ವಾರಾಂತ್ಯಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಮಾಲ್, ಬೀಚ್ ಹಾಗೂ ವಸ್ತು ಪ್ರದರ್ಶನಗಳ ಮಳಿಗೆಗಳಿಗೆ ಭೇಟಿ ನೀಡುವಂತೆ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಲು ಪ್ರೋತ್ಸಾಹ ನೀಡುವ ಮೂಲಕ ಪೋಷಕರು ಬಾಲ್ಯದಲ್ಲಿಯೇ ಮಕ್ಕಳಿಗೆ ಸಾಹಿತ್ಯಾಸಕ್ತಿ ಬೆಳೆಸಬೇಕು ಎಂದು ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಕರೆ ನೀಡಿದರು.
ಅವರು ಇಂದು (ನ.29) ಬೆಂಗಳೂರಿನ ಗಾಂಧಿ ಭವನದಲ್ಲಿ ಲೇಖಕಿ ಡಾ.ಕೆ. ಷರೀಫಾ ಅವರಿಗೆ ಮುಸ್ಲಿಮ್ ಲೇಖಕರ ಸಂಘದಿಂದ ಕೊಡಮಾಡುವ 2022ನೇ ಸಾಲಿನ ಮರ್ಹೂಮ್ ಯು.ಟಿ. ಫರೀದ್ ಸ್ಮರಣಾರ್ಥ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮತ್ತು ಕನ್ನಡ, ಉರ್ದು ಕವಿಗೋಷ್ಠಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
‘ಇಂಟರ್ನೆಟ್‌ನ ಇಂದಿನ ಯುಗದಲ್ಲಿ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ, ವಾಸ್ತವವಾಗಿ ಸಾಹಿತ್ಯ ಕ್ಷೇತ್ರವು ಜೀವನದಲ್ಲಿ ಬೆಳೆಯಲು ವ್ಯಾಪಕ ಅವಕಾಶ ಒದಗಿಸುತ್ತದೆ. ಸಾಹಿತ್ಯವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಹಾಗಾಗಿ, ಮನೆಯಿಂದಲೇ ಈ ಕಾರ್ಯ ನಡೆಯಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಪೋಷಕರು ಸಾಹಿತ್ಯದ ಬಗ್ಗೆ ಉತ್ತೇಜನ ನೀಡಬೇಕು’ ಎಂದು ಯು ಟಿ ಖಾದರ್ ಅಭಿಪ್ರಾಯಿಸಿದರು.
“ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಮುಸ್ಲಿಮರ ಸಂಖ್ಯೆ ಬಹಳ ವಿರಳವಾಗಿತ್ತು. ಅದರಲ್ಲೂ ಮಹಿಳೆಯರು ಬಹಳ ಅಪರೂಪವಾಗಿದ್ದರು. ಕಾಲ ಬದಲಾದಂತೆ ಎಲ್ಲ ಕ್ಷೇತ್ರ ಬದಲಾಗಿದೆ. ಈಗ ಸಾಕಷ್ಟು ಮುಸ್ಲಿಮ್ ಸಮುದಾಯದ ಮಂದಿ ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಆ ಮೂಲಕ ಸಮುದಾಯದ ಒಳಗಿನ ತಲ್ಲಣಗಳನ್ನು ಹೊರ ಜಗತ್ತಿಗೆ ತಿಳಿಸುತ್ತಿದ್ದಾರೆ” ಎಂದು ಸ್ಪೀಕರ್ ಯು ಟಿ ಖಾದರ್ ತಿಳಿಸಿದರು.’
ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಹಿರಿಯ ಲೇಖಕಿ ಡಾ. ಕೆ. ಷರೀಫಾ, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್ ವಿವಾದ ಉಂಟು ಮಾಡಿ, ಆ ಬಳಿಕ ಮುಸ್ಲಿಮ್ ಸಮುದಾಯದ ಹಲವಾರು ಹೆಣ್ಣು ಮಕ್ಕಳು ಶಿಕ್ಷಣ ಕ್ಷೇತ್ರವನ್ನು ತೊರೆಯುವಂತೆ ವ್ಯವಸ್ಥಿತ ಷಡ್ಯಂತ್ರ ಮಾಡಲಾಯಿತು. ಮುಸ್ಲಿಮರ ಮೀಸಲಾತಿ ತೆಗೆಯಲಾಯಿತು, ವ್ಯಾಪಾರಕ್ಕೆ ದ್ವೇಷ ಹಚ್ಚಲಾಯಿತು. ಹಾಗಾಗಿ, ಈ ಹಿಂದಿನ ಸರ್ಕಾರದ ತೆಗೆದುಕೊಂಡ ಸಂವಿಧಾನ ವಿರೋಧಿ ನಿರ್ಧಾರಗಳನ್ನು ಈಗಿನ ಸರ್ಕಾರ ಹಿಂಪಡೆಯಬೇಕು. ವಿಧಾನಸಭೆಯಲ್ಲಿ ಸ್ಪೀಕರ್ ಯು ಟಿ ಖಾದರ್ ಅವರು ಈ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತರಬೇಕು’ ಎಂದು ಆಗ್ರಹಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಚಿಂತಕ, ಬರಹಗಾರ ನಟರಾಜ್ ಹುಳಿಯಾರ್ ಮಾತನಾಡಿ, “ಇಂದು ಕೋಮುದ್ವೇಷವೇ ಇಂದು ಬಹಳ ವಿಜ್ರಂಭಿಸುತ್ತಿದೆ. ಆದರೆ ವಾಸ್ತವವಾಗಿ ಸಾಹಿತ್ಯ ಕ್ಷೇತ್ರದ ಹೆಚ್ಚಿನ ಬರಹಗಾರರು ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ಪರವಾಗಿ ನಿಲುವು ಇರುವವವರೇ ಹೆಚ್ಚು ಇದ್ದಾರೆ. ಆ ಗ್ಯಾರಂಟಿ ಆಶ್ವಾಸನೆ ನಾನು ಓರ್ವ ಸಾಹಿತಿಯಾಗಿ ಕೊಡಬಲ್ಲೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಉರ್ದು-ಕನ್ನಡ ಕವಿ ಗೋಷ್ಠಿಯಲ್ಲಿ ಕವಿಗಳಾಗಿ ಭಾಗವಹಿಸಿದ್ದ ಶಿವಕುಮಾರ ಮಾವಲಿ, ಮುಹಮ್ಮದ್ ಆಝಮ್ ಶಾಹಿದ್, ಮುನೀರ್ ಅಹ್ಮದ್ ಜಾಮಿ, ಫರ್ಹನಾಝ್ ಮಸ್ಕಿ ಹಾಗೂ ನದೀಮ್ ಫಾರೂಖಿ ತಮ್ಮ ಕವನಗಳನ್ನು ವಾಚಿಸಿದರು.
ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ, ಏ.ಕೆ. ಕುಕ್ಕಿಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ನಿರೂಪಿಸಿದರು. ಸಲೀಂ ಬೋಳಂಗಡಿ ಸ್ತುತಿಗೀತೆ ಹಾಡಿದರೆ, ಸಯೀದ್ ಇಸ್ಮಾಯಿಲ್ ವಂದಿಸಿದರು.