ದೇವಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ಡೋಲು ಬಾರಿಸಲು ನಿರಾಕರಿಸಿದ 65 ವರ್ಷದ ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಎಂ ಶ್ರೀಧರ್ ಅವರ ಪ್ರಕಾರ ”ದಲಿತ ಸಮುದಾಯದ ಪರಮಯ್ಯ ಎಂಬುವವರು ಅನಾರೋಗ್ಯದ ಕಾರಣ ಮಾಕೋಡು ಗ್ರಾಮದ ಬಸವೇಶ್ವರ ದೇವಸ್ಥಾನದ ವಾರ್ಷಿಕ ಪೂಜೆಯಲ್ಲಿ ಡೋಲು ಬಾರಿಸಲು ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸವರ್ಣೀಯ ಸಮುದಾಯದ ಕುಮಾರ್ ಎಂಬಾತ ಜಾತಿ ಹೆಸರಿನಲ್ಲಿ ಕೆಟ್ಟದಾಗಿ ನಿಂದಿಸಿ ಹಲ್ಲೆ ಮಾಡಿದ್ದಾನೆ” ಎಂದು ತಿಳಿಸಿದ್ದಾರೆ.
ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನವಿದ್ದು, ದಶಕಗಳಿಂದ ಎಲ್ಲ ಸಮುದಾಯದವರು ಒಟ್ಟಾಗಿ ವಾರ್ಷಿಕ ಪೂಜೆಯನ್ನು ಆಚರಿಸುತ್ತಿದ್ದಾರೆ. ದಲಿತ ಸಮುದಾಯದವರು ಡೋಲು ಬಾರಿಸುತ್ತಾರೆ. ಪರಮಯ್ಯ ಡೋಲು ಬಾರಿಸಲು ನಿರಾಕರಿಸಿದಾಗ ಕುಮಾರ್ ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ನನ್ನ ತಂದೆ ಅಸ್ವಸ್ಥರಾಗಿದ್ದರು. ಅದಕ್ಕಾಗಿಯೇ ಅವರು ಡೋಲು ಬಾರಿಸಲು ನಿರಾಕರಿಸಿದರು. ದೇವಸ್ಥಾನದ ಸಮಿತಿಯವರಿಗೆ ನಾನು ಜವಾಬ್ದಾರಿ ವಹಿಸುತ್ತೇನೆ ಎಂದು ತಿಳಿಸಿದರೂ ಆರೋಪಿಗಳು ನನ್ನ ತಂದೆಗೆ ಡೋಲು ಬಾರಿಸುವಂತೆ ಒತ್ತಾಯಿಸಿದ್ದಾರೆ. ತಂದೆ ನಿರಾಕರಿಸಿದಾಗ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ’’ ಎಂದು ಪರಮಯ್ಯ ಅವರ ಪುತ್ರ ಬಸವರಾಜು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭಾರತೀಯ ಮೂಲದ ಸಮೀರ್ ಶಾ ಬಿಬಿಸಿ ಅಧ್ಯಕ್ಷರಾಗಿ ನೇಮಕ
ಮಾಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಶೈಲಜಾ ಮಾತನಾಡಿ, ”ಗ್ರಾಮದ ಆರಾಧ್ಯ ದೈವ ಎನಿಸಿರುವ ಬಸವೇಶ್ವರ ದೇವಸ್ಥಾನದ ಪೂಜೆಯಲ್ಲಿ ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯದವರು ದಶಕಗಳಿಂದ ಪಾಲ್ಗೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.
ಈ ಘಟನೆಯಿಂದ ಗ್ರಾಮದ ಐಕ್ಯತೆಗೆ ಧಕ್ಕೆ ಉಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ ಅವರು, ದೇವಸ್ಥಾನ ಸಮಿತಿ ಹಾಗೂ ಇತರರ ನಡುವಿನ ಬಿಕ್ಕಟ್ಟು ನಿವಾರಣೆಗೆ ಮುಂದಿನ ವಾರದಲ್ಲಿ ಎಲ್ಲ ಸಮುದಾಯಗಳ ಜತೆ ಸಭೆ ನಡೆಸಲಾಗುವುದು ಎಂದರು.
“ಆರೋಪಿ ಕುಮಾರ್ ದೇವಸ್ಥಾನ ಸಮಿತಿಯ ನಿರ್ದೇಶಕನಾಗಿದ್ದು, ನಾವು ಕುಮಾರ್ ವಿರುದ್ಧ ಎಸ್‌ಸಿ / ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ, ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಪಿರಿಯಾಪಟ್ಟಣ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಪರಮಯ್ಯ ಡಿಸ್ಚಾರ್ಜ್ ಆಗಿದ್ದಾರೆ” ಎಂದು ಇನ್‌ಸ್ಪೆಕ್ಟರ್ ಶ್ರೀಧರ್ ಹೇಳಿದ್ದಾರೆ.