ಬೆಂಗಳೂರಿನ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ‘ಮರೆಯಲಾಗದ ಮಹನೀಯರು‘ ಕಾರ್ಯಕ್ರಮದ ಭಾಗವಾಗಿ ಪ್ರೊ.ಬಿ.ವಿ.ವೀರಭದ್ರಪ್ಪ ವೈಚಾರಿಕ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು 2025,ಅಕ್ಟೋಬರ್ 6ರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪ್ರತಿಷ್ಠಾನದ ಅಧ್ಯಕ್ಷೆ ಎಚ್. ಆರ್. ಸುಜಾತಾ “ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ನಾಡಿನ ಯುವಜನತೆಗೆ ವೈಚಾರಿಕತೆಯ ಬರಹಗಾರರ ಬಗ್ಗೆ ತಿಳಿಸುವ ಸಲುವಾಗಿ ಮರೆಯಲಾಗದ ಮಹನೀಯರು ಕಾರ್ಯಕ್ರಮ ಆರಂಭಿಸಿದೆ. ಇದರ ಭಾಗವಾಗಿ ದಾವಣಗೆರೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ದಾವಣಗೆರೆಯಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿ ತಮ್ಮ ಚಿಂತನೆ, ಬರಹ, ಸಾಹಿತ್ಯ ಮತ್ತು ಬದುಕಿಗೆ ಅಂತರವಿಲ್ಲದೇ ಬದುಕಿ ಈ ಭಾಗದ ವೈಚಾರಿಕ ಪ್ರಜ್ಞೆ ಎಂದು ಹೆಸರಾದ ಪ್ರೊ.ಬಿ.ವಿ.ವೀರಭದ್ರಪ್ಪ ಅವರ ವೈಚಾರಿಕ ಸಾಹಿತ್ಯ ಕುರಿತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ತಿಳಿಸಿದರು.
“ಕಾರ್ಯಕ್ರಮವನ್ನು ಚಿಂತಕ ಡಾ.ಜಿ.ರಾಮಕೃಷ್ಣ ಉದ್ಘಾಟನೆ ಮಾಡಲಿದ್ದು , ಅತಿಥಿಗಳಾಗಿ ಕವಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಂಗಳೂರಿನ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಸುಜಾತಾ ವಹಿಸಲಿದ್ದಾರೆ. ಅನಂತಮ್ಮ ವೀರಭದ್ರಪ್ಪ ಉಪಸ್ಥಿತಿ ಇರಲಿದೆ” ಎಂದು ತಿಳಿಸಿದರು.
“ಕಾರ್ಯಕ್ರಮದಲ್ಲಿ ವಿಚಾರ ಗೋಷ್ಠಿಗಳು ನಡೆಯಲಿದ್ದು, ಬೆಳಗ್ಗೆ 11:15 ರಿಂದ “ಧರ್ಮ ಮತ್ತು ವೈಚಾರಿಕತೆ” ಕುರಿತು ಪ್ರಾಧ್ಯಾಪಕಿ ಡಾ.ಎಂ.ಎಸ್. ಆಶಾದೇವಿ, ಹಿರಿಯ ಬರಹಗಾರರಾದ ಸತೀಶ್ ಕುಲಕರ್ಣಿ ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 2 ರಿಂದ “ಮಹಿಳಾ ಮತ್ತು ದಲಿತ ನೋಟ” ವಿಷಯ ಕುರಿತು ಪ್ರಾಧ್ಯಾಪಕಿ ಡಾ.ಅನಸೂಯಾ ಕಾಂಬ್ಳೆ, ಕಥೆಗಾರರು, ಉಪನ್ಯಾಸಕರಾದ ಡಾ. ರವಿಕುಮಾರ್ ನೀಹ ವಿಷಯ ಮಂಡನೆ ಮಾಡಲಿದ್ದಾರೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಪಾತ್ರ, ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ
ಸಂಜೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಅಗ್ರಹಾರ ಕೃಷ್ಣಮೂರ್ತಿ ಭಾಗವಹಿಸಲಿದ್ದು, ಪ್ರತಿಷ್ಠಾನದ ರಾಜೇಂದ್ರ ಪ್ರಸಾದ್, ಚಂದ್ರಮೌಳಿ ಆರ್., ಸುಧಾ ಬಿ.ವಿ., ಮಲ್ಲಿಕಾರ್ಜುನ ಕಡಕೋಳ, ಪ್ರೊ. ಎಂ. ಬಸವರಾಜ್, ಶಿವನಕೆರೆ ಬಸವಲಿಂಗಪ್ಪ, ಬಿ.ಟಿ. ಜಾಹ್ನವಿ, ದಾದಾಪೀರ್ ನವಿಲೇಹಾಳ್, ಡಾ. ಮಂಜಣ್ಣ, ಡಾ. ಮಹಾಂತೇಶ ಪಾಟೀಲ, ಡಾ. ಶಿವಕುಮಾರ ಕಂಪ್ಲಿ, ಡಾ. ಕಾವ್ಯಶ್ರೀ ನಾಗಭೂಷಣ, ಬಾ.ಮ. ಬಸವರಾಜಯ್ಯ, ಕಂನಾಡಿಗ ನಾರಾಯಣ, ಬಿ.ಎನ್.ಮಲ್ಲೇಶ್, ಸಿದ್ದರಾಜು, ಪ್ರೊ. ಎ.ಬಿ. ರಾಮಚಂದ್ರಪ್ಪ, ಕಲಾವಿದ ಮಹಾಲಿಂಗಪ್ಪ, ಡಾ. ರಾಧಮ್ಮ, ಡಾ. ಫಕ್ಕಿರೇಶ ಹಳ್ಳಳ್ಳಿ, ಡಾ. ರುದ್ರಮುನಿ ಹಿರೇಮಠ, ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ರುದ್ರಪ್ಪ ಹನಗವಾಡಿ ಸೇರಿದಂತೆ ಇತರ ಚಿಂತಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.