗಳೂರು ಬಿಸಿಗಾಳಿಯಿಂದ ತತ್ತರಿಸುತ್ತಿರುವಾಗ, ಪೌರಕಾರ್ಮಿಕರು ವೇತನ ಕಡಿತವಿಲ್ಲದೆ ಅರ್ಧ ದಿನದ ಕೆಲಸದ ಸಮಯಕ್ಕಾಗಿ ಒತ್ತಾಯಿಸಿದ್ದಾರೆ.
ಈ ಕುರಿತು ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟವು (ಎಐಸಿಸಿಟಿಯು) ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳಿಗೆ ಪತ್ರ ಬರೆದಿದೆ. ಈ ಪತ್ರದಲ್ಲಿ ಪೌರಕಾರ್ಮಿಕರಿಗೆ ಶಾಖದ ಹೊಡೆತದಿಂದ ರಕ್ಷಿಸಿಕೊಳ್ಳಲು ಅವರಿಗೆ ಹೆಚ್ಚುವರಿ ವಿರಾಮದೊಂದಿಗೆ ಕುಡಿಯುವ ನೀರು, ಒಆರ್‌ಎಸ್ ಹಾಗೂ ಮಜ್ಜಿಗೆ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
“ಪೌರಕಾರ್ಮಿಕರು ತಮ್ಮ ದಿನವನ್ನು ಬೆಳಿಗ್ಗೆ 6 ಗಂಟೆಗೆ ಪ್ರಾರಂಭ ಮಾಡುತ್ತಾರೆ. ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಈ ಸಮಯವನ್ನು ಮಧ್ಯಾಹ್ನ 2.30 ರವರೆಗೆ ವಿಸ್ತರಿಸಲಾಗುತ್ತದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಧ್ಯಾಹ್ನ ಮತ್ತು 3 ಗಂಟೆಯವರೆಗೆ ಮನೆಯೊಳಗೆ ಇರಲು ಸೂಚನೆ ನೀಡಿದೆ. ಹಾಗಾಗಿ, ಕೆಲಸದ ಸಮಯವನ್ನು ಬೆಳಿಗ್ಗೆ 11ಕ್ಕೆ ಕಡಿತಗೊಳಿಸಬೇಕು” ಎಂದು ಒಕ್ಕೂಟ ಹೇಳಿದೆ.
“ತೀವ್ರ ಶಾಖದಲ್ಲಿ ಕೆಲಸ ಮಾಡುವುದರಿಂದ ಹೆಚ್ಚು ದಣಿವಾಗುತ್ತದೆ. ಪೌರಕಾರ್ಮಿಕರಲ್ಲಿ ಕೆಲವರಿಗೆ ಆಯಾಸವಿದೆ. ಹೆಚ್ಚಿನ ಬಿಸಿಲು ಅಥವಾ ಅಧಿಕ ತಾಪಮಾನದಿಂದ ಅವರಿಗೆ ತಲೆತಿರುಗುವಿಕೆ ಉಂಟಾಗುತ್ತಿದೆ. ಕೆಲಸದ ಸಮಯದಲ್ಲಿ ವಿರಾಮದ ಅಗತ್ಯವಿದೆ” ಎಂದು ಕೆಲವು ಪೌರಕಾರ್ಮಿಕರು ಹೇಳಿದರು.
“ಈಗಿನ ತಾಪಮಾನಕ್ಕೆ ವಿಪತ್ತು ಪ್ರಾಧಿಕಾರದ ಸುತ್ತೋಲೆಯಲ್ಲಿ ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸುವಂತೆ ಜನರಿಗೆ ತಿಳಿಸಿದೆ. ಅಲ್ಲದೇ, ಪೌರಕಾರ್ಮಿಕರಿಗೆ ನೀಡಲಾದ ಸಮವಸ್ತ್ರದ ಬಟ್ಟೆಯು ಹೆಚ್ಚಿನ ತಾಪಮಾನಕ್ಕೆ ಸೂಕ್ತವಲ್ಲ” ಎಂದು ಕಾರ್ಮಿಕರೊಬ್ಬರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚುನಾವಣಾ ಪ್ರಚಾರದ ವೇಳೆ ಶೋಭಾ ಕರಂದ್ಲಾಜೆ ಕಾರು ಅಪಘಾತ: ಬಿಜೆಪಿ ಕಾರ್ಯಕರ್ತ ಸಾವು
“ಕಳೆದ ವರ್ಷ ಬೇಸಿಗೆಯಲ್ಲಿ ರಾಜ್ಯ ಸರ್ಕಾರವು ಪೌರಕಾರ್ಮಿಕರಿಗೆ ವೇತನ ಸಹಿತ ಅರ್ಧ ದಿನದ ಕೆಲಸ ಘೋಷಣೆ ಮಾಡಿತ್ತು. ಈ ಬಾರಿಯೂ ಹೆಚ್ಚಿನ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ಅದೇ ಬೇಡಿಕೆಯನ್ನು ಸರ್ಕಾರದ ಮುಂದಿಡುತ್ತಿದ್ದೇವೆ” ಎಂದು ಎಐಸಿಸಿಟಿಯು ಸದಸ್ಯೆ ನಿರ್ಮಲಾ ಎಂ ತಿಳಿಸಿದ್ದಾರೆ.
“ರಸ್ತೆಗಳನ್ನು ಸ್ವಚ್ಛ ಮಾಡುವುದು ಬೆಳಿಗ್ಗೆ 11ಗಂಟೆಗೆ ಕೊನೆಗೊಳ್ಳುತ್ತದೆ. ಆದರೆ, ಕಾರ್ಮಿಕರನ್ನು ಘನ ತ್ಯಾಜ್ಯದಿಂದ ತುಂಬಿದ ಸ್ಥಳಗಳನ್ನು ಸ್ವಚ್ಛಗೊಳಿಸುತ್ತಾರೆ. ತಾಪಮಾನವು ಸಾಮಾನ್ಯ ಸ್ಥಿತಿಗೆ ಬರುವವರೆಗೆ ಇದನ್ನು ನಿಲ್ಲಿಸಬಹುದು” ಎಂದು ಅವರು ಹೇಳಿದರು.
ಬೆಂಗಳೂರು ನಗರದಲ್ಲಿ ಸೋಮವಾರ 37.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬಿಸಿ ಮತ್ತು ಆರ್ದ್ರ ಹವಾಮಾನ ಇರಲಿದೆ. ಉಷ್ಣ ಅಲೆ ಪ್ರದೇಶಗಳಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏಪ್ರಿಲ್ 9ರಂದು 37 ರಿಂದ 38 ಡಿಗ್ರಿ ಸೆಲ್ಸಿಯಸ್ ಒಳಗೆ ಗರಿಷ್ಠ ಉಷ್ಣಾಂಶ ಇರಲಿದೆ. ಕನಿಷ್ಠ ಉಷ್ಣಾಂಶ 23 ರಿಂದ 24 ದಾಖಲಾಗುವ ಸಾಧ್ಯತೆ ಇದೆ. ಮುಂದಿನ ಎರಡು-ಮೂರು ದಿನಗಳಲ್ಲಿ ರಾಜ್ಯದಲ್ಲಿ ಉಷ್ಣ ಅಲೆ ಮುಂದುವರೆಯಲಿದೆ.
ಬೇಸಿಗೆ ಬಿಸಿಲು ತುಂಬಾ ಜಾಸ್ತಿ ಇದೆ