ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗವು ಕೋವಿಡ್ ಹಗರಣದ ಬಗ್ಗೆ ತನಿಖೆ ನಡೆಸಿದ್ದು, ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಕೊರೋನ ಸಮಯದಲ್ಲಿ 1,163.65 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದ ಬಿಜೆಪಿ ಸರ್ಕಾರ, 3,392 ಕೋಟಿ ರೂ.ಗಳ ಲೆಕ್ಕ ತೋರಿಸಿ, ಸುಮಾರು 2,200 ಕೋಟಿ ರೂ. ಲೂಟಿ ಮಾಡಿದೆ ಎಂದು ಆರೋಪವಿದೆ. ಇದು ವರದಿಯಲ್ಲಿ ಹೊರಬೀಳಬಹುದೇ?
ಸದ್ಯ ರಾಜ್ಯ ರಾಜಕಾರಣದಲ್ಲಿ ಕೊರೋನ ಹಗರಣ ಮತ್ತೆ ಸದ್ದು ಮಾಡುತ್ತಿದೆ. 2020ರಲ್ಲಿ ಕೊರೋನ ದೇಶವನ್ನು ವ್ಯಾಪಿಸಿಕೊಂಡು, ಮಾರಣಹೋಮ ನಡಸುತ್ತಿದ್ದಾಗಲೂ ಕರ್ನಾಟಕದಲ್ಲಿ ಅಂದಿನ ರಾಜ್ಯ ಬಿಜೆಪಿ ಸರ್ಕಾರ ಕೊರೋನ ನಿರ್ವಹಣೆಯಲ್ಲೂ ಭ್ರಷ್ಟಾಚಾರ ನಡೆಸಿತ್ತು. ಕೋವಿಡ್ ನಿರ್ವಹಣೆಯಲ್ಲಿ ಬರೋಬ್ಬರಿ 40,000 ಕೋಟಿ ರೂ. ಹಗರಣ ನಡೆದಿದೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಆರೋಪಿಸಿದ್ದರು. ಅವರ ಆರೋಪದ ಬಳಿಕ ಹಗರಣ ಬಯಲಿಗೆ ಬಂದಿತ್ತು. ಮಾತ್ರವಲ್ಲದೆ, ಕೊರೋನ ವೈದ್ಯಕೀಯ ಕಿಟ್ ಖರೀದಿಯಲ್ಲಿಯೇ 2,200 ಕೋಟಿ ರೂ. ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಮಾತ್ರವಲ್ಲದೆ, 2021ರ ಜುಲೈ- ಆಗಸ್ಟ್‌ನಲ್ಲಿ ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’ ಬಿಡುಗಡೆ ಮಾಡಿದ ವರದಿಯಲ್ಲಿ ಕೋವಿಡ್ ಹಗರಣದ ಬಗ್ಗೆ ಗಂಭೀರ ಆರೋಪಗಳಿದ್ದವು.
ಆದಾಗ್ಯೂ, 40% ಕಮಿಷನ್ ಸೇರಿದಂತೆ ನಾನಾ ಆರೋಪಗಳನ್ನು ಎದುರಿಸುತ್ತಿದ್ದ ಬಿಜೆಪಿ ಸರ್ಕಾರ, ಎಲ್ಲ ಆರೋಪಗಳನ್ನು ತಳ್ಳಿ ಹಾಕಿ, ವಿಲಾಸಿ ಆಡಳಿತ ನಡೆಸುತ್ತಿತ್ತು. 2023ರ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚನೆ ಮಾಡಿತ್ತು. ಅಂತೆಯೇ, ಕೋವಿಡ್ ಹಗರಣದ ಬಗ್ಗೆ ತನಿಖೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದರು.
ಇದೀಗ, ಆಯೋಗವು ಕೋವಿಡ್ ಹಗರಣದ ಬಗ್ಗೆ ತನಿಖೆ ನಡೆಸಿದ್ದು, ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ವರದಿ ಬಂದ ಕೂಡಲೇ ಕೊರೋನ ಸಮಯದಲ್ಲಿ ಆರೋಗ್ಯ ಸಚಿವರಾಗಿದ್ದ, ಹಾಲಿ ಸಂಸದ ಡಾ. ಕೆ ಸುಧಾಕರ್ ಬಡಬಡಾಯಿಸುತ್ತಿದ್ದಾರೆ. ”ನಾನು ಕೋವಿಡ್ ಕಾಲದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಆಗಿದ್ದೆ. ಆ ವೇಳೆ ನಾನು ಅಂತಃಕರಣದಿಂದ ಕೆಲಸ ಮಾಡಿದ್ದೇನೆ. ನನ್ನ ಪ್ರಾಣ ಒತ್ತೆ ಇಟ್ಟು ಊಟ ತಿಂಡಿ ಮರೆತು ಹಗಲಿರುಳು ರೋಗಿಗಳ ಸೇವೆ ಮಾಡಿದ್ದೇನೆ. ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ” ಎನ್ನುತ್ತಿದ್ದಾರೆ.

ಸದ್ಯ, ಇನ್ನೂ ಜಾನ್ ಮೈಕಲ್ ಕುನ್ಹಾ ಅವರ ಆಯೋಗ ಸಲ್ಲಿಸಿದ ವರದಿಯಲ್ಲಿ ಏನಿದೆ ಎಂಬುದು ಬಹಿರಂಗವಾಗಿಲ್ಲ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವರದಿಯ ಬಗ್ಗೆ ಚರ್ಚೆಗಳು ನಡೆಯಲಿವೆ. ಆದರೂ, ವರದಿಯ ಮಾಹಿತಿ ಹೊರಬರುವ ಮುನ್ನವೇ ಸುಧಾಕರ್ ‘ಕುಂಬಳಕಾಯಿ ಕಳ್ಳ ಎಂದರೆ, ಹೆಗಲು ಮುಟ್ಟಿ ನೋಡಿಕೊಂಡವರಂತೆ’ ಮಾತನಾಡುತ್ತಿದ್ದಾರೆ. ಇದು, ಭ್ರಷ್ಟಾಚಾರದ ವಾಸನೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಏನೇ ಇರಲಿ, ಇಡೀ ದೇಶವೇ ಕೊರೋನ ಅಬ್ಬರದಿಂದ ಸ್ತಬ್ಧವಾಗಿತ್ತು. ಆದರೂ, ರಾಜ್ಯದಲ್ಲಿ ಹಗರಣ, ಅಕ್ರಮ, ಭ್ರಷ್ಟಾಚಾರಗಳು ‘ಆಕ್ಟಿವ್’ ಆಗಿದ್ದವು. ರಾಜ್ಯದಲ್ಲಿ ಚಾಮರಾಜನಗರ ಆಮ್ಲಜನಕ ದುರಂತ, ಕೋವಿಡ್‌ನಿಂದ ಸಾವಿರಾರು ಜನರ ಮಾರಣಹೋಮ ನಡೆಯುತ್ತಿದ್ದಾಗಲೂ ವೆಂಟಿಲೇಟರ್ ಖರೀದಿ, ಮಾಸ್ಕ್ ಖರೀದಿ, ಬೆಡ್‌ಗಳ ಬಾಡಿಗೆ, ವೈದ್ಯಕೀಯ ಉಪಕರಣಗಳು ಹಾಗೂ ಸಾಮಗ್ರಿಗಳ ಖರೀದಿ, ಆಮ್ಲಜನಕ ನಿರ್ವಹಣೆ ನೆಪದಲ್ಲಿ ಸಾವಿರಾರು ಕೋಟಿ ರೂ. ಹಗರಣ ಎಗ್ಗಿಲ್ಲದೆ ನಡೆಯುತ್ತಿತ್ತು.
ಒಂದು ವೆಂಟಿಲೇಟರ್‌ಗೆ ಮಾರುಕಟ್ಟೆ ಬೆಲೆ 4 ಲಕ್ಷ ರೂ. ಇದ್ದಾಗಲೂ ರಾಜ್ಯ ಬಿಜೆಪಿ ಸರ್ಕಾರ ಪ್ರತಿ ವೆಂಟಿಲೇಟರ್‌ಗೆ ಮೂರು ಪಟ್ಟು ಹೆಚ್ಚು, ಅಂದರೆ, 12 ಲಕ್ಷ ರೂ. ಕೊಟ್ಟು ಖರೀದಿ ಮಾಡಿತ್ತು. 40 ಕೋಟಿ ರೂ.ಗೆ ದೊರೆಯಬಹುದಾಗಿದ್ದ 1,000 ವೆಂಟಿಲೇಟರ್‌ಗಳನ್ನು 120 ಕೋಟಿ ರೂ. ಖರ್ಚು ಮಾಡಿ ಖರೀದಿ ಮಾಡಿತ್ತು.
ಅಲ್ಲದೆ, ಒಟ್ಟು 48.65 ಕೋಟಿ ರೂ. ಮೌಲ್ಯದ 4.89 ಲಕ್ಷ ಪಿಪಿಇ ಕಿಟ್‌ಗಳನ್ನು 150 ಕೋಟಿ ರೂ.ಗೆ ಖರೀದಿ ಮಾಡಿತ್ತು. ಪಿಪಿಟಿ ಕಿಟ್ ಖರೀದಿಯಲ್ಲಿ ಬರೋಬ್ಬರಿ 101.35 ಕೋಟಿ ರೂ. ಅಕ್ರಮ ನಡೆದಿತ್ತು. ಜೊತೆಗೆ, ಸರ್ಜಿಕಲ್ ಮಾಸ್ಕ್‌ಗಳ ಖರೀದಿಯಲ್ಲೂ ಅಕ್ರಮ ಎಸಗಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, 45 ರೂ. ಮೌಲ್ಯದ ಮಾಸ್ಕ್‌ಗೆ 485 ರೂ. ಪಾವತಿಸಿರುವುದಾಗಿ ಹೇಳಿಕೊಂಡಿತ್ತು. 10 ಲಕ್ಷ ಮಾಸ್ಕ್ ಖರೀದಿಗಾಗಿ 40 ಕೋಟಿ ರೂ. ಪಾವತಿಸಿದ್ದಾಗಿ ಲೆಕ್ಕ ತೋರಿಸಿತ್ತು.
ಇನ್ನು, 200 ರೂಪಾಯಿಯ ಸರ್ಜಿಕಲ್ ಕೈಗವಸಿಗೆ 400 ರೂಪಾಯಿ ಲೆಕ್ಕ ತೋರಿಸಿ 10 ಲಕ್ಷ ಕೈಗವಸಿಗೆ 40 ಕೋಟಿ ರೂ. ಖರ್ಚು ಮಾಡಿದ್ದಾಗಿ ಹೇಳಿಕೊಂಡಿತ್ತು. ಜೊತೆಗೆ, 40 ಕೋಟಿ ರೂ. ಬೆಲೆ ಬಾಳುವ ಒಟ್ಟು 20 ಲಕ್ಷ ಪರೀಕ್ಷಾ ಕೈಗವಸುಗಳಿಗೆ 65 ಕೋಟಿ ರೂ. ವ್ಯಯಿಸಿದ್ದಾಗಿ ಲೆಕ್ಕ ತೋರಿಸಿತ್ತು.

ಆಮ್ಲಜನಕ ಕೊರತೆಯಿಂದ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ, ಅದೇ ಆಮ್ಲಜನಕದ ಸಿಲಿಂಡರ್ ಖರೀದಿಯಲ್ಲಿ ಬಿಜೆಪಿ ಸರ್ಕಾರ ಅಕ್ರಮ ಎಸಗಿತ್ತು. ಒಟ್ಟು 43 ಕೋಟಿ ರೂ. ಮೌಲ್ಯದ 5,000 ಆಮ್ಲಜನಕ ಸಿಲಿಂಡರ್ ಖರೀದಿಗೆ 80 ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳಿಕೊಂಡಿತ್ತು. 6.5 ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿ, 530 ಕೋಟಿ ರೂ. ವ್ಯಯಿಸಿದ್ದಾಗಿ ಸರ್ಕಾರ ಹೇಳಿಕೊಂಡಿತ್ತು. ಆದರೆ, ಕೋವಿಡ್ ಪರೀಕ್ಷಾ ಕಿಟ್ ಮಾರುಕಟ್ಟೆ ದರ 4,000 ರೂ. ಇದ್ದು, 248 ಕೋಟಿ ರೂ. ಮಾತ್ರವೇ ಖರ್ಚಾಗಿದೆ ಎಂದು ಹೇಳಲಾಗಿದೆ. ಇನ್ನು ಸೋಂಕಿತರ ಆರೈಕೆಗಾಗಿ 100 ಕೋಟಿ ರೂ. ಖರ್ಚು ಮಾಡಿ, 525 ಕೋರಿ ರೂ. ಖರ್ಚಾಗಿದೆ ಎಂದೂ ಇತರೆ ವೈದ್ಯಕೀಯ ವೆಚ್ಚವಾಗಿ 600 ಕೋಟಿ ರೂ. ವ್ಯಯಿಸಿ, 1,737 ಕೋಟಿ ರೂ. ಖರ್ಚಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ ಎಂದು ಆರೋಪಿಸಲಾಗಿದೆ. ಒಟ್ಟಾರೆಯಾಗಿ ಕೊರೋನ ಸಮಯದಲ್ಲಿ 1,163.65 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದ ಬಿಜೆಪಿ ಸರ್ಕಾರ, 3,392 ಕೋಟಿ ರೂ.ಗಳ ಲೆಕ್ಕ ತೋರಿಸಿ, ಸುಮಾರು 2,200 ಕೋಟಿ ರೂ. ಲೂಟಿ ಮಾಡಿದೆ ಎಂದು ಆರೋಪಿಸಲಾಗಿದೆ.
ಕೊರೋನ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಅಕ್ರಮ ಎಸಗಿದೆ ಎಂಬ ಆರೋಪಗಳು ಕೇಳಿಬಂದಾಗಲೂ, ಸ್ವತಃ ಬಿಜೆಪಿ ಶಾಸಕರೇ ತಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಿದಾಗಲೂ, ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’ ಕೋವಿಡ್ ಅಕ್ರಮದ ಬಗ್ಗೆ ಆರೋಪಿಸಿದಾಗಲೂ ‘ನಾ ಕಾವೂಂಗಾ – ನಾ ಖಾನೇ ದೂಂಗಾ’ ಎನ್ನುವ ಪ್ರಧಾನಿ ಮೋದಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಯಾವುದೇ ತನಿಖಾ ಸಂಸ್ಥೆಗಳು ಈ ಬಗ್ಗೆ ತನಿಖೆ ನಡೆಸಲಿಲ್ಲ.
ಈ ವರದಿ ಓದಿದ್ದೀರಾ?: ಕೊರೋನಗೆ ದೇಶ ತತ್ತರ; 20 ಲಕ್ಷ ಕೋಟಿ ಏನಾಯ್ತು? ಪಿಎಂ-ಕೇರ್ಸ್ ಎಲ್ಲೋಯ್ತು?
ಅಂದಹಾಗೆ, ಕೊರೋನ ವಿರುದ್ಧ ಹೋರಾಟಕ್ಕಾಗಿ ಜನರು ದೇಣಿಗೆ ನೀಡಬೇಕೆಂದು ಕೇಳಿಕೊಂಡಿದ್ದ ಮೋದಿ, ‘ಪಿಎಂ ಕೇರ್ಸ್’ ನಿಧಿ ತೆರೆದಿದ್ದರು. ಮಾಹಿತಿಯ ಪ್ರಕಾರ, ‘ಪಿಎಂ-ಕೇರ್ಸ್’ಗೆ ಬರೋಬ್ಬರಿ 12,691.82 ಕೋಟಿ ರೂ. ಹಣ ಹರಿದುಬಂದಿದೆ. ಈ ಮೊತ್ತದಲ್ಲಿ, ಹಣಕಾಸು ವರ್ಷದಲ್ಲಿ ವಿವಿಧ ಕೋವಿಡ್-19 ಸಂಬಂಧಿತ ಯೋಜನೆಗಳಿಗಾಗಿ 2020-21ರಲ್ಲಿ 3,976.17 ಕೋಟಿ ರೂ. ಹಾಗೂ 2021-22ನೇ 3,716.29 ಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡಲಾಗಿದೆ. ಅಲ್ಲದೆ 5,415.65 ಕೋಟಿ ರೂ.ಗಳು ಸರ್ಕಾರದ ಬಳಿ ಇದೆ ಎಂದು ವರದಿಯಾಗಿದೆ.
ಆದರೆ, ಪಿಎಂ-ಕೇರ್ಸ್ ಸಾರ್ವಜನಿಕ ನಿಧಿಯಲ್ಲ. ಅದರ ಬಗ್ಗೆ ಮಾಹಿತಿಯನ್ನು ಸಾರ್ವಜನಿಕಗೊಳಿಸಲು ಸಾಧ್ಯವಿಲ್ಲ ಎಂದೂ ಹೇಳಿರುವ ಮೋದಿ ಸರ್ಕಾರ, ಆ ಹಣದ ಮಾಹಿತಿಯನ್ನು ಗೌಪ್ಯವಾಗಿ ಇರಿಸಿದೆ. ಪಿಎಂ-ಕೇರ್ಸ್‌ನಲ್ಲಿ ಉಳಿಸಿದ್ದ 5,415 ಕೋಟಿ ರೂ. ಏನಾಯಿತು ಎಂಬ ಪ್ರಶ್ನೆಗೆ ಈವರೆಗೆ ಉತ್ತರ ದೊರೆತಿಲ್ಲ.
ಹೀಗಾಗಿ, ಮೋದಿ ಅವರೇ ಸ್ಥಾಪಿಸಿದ ಪಿಎಂ-ಕೇರ್ಸ್ ಕತೆಯನ್ನೇ ಮೋದಿ ಸರ್ಕಾರ ಜನರಿಗೆ ತಿಳಿಸಲು ಸಿದ್ದರಿಲ್ಲದಿರುವಾಗ, ಕರ್ನಾಟಕ ಕೋವಿಡ್ ಹಗರಣದ ಬಗ್ಗೆ ಮೋದಿ ಅವರಿಂದ ಕ್ರಮ ನಿರೀಕ್ಷಿಸಲು ಸಾಧ್ಯವೇ?
ಅದೇನೆ ಇರಲಿ, ರಾಜ್ಯ ಕಾಂಗ್ರೆಸ್ ಸರ್ಕಾರ ನೇಮಿಸಿದ್ದ ತನಿಖಾ ಆಯೋಗವು ಸದ್ಯ ಮಧ್ಯಂತರ ವರದಿ ಸಲ್ಲಿಸಿದೆ. ವರದಿಯಲ್ಲಿ ಏನಿದೆ? ಅಕ್ರಮ, ಹಗರಣ ಸಾಬೀತಾಗಿದೆಯೇ? ಆಯೋಗವು ಕ್ರಮಕ್ಕೆ ಶಿಫಾರಸು ಮಾಡಿದೆಯೇ? ಕಾದು ನೋಡೋಣ…