ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಲ್ಲದೇ, ಬಿಸಿಲಿನ ತಾಪಮಾನಕ್ಕೆ ಜನರು ಕಂಗಾಲಾಗಿದ್ದಾರೆ. ಈ ನಡುವೆ, ನೀರಿನ ಸಮಸ್ಯೆಯೂ ಹೆಚ್ಚಳವಾಗಿದೆ. ಜತೆಗೆ, ಕಾಲರಾ, ನಿರ್ಜಲೀಕರಣ ಸೇರಿದಂತೆ ಇನ್ನಿತರ ರೋಗಗಳ ಭೀತಿಯೂ ಎದುರಾಗಿದೆ. ಹೀಗಾಗಿ, ನೀರಿನ ಕೊರತೆ ನಿಗಿಸಲು ಜಲಮಂಡಳಿ ಮತ್ತು ಬಿಬಿಎಂಪಿ ಹೊಸ ಬೋರೆವೆಲ್‌ಗಳನ್ನು ಕೊರೆಸುತ್ತಿದೆ. ಆದರೆ, ದಾರಿಯ ಬದಿಯಲ್ಲೇ ಮಣ್ಣಿನ ರಾಶಿಯನ್ನು ಬಿಟ್ಟು, ಸಂಚಾರಕ್ಕೆ ಅಡ್ಡಿಪಡಿಸಿದೆ. ಅಲ್ಲದೇ, ಗಾಳಿಯನ್ನೂ ಮಾಲಿನ್ಯಗೊಳಿಸುತ್ತಿದೆ.
ಬಿರುಸಿನ ಬೋರ್‌ವೆಲ್ ಕೊರೆಯುವಿಕೆಯು ಬೆಂಗಳೂರನ್ನ ಅವಶೇಷಗಳಲ್ಲಿ ಮುಳುಗುವಂತೆ ಮಾಡಿದೆ. ಇತ್ತೀಚೆಗಷ್ಟೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೂಡ್ಲು ರಸ್ತೆಯ ಲೇಔಟ್‌ನಲ್ಲಿ ಬೋರ್‌ವೆಲ್ ಅಗೆದ ಬಳಿಕ ಅಗೆದ ಮಣ್ಣನ್ನು ತೆರುವು ಮಾಡದೇ ಹಾಗೆಯೇ, ರಸ್ತೆ ಬದಿಗೆ ಬಿಟ್ಟಿದ್ದಾರೆ. ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿ ಮಾಲಿನ್ಯ ಉಂಟಾಗಿತ್ತು ಎಂದು ಆವಲಹಳ್ಳಿಯ ಮುನೇಶ್ವರ ಲೇಔಟ್ ನಿವಾಸಿಯೊಬ್ಬರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
“ಬೋರ್‌ವೆಲ್ ಕೊರೆಸಿ ಹಾಗೆಯೇ ಬಿಟ್ಟ ಅವಶೇಷಗಳನ್ನು ತೆರುವು ಮಾಡಲು ಎರಡು ಟ್ರ್ಯಾಕ್ಟರ್ ಬೇಕಾಗುತ್ತದೆ. ಬರೋಬ್ಬರಿ ₹2000 ವೆಚ್ಚವಾಗುತ್ತದೆ” ಎಂದು ಹೊರಮಾವು ನಿವಾಸಿಯೊಬ್ಬರು ಹೇಳಿದ್ದಾರೆ.
“ಬೋರ್‌ವೆಲ್ ಕೊರೆಸಿದ ನಂತರ ಉಳಿದಿರುವ ಮಣ್ಣಿನ ಅವಶೇಷಗಳನ್ನು ನಾವು ಎಲ್ಲಿಯೂ ಬಳಸುವುದಿಲ್ಲ. ಏಕೆಂದರೆ, ಅದು ಉತ್ತಮ ಗುಣಮಟ್ಟದ್ದಾಗಿಲ್ಲ. ನಾವು ಅದನ್ನು ನಗರದ ಹೊರವಲಯದಲ್ಲಿರುವ ಖಾಲಿ ಜಮೀನಿನಲ್ಲಿ ಒಣಗಲು ಬಿಡುತ್ತೇವೆ” ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದಲ್ಲಿನ ಮ್ಯಾನ್‌ಹೋಲ್‌ಗಳು, ಪೈಪ್‌ಲೈನ್‌ಗಳು ಹಾಗೂ ಗುಂಡಿಗಳನ್ನು ಪುನಃ ತುಂಬಿಸಲು ಬಿಡಬ್ಲ್ಯೂಎಸ್‌ಎಸ್‌ಬಿ ಬೋರ್‌ವೆಲ್ ಮಣ್ಣಿನ ಧೂಳನ್ನು ಬಳಸುತ್ತದೆ. ಮಂಡಳಿ 200ಕ್ಕೂ ಹೆಚ್ಚು ಬೋರ್‌ವೆಲ್‌ಗಳನ್ನು ಕೊರೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್‌ಎಸ್‌ಬಿ) ಹೆಣ್ಣೂರಿನ ಪೂರ್ಣಾಂಜನೇಯ ಲೇಔಟ್, ಕುಳ್ಳಪ್ಪ ವೃತ್ತದ ಬಳಿಯ ವೆಂಕಟೇಶಪ್ಪ ಲೇಔಟ್ ಮತ್ತು ನಾಗವಾರದ ಬೈರಪ್ಪ ಲೇಔಟ್‌ನಂತಹ ವಸತಿ ಪ್ರದೇಶಗಳಲ್ಲಿ ಹೆಚ್ಚಿನ ಬೋರ್‌ವೆಲ್‌ಗಳನ್ನು ಕೊರೆಸಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಅಗೆದಿರುವ ಮಣ್ಣಿನ ಅವಶೇಷಗಳು ಮತ್ತು ಮರಳಿನ ಧೂಳಿನ ಬಗ್ಗೆ ತಮ್ಮ ಬಳಿ ದಾಖಲೆ ಇಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಪೂರ್ಣ; ಮೇ 8ಕ್ಕೆ ಫಲಿತಾಂಶ ಪ್ರಕಟ ಸಾಧ್ಯತೆ
“ನಾವು ನಿರ್ದಿಷ್ಟವಾಗಿ ಬೋರ್‌ವೆಲ್ ಕೊರೆತದಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪಡೆಯುವುದಿಲ್ಲ” ಎಂದು ಚಿಕ್ಕಜಾಲದಲ್ಲಿರುವ ರಾಕ್ ಕ್ರಿಸ್ಟಲ್ಸ್, ನಿರ್ಮಾಣ ಮತ್ತು ಡೆಮಾಲಿಷನ್ (ಸಿ & ಡಿ) ತ್ಯಾಜ್ಯ ಸಂಸ್ಕರಣಾ ಘಟಕದ ಸಹ-ಮಾಲೀಕರಾಗಿರುವ ರಾಜೇಶ್ ಕೋರಹ್ ತಿಳಿಸಿದ್ದಾರೆ.
ಪ್ರಮುಖ ಬಿಲ್ಡರ್‌ಗಳು ಮತ್ತು ಗುತ್ತಿಗೆದಾರರಿಂದ ಸಿ & ಡಿ ತ್ಯಾಜ್ಯವನ್ನು ನಿರ್ವಹಿಸುವ ಕೊರಾಹ್, ಬೋರ್‌ವೆಲ್ ಕೊರೆಯುವ ಸಮಯದಲ್ಲಿ ಅಗೆದ ಮಣ್ಣು ಭೂಕುಸಿತಗಳಲ್ಲಿ ಕೊನೆಗೊಳ್ಳಬಹುದು. ಇದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ತನ್ನ ಘಟಕವು ಬಿಲ್ಡರ್‌ಗಳಿಂದ ಹೆಚ್ಚಿನ ಪ್ರಮಾಣದ ನಿರ್ಮಾಣ ಅವಶೇಷಗಳನ್ನು ಮಾತ್ರ ಪಡೆಯುತ್ತದೆ. ಬಿಬಿಎಂಪಿ ಅದನ್ನು ಕಾಂಕ್ರೀಟ್, ಇಟ್ಟಿಗೆ, ಗಾರೆ, ಮಣ್ಣು, ಉಕ್ಕು ಮತ್ತು ಪ್ಲಾಸ್ಟಿಕ್ ಎಂದು ಪ್ರತ್ಯೇಕಿಸುತ್ತದೆ. ಇವುಗಳನ್ನು ರಸ್ತೆ ನಿರ್ಮಾಣದಲ್ಲಿ ಬಳಸಲಾಗುವ ಘನ ಬ್ಲಾಕ್‌ಗಳಾಗಿ ಸಂಸ್ಕರಿಸಲಾಗುತ್ತದೆ. ಬೆಂಗಳೂರು ಪ್ರತಿದಿನ ಸುಮಾರು 3,000 ಟನ್ ನಿರ್ಮಾಣ ತ್ಯಾಜ್ಯವನ್ನು ಉತ್ಪಾದಿಸುತ್ತದೆ ಎಂದು ಅವರು ವಿವರಿಸಿದ್ದಾರೆ.