ಅಪಘಾತಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಶಾಸಕ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ವರ್ತನೆ ದರ್ಪ ಮತ್ತು ದುರಹಂಕಾರದಿಂದ ಕೂಡಿದೆ. ಶಾಸಕ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಗಳನ್ನು ಕೊಟ್ಟಿರುವ ದೇವೇಗೌಡರ ಕುಟುಂಬಕ್ಕೆ ಈ ವರ್ತನೆ ಶೋಭೆ ತರುವಂತದ್ದಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಆಕ್ಷೇಪ ವ್ಯಕ್ತಪಡಿಸಿದರು.
ಅಪಘಾತಕ್ಕೆ ಸಂಬಂಧಿಸಿ ಭವಾನಿ ರೇವಣ್ಣ ಅವರು ಬೈಕ್ ಸವಾರನಿಗೆ ಅವಾಚ್ಯವಾಗಿ ನಿಂದಿಸಿದ ವಿಡಿಯೋಗೆ ಸಂಬಂಧಿಸಿ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬಿ.ಟಿ.ನಾಗಣ್ಣ ಅವರು, “ಅಪಘಾತದ ಬಳಿಕ ಬೈಕ್ ಸವಾರನ ಆರೋಗ್ಯ ವಿಚಾರಿಸಬೇಕಿತ್ತು. ಆದರೆ, ಭವಾನಿ ಅವರು ತಮ್ಮ ಕಾರಿನ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಬಡವ ಸತ್ತರೂ ಚಿಂತೆಯಿಲ್ಲ, ತಮ್ಮ ₹1.50 ಕೋಟಿ ಗಾಡಿಗೆ ಡ್ಯಾಮೇಜ್ ಮಾಡಿದ್ದಾರೆ ಎಂಬುದೇ ಅವರಿಗೆ ದೊಡ್ಡ ಸಂಗತಿಯಾಗಿದೆ” ಎಂದರು.
“ಅವನು ಸತ್ತುಹೋಗುತ್ತಾನೆ ಅಂತ ಯೋಚನೆ ಮಾಡುತ್ತಿದ್ದೀರಲ್ಲಾ, ಒಂದೂವರೆ ಕೋಟಿ ರೂಪಾಯಿಯ ಗಾಡಿಗೆ ಆಗಿರುವ ಡ್ಯಾಮೇಜ್ ಯಾರು ಕಟ್ಟಿಕೊಡುತ್ತಾರೆ ಎಂದು ಅವಿವೇಕದಿಂದ ಪ್ರಶ್ನಿಸುತ್ತಿದ್ದೀರಲ್ಲಾ, ಜಿಲ್ಲೆಯ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಹಾಸನ ಜಿಲ್ಲೆಯ ಜನರು ಭವಾನಿ ಅವರನ್ನು ಅಮ್ಮ ಎಂದೇ ಕರೆಯುತ್ತಾರೆ. ಆದರೆ, ಭವಾನಿ ಅವರಿಗೆ ಅಂತಃಕರಣವೇ ಇಲ್ಲವಾಗಿದೆ. ದೇವೇಗೌಡರ ಕುಟುಂಬದ ಎಲ್ಲ ಸದಸ್ಯರು ಮಣ್ಣಿನ ಮಕ್ಕಳು ಎಂದೇ ಬಿಂಬಿಸಿಕೊಳ್ಳುತ್ತಾರೆ. ವಾಸ್ತವದಲ್ಲಿ ಸಾಮಾನ್ಯ ಕೃಷಿಕರ ಬಗ್ಗೆ, ಕ್ಷೇತ್ರದ ಜನತೆಯ ಬಗ್ಗೆ ಎಂತಹ ಧೋರಣೆಯನ್ನು ಹೊಂದಿದ್ದಾರೆ ಎಂಬುದು ಭವಾನಿ ರೇವಣ್ಣ ಅವರ ವರ್ತನೆಯಿಂದ ಬಹಿರಂಗವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಿವೃತ್ತ ಐಎಎಸ್ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ: ದೂರು ದಾಖಲು
“ಬೈಕ್ ಸವಾರನೊಬ್ಬ ಆಕಸ್ಮಿಕವಾಗಿ ಕಾರಿಗೆ ಅಡ್ಡ ಬಂದು ಅಪಘಾತಕ್ಕೆ ಕಾರಣವಾದ ಎಂಬುದಕ್ಕೆ ‘ಸಾಯುವುದಾದರೆ ಬಸ್ಸಿನಡಿಗೆ ಬಿದ್ದು ಸಾಯಬೇಕಿತ್ತು’ ಎಂದಿದ್ದಾರೆ. ಸಾಕಷ್ಟು ಅವಾಚ್ಯ ಮಾತುಗಳಿಂದ ನಿಂದಿಸಿದ್ದಾರೆ. ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಸ್ಥಳೀಯರಿಗೂ ‘ರಿಪೇರಿಗೆ 50 ಲಕ್ಷ ರೂ. ಕೊಡುವ ಹಾಗಿದ್ದರೆ ಮಾತಾಡಿ’ ಎಂದು ಬೆದರಿಕೆ ಹಾಕಿದ್ದಾರೆ. ಭವಾನಿ ರೇವಣ್ಣ ಅವರು ಈ ಬಾರಿ ಶಾಸಕಿಯಾಗುವ ಸಮೀಪದಲ್ಲಿದ್ದವರು. ಮುಂದೊಂದು ದಿನ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಅಭ್ಯರ್ಥಿಯಾಗುವ ಆಕಾಂಕ್ಷೆ ಹೊಂದಿದವರೂ ಹೌದು. ಆದರೆ, ಇಂತಹ ಕ್ಷುಲ್ಲಕ ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ನಾಳೆ ವಿಧಾನಸಭೆ ಮೆಟ್ಟಿಲು ಹತ್ತುವಂತೆ ಆಗಬಾರದು. ಜನರು ಇಂತವರ ದುರ್ವರ್ತನೆಗಳಿಗೆ ಬೆಲೆ ನೀಡಬಾರದು. ಖಡಾಖಂಡಿತವಾಗಿ ತಿರಸ್ಕರಿಸಬೇಕು. ಭವಾನಿ ಅವರ ವರ್ತನೆಗೆ ಸಂಬಂಧಿಸಿ ದೇವೇಗೌಡರಿಂದ ಸಂಸದ ಪ್ರಜ್ವಲ್ ರೇವಣ್ಣವರೆಗೆ ಎಲ್ಲರೂ ರಾಜ್ಯದ ಜನತೆಯ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದರು.
“ಭವಾನಿ ರೇವಣ್ಣ ಅವರು ವಾಹನಕ್ಕೆ ವಿಮೆ ಕ್ಲೈಮ್ ಮಾಡಬಹುದು. ಬೈಕ್ ಸವಾರನ ಪ್ರಾಣಕ್ಕೆ ಏನಾದರೂ ಆದರೆ ಯಾರು ಹೊಣೆ? ಪದೇ ಪದೆ ಒಂದೂವರೆ ಕೋಟಿ ಕಾರು ಎನ್ನುತ್ತಿದ್ದಾರೆ. ಇವರೇನು ಸ್ವತಃ ದುಡಿದು ಇಷ್ಟು ದುಬಾರಿಯ ಕಾರನ್ನು ಕೊಂಡಿದ್ದಾರೆಯೇ?” ಎಂದು ಪ್ರಶ್ನಿಸಿದರು.