ಗಾಳಿಯಲ್ಲಿ ಗುಂಡು ಹಾರಿಸಿ ಉದ್ಯಮಿಯೊಬ್ಬರಿಂದ 3.50 ಕೋಟಿ ರೂಪಾಯಿ ದರೋಡೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹಣಮಂತವಾಡಿ ಗ್ರಾಮದ ಬಳಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಉದ್ಯಮಿ ಉಮಾಶಂಕರ್ ಎಂಬುವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ 3.50 ಕೋಟಿ ರೂ. ನಗದು ಇಟ್ಟುಕೊಂಡು ನ.28 ರಂದು ರಾತ್ರಿ 8.50 ಸುಮಾರಿಗೆ ಬಸವಕಲ್ಯಾಣದ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಮೂಲಕ ಮಹಾರಾಷ್ಟ್ರದ ಫಂಡರಪುರಕ್ಕೆ ಹೋಗುತ್ತಿದ್ದರು. ಹಾಲು ಖರೀದಿಸಿದ ರೈತರಿಗೆ ಹಣ ನೀಡಲು ಹೋಗುತ್ತಿದ್ದರು. ಈ ವೇಳೆ ನಾಲ್ವರು ದ್ವಿಚಕ್ರ ವಾಹನಗಳಲ್ಲಿ ಬಂದು, ಕಾರು ಅಡ್ಡಗಟ್ಟಿ ತಮ್ಮನ್ನು ಗುಂಡುರೆಡ್ಡಿ, ವಿಜಯರೆಡ್ಡಿ ಎಂದು ಹೇಳಿಕೊಂಡು ಗುಂಡುರೆಡ್ಡಿ ಎಂಬುವರು ಪಿಸ್ತೂಲ್ ತೆಗೆದು ಗಾಳಿಯಲ್ಲಿ ಎರಡು ಗುಂಡುಗಳನ್ನು ಹಾರಿಸಿದ್ದಾರೆ.
ಬಳಿಕ ಉದ್ಯಮಿ ಉಮಾಶಂಕರ ಅವರ ಹಣೆಗೆ ಪಿಸ್ತೂಲ್ ಇಟ್ಟು ಅವರ ಬಳಿಯಿದ್ದ 3.50 ಕೋಟಿ ಹಣವನ್ನು ದೋಚಿದ್ದಾರೆ. ಈ ಬಗ್ಗೆ ಬುಧವಾರ ಬೆಳಗ್ಗೆ ಉಮಾಶಂಕರ ಅವರು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸುಲಿಗೆ, ಕೊಲೆಯತ್ನ, ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.
ಹುಮನಾಬಾದ್ ಡಿವೈಎಸ್ಪಿ ಜೆ.ಎಸ್.ನ್ಯಾಮೆಗೌಡರ್, ಮಂಠಾಳ ಸಿಪಿಐ ಕೃಷ್ಣಕುಮಾರ ಪಾಟೀಲ್, ಬಸವಕಲ್ಯಾಣ ಪಿಎಸ್‌ಐ ವಾಸೀಂ ಪಟೇಲ್ ನೇತ್ರತ್ವದಲ್ಲಿ ತಂಡ ರಚಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈಗಲಾದರೂ ಚರ್ಚೆಗೆ ಬರುತ್ತದೆಯೇ ಪ್ರಾದೇಶಿಕ ಅಸಮಾನತೆ ಕೂಗು
ಪ್ರಕರಣ ಭೇದಿಸಿದ ತಂಡ 24 ಗಂಟೆಗಳಲ್ಲಿ ಆರೋಪಿಗಳಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡ ಗುಂಡುರೆಡ್ಡಿ, ವಿಜಯ್ ರೆಡ್ಡಿ ಮತ್ತು ಸಂಜಯ ರೆಡ್ಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಾರಿಯಾಗಿರುವ ಒಬ್ಬನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳಿಂದ 2.62 ಕೋಟಿ ರೂ. ಹಾಗೂ ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಿಳಿಸಿದ್ದಾರೆ.