“ಬೆಂಗಳೂರಿನ ಬಹುತೇಕ ಪ್ರದೇಶಗಳಿಗೆ ಭೇಟಿ ನೀಡಿ, ನೀರಿನ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಬಡ ಜನರು ಹೆಚ್ಚಾಗಿ ವಾಸಿಸುವ ಕೊಳಚೆ ಪ್ರದೇಶಗಳು ಹಾಗೂ ಜನಸಾಂದ್ರತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರತಿನಿತ್ಯ ಈ ಪ್ರದೇಶಗಳಿಗೆ 1 ಲಕ್ಷ ಲೀಟರ್‌ಗಳಷ್ಟು ಕುಡಿಯುವ ನೀರನ್ನ ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ” ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ. ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ನಗರದ ನಾಯಂಡಹಳ್ಳಿ-ಪಂತರಪಾಳ್ಯದ ಅಂಬೇಡ್ಕರ್ ಸ್ಲಂ, ಗಾಂಧಿನಗರ ಮತ್ತು ಬಂಗಾರಪ್ಪ ನಗರ ಸ್ಲಂಗಳಿಗೆ ಭಾನುವಾರ ಬೆಳಗ್ಗೆ ಭೇಟಿ ನೀಡಿ, ಕುಡಿಯುವ ನೀರಿನ ಪೂರೈಕೆಯ ಬಗ್ಗೆ ಬಗ್ಗೆ ಪರಿಶೀಲನೆ ನಡೆಸಿದರು.
“ಅಂಬೇಡ್ಕರ್ ಸ್ಲಂ ನಲ್ಲಿ 34 ಬ್ಲಾಕ್‌ಗಳಲ್ಲಿ 1,088 ಮನೆಗಳಿದ್ದು, ಸುಮಾರು 8 ಸಾವಿರ ಜನರು ವಾಸಿಸುತ್ತಿದ್ದಾರೆ. ಸ್ಲಂ ಬೋರ್ಡ್ ವತಿಯಿಂದ ಕೊರೆಸಲಾಗಿದ್ದ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಕುಸಿದಿದೆ. 22 ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಈ ಪ್ರದೇಶಧ ವಿವಿಧೆಡೆ ಇಡಲಾಗಿದ್ದು, ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನ ಪೂರೈಸಲಾಗುತ್ತಿದೆ. ಪ್ರತಿ ದಿನ ಎರಡು ಬಾರಿ ಸಿಂಟೆಕ್ಸ್ ಟ್ಯಾಂಕ್‌ಗಳಿಗೆ ನೀರು ತುಂಬಿಸಲಾಗುತ್ತಿದ್ದು, ಪ್ರತಿ ದಿನ ಒಂದು ಲಕ್ಷ ಲೀಟರ್ ನೀರು ಪೂರೈಸಲಾಗುತ್ತಿದೆ” ಎಂದು ಹೇಳಿದರು.
“ಈ ಪ್ರದೇಶದಲ್ಲಿರುವವರು ಖಾಸಗಿ ಟ್ಯಾಂಕರ್‌ಗಳನ್ನು ಅವಲಂಬಿಸಿಲ್ಲ, ಅವರಿಗೆ ಆರ್ಥಿಕವಾಗಿ ಹೊರೆ ಆಗಬಾರದು ಎನ್ನುವ ಹಿನ್ನಲೆಯಲ್ಲಿ ಜಲಮಂಡಳಿ ವತಿಯಿಂದಲೇ ಉಚಿತವಾಗಿ ಕುಡಿಯುವ ನೀರು ಪೂರೈಸಲಾಗುತ್ತಿದೆ” ಎಂದರು.
“ಅಂಬೇಡ್ಕರ್ ಸ್ಲಂಗೆ ದಿನಕ್ಕೆ ಎರಡು ಬಾರಿ ನೀರು ಸರಬರಾಜು ಮಾಡಲಾಗುತ್ತಿದೆ. ಹೆಚ್ಚಿನ ನೀರಿನ ಬೇಡಿಕೆ ಬರುತ್ತಿದ್ದು, ಆದ್ಯತೆ ನೋಡಿಕೊಂಡು ತಕ್ಷಣವೇ ನೀರು ಪೂರೈಸಲಾಗುವುದು” ಎಂದು ಭರವಸೆ ನೀಡಿದರು.
“ನಗರದ ಜನತೆಗೆ ಕುಡಿಯುವ ನೀರನ್ನ ಪೂರೈಸುವ ದೃಷ್ಟಿಯಿಂದ ಜಲಮಂಡಳಿಯ ಶ್ರಮಜೀವಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಕಾವೇರಿ ನೀರು ಸರಬರಾಜು ಆಗುವ ಮಾರ್ಗದಲ್ಲಿ ಮಾರ್ಚ್ 23ರಂದು ರಾತ್ರಿ ಅಡಚಣೆ ಉಂಟಾಗಿತ್ತು. ರಾತ್ರೋರಾತ್ರಿ ನಮ್ಮ ಸಿಬ್ಬಂದಿ ವರ್ಗದವರು ಈ ದುರಸ್ತಿ ಕಾರ್ಯವನ್ನು ಕೈಗೊಳ್ಳುವುದರ ಮೂಲಕ ನೀರು ಸರಾಗವಾಗಿ ಹರಿಯಲು ನೆರವಾದರು. ಇದರಿಂದ ಆಗಬಹುದಾಗಿದ್ದ ನೀರಿನ ಅಭಾವವನ್ನು ತಪ್ಪಿಸಿದ್ದಾರೆ. ಇದಕ್ಕೆ ಕಾರಣರಾದ ಜಲಮಂಡಳಿಯ ಶ್ರಮಜೀವಿಗಳಿಗೆ ನಮನಗಳು” ಎಂದು ಹೇಳಿದರು.
“ನಗರದ ಹೊರ ವಲಯದ 110 ಹಳ್ಳಿಗಳಲ್ಲಿ ಕಾವೇರಿ ನೀರಿನ ಸಂಪರ್ಕವಿಲ್ಲ. ಈ ಪ್ರದೇಶಗಳು ಬೋರ್‌ವೆಲ್‌ಗಳನ್ನೇ ಅವಲಂಬಿಸಿವೆ. ಇಂತಹ ಕಡೆ ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಬಿಡಬ್ಲ್ಯುಎಸ್‌ಎಸ್‌ಬಿ-ಬಿಬಿಎಂಪಿ ಜಂಟಿಯಾಗಿ ನೀರು ಪೂರೈಕೆ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉತ್ತರಪ್ರದೇಶ | ಹೋಳಿ ಆಚರಣೆ ವೇಳೆ ಮುಸ್ಲಿಂ ಮಹಿಳೆಯರಿಗೆ ಕಿರುಕುಳ; ನಾಲ್ವರ ಬಂಧನ
ಕೆಂಗೇರಿಯ ಗಾಂಧಿನಗರ ಹಾಗೂ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದ ಸ್ಲಂಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಅಗತ್ಯವಿದ್ದಲ್ಲಿ ಹೆಚ್ಚುವರಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವಂತೆ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲಮಂಡಳಿಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.