ಭೂಸ್ವಾಧೀನ ನ್ಯಾಯಯೋಚಿತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯಿದೆ-2013 ಮತ್ತು ಕರ್ನಾಟಕ ಭೂಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದು ಹಿಂದಿನ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕೆಂದು ʼನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ’ ಆಂದೋಲನದ ಮುಖಂಡರು ಒತ್ತಾಯಿಸಿದ್ದಾರೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಸಮುದಾಯಗಳೊಂದಿಗೆ ಮತ್ತು ಚುನಾಯಿತ
ಪ್ರತಿನಿಧಿಗಳೊಂದಿಗೆ ಸುದೀರ್ಘ ಸಮಾಲೋಚನೆಯಲ್ಲಿ ‘ಭೂಸ್ವಾಧೀನ ನ್ಯಾಯಯೋಚಿತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯಿದೆ- 2013’ ರನ್ನು ರೂಪಿಸಿತು. ಆದರೆ, ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ 2020ರ ಜೂನ್ ತಿಂಗಳಲ್ಲಿ`ಕರ್ನಾಟಕ ಭೂ ಸುಧಾರಣಾ ಕಾಯಿದೆ’ಗೆ ತಿದ್ದುಪಡಿ ತಂದು ಕಾಯಿದೆಯಲ್ಲಿನ ಕೆಲ ಬಹುಮುಖ್ಯ ಸೆಕ್ಷನ್‌ಗಳನ್ನು ಕಿತ್ತುಹಾಕಿದೆ. ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದೆ. ಚುನಾಯಿತ ಪ್ರತಿನಿಧಿಗಳನ್ನೂ ಒಳಗೊಂಡಂತೆ ಇಡೀ ರಾಜ್ಯದ ಜನತೆಯನ್ನು ಧಿಕ್ಕರಿಸಿ ಇದಕ್ಕೆ ರಾಜಪಾಲರ ಸಹಿ ಪಡೆದಿತ್ತು” ಎಂದರು.
“ಈ ತಿದ್ದುಪಡಿಗಳ ಪರಿಣಾಮವಾಗಿ ಕರ್ನಾಟಕ ಭೂಸುಧಾರಣಾ ಕಾಯ್ದೆಯಲ್ಲಿದ್ದ ಅನೇಕ ಮಹತ್ವದ ಸೆಕ್ಷನ್‌ಗಳು ತಮ್ಮ ಪ್ರಸ್ತುತತೆ ಕಳೆದುಕೊಂಡು ಕಾಯಿದೆಯಿಂದ ಕಣ್ಮರೆಯಾದವು. ತಿದ್ದುಪಡಿಗಳನ್ನು 1974ಕ್ಕೆ ಪೂರ್ವಾನ್ವಯವಾಗುವಂತೆ ಮಾಡಿದ್ದರಿಂದ ಬೇರೆ ಬೇರೆ ನ್ಯಾಯಾಲಯಗಳ ಮುಂದೆ ಇತ್ಯರ್ಥವಾಗದೇ ಉಳಿದಿದ್ದ 12,231 ಭೂಮಿ ಖರೀದಿಯ ಅಕ್ರಮ ಪ್ರಕರಣಗಳು ರಾತ್ರಿ ಕಳೆದು ಹಗಲಾಗುವುದರಲ್ಲಿ ಸಕ್ರಮಗೊಂಡವು” ಎಂದು ತಿಳಿಸಿದರು.
“ಒಟ್ಟಿನಲ್ಲಿ ಯಾರು ಬೇಕಾದರೂ, ಯಾವುದೇ ನಿರ್ಬಂಧವಿಲ್ಲದೆ ಒಂದೇ ಬಾರಿಗೆ 216 ಎಕರೆ (ಮೇಲೆ ಹೇಳಿದ ಗೇಣಿದಾರರಾದರೆ 432 ಎಕರೆ) ಭೂಮಿ ಕೊಂಡು ಯಾವ ಉದ್ದೇಶಕ್ಕಾದರೂ ಬಳಸಿಕೊಳ್ಳಬಹುದು ಎಂದಾದಮೇಲೆ ರೈತರ ಜಮೀನನ್ನು ಕಬಳಿಸಲು ಹವಣಿಸುತ್ತಿದ್ದವರಿಗೆ ಸ್ವರ್ಗ ಕಂಡಂತಾಯಿತು. ಗ್ರಾಮಗಳಲ್ಲಿ ಭೂಮಿ ಕೊಳ್ಳುವವರ ದಾಳಿ ಹೆಚ್ಚಾಗಿ ರೈತರು ಭೂಮಿ ಮಾರಾಟ ಮಾಡುವ ಅತೀವ ಒತ್ತಡಕ್ಕೆ ಒಳಗಾಗುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಭೂಮಿ ಕೊಳ್ಳಲು ಯಾವುದೇ ನಿರ್ಬಂಧವಿಲ್ಲದ ಕಾರಣ ಗ್ರಾಮಗಳಲ್ಲಿ ಭೂರಹಿತರು ಹೆಚ್ಚಾಗುತ್ತಿದ್ದು, ಆಹಾರ ಬೆಳೆಯುವ ಭೂಮಿ ಕ್ಷೀಣಿಸುತ್ತಿದೆ. ಆಹಾರ ಅಭದ್ರತೆ ತೀವ್ರವಾಗುತ್ತಿದೆ. ಹೊರಗಡೆಯ ಬಂಡವಾಳಿಗರು ರೈತರ ಜಮೀನುಗಳಿಗೆ ಬೆಲೆ ಕಟ್ಟಲು ಪ್ರಾರಂಭಿಸಿದ ಮೇಲೆ ಸಣ್ಣ ರೈತರು ಮತ್ತು ಭೂರಹಿತರು ಕೃಷಿ ಭೂಮಿ ಕೊಳ್ಳುವ ಅವಕಾಶವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಿದ್ದಾರೆ. ಈವರೆಗೆ ಭೂಮಿ ಕಳೆದುಕೊಂಡವರು ಬಹುತೇಕ ನಿರ್ಗತಿಕರಾಗಿರುವ ಸ್ಥಿತಿಗೆ ರಾಜ್ಯದ ಪ್ರತಿ ಹಳ್ಳಿಗಳೂ ಸಾಕ್ಷಿಯಾಗಿವೆ” ಎಂದು ಹೇಳಿದರು.
“ಭೂಮಿ ಖರೀದಿಯ ಅಕ್ರಮ ಪ್ರಕರಣಗಳನ್ನು ಸಕ್ರಮಗೊಳಿಸುವಲ್ಲಿ ಬಿಜೆಪಿ ಸರ್ಕಾರ ತೋರಿದ ತುರ್ತನ್ನು ತುಂಡು ಭೂಮಿ ಹೊಂದುವ ಕನಸು ಕಾಣುತ್ತಿರುವ ಸಣ್ಣ ರೈತರ, ಭೂಹೀನರ ವಿಚಾರದಲ್ಲಿ ತೋರಿದ್ದರೆ ಎಷ್ಟೋ ಕೋಟಿ ಮಂದಿ ಬಡಜನರ ಬದುಕು ಹಸನಾಗಿಬಿಡುತ್ತಿತ್ತು” ಎಂದು ಮರುಕಪಟ್ಟರು.
“ಬಿಜೆಪಿ ಸರ್ಕಾರ ಈ ತಿದ್ದುಪಡಿಗಳನ್ನು ತಂದಾಗ ಕಾಂಗ್ರೆಸ್ ಅದನ್ನು ಕಟುವಾಗಿ ವಿರೋಧಿಸಿ ಹೋರಾಟಕ್ಕೆ ಇಳಿದಿತ್ತು. ತಿಂಗಳುಗಟ್ಟಲೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ‘ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ’ಕ್ಕೆ ಸಂಪೂರ್ಣ ಬೆಂಬಲ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈಗಾಗಲೇ ಕಾನೂನು ತಿದ್ದುಪಡಿಯಿಂದ ಸಾಕಷ್ಟು ಅನಾಹುತಗಳಾಗಿವೆ. ಈ ನಾಡಿನ ಜನತೆಯ ಸೌಭಾಗ್ಯವೆಂಬಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಗ್ರಾಮೀಣ ಬದುಕನ್ನು ನುಚ್ಚುನೂರು ಮಾಡುತ್ತಿರುವ ಈ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯಬೇಕು. ಹಿಂದೆ ಇದ್ದ ಕಾನೂನನ್ನು ಯಥಾಸ್ಥಿತಿಗೆ ತರಬೇಕು” ಎಂದು ಮನವಿ ಮಾಡಿದ್ದಾರೆ.
ತಿದ್ದುಪಡಿ ಮಾಡಿದ್ದೇನು? ತೆಗೆದು ಹಾಕಿದ್ದೇನು?
- ಕರ್ನಾಟಕ ಭೂಸುಧಾರಣಾ ಕಾಯಿದೆಯ ಸೆಕ್ಷನ್ 79ಎ, ಬಿ ಮತ್ತು ಸಿಗಳನ್ನು ತೆಗೆದು ಹಾಕಿ ರೈತರಲ್ಲದ ಯಾರು ಬೇಕಾದರೂ ಭೂಮಿ ಮಾಡಿಕೊಡಲಾಯಿತು. ಕೊಳ್ಳಲು ಮತ್ತು ಕೃಷಿಯೇತರ ಚಟುವಟಿಕೆಗೆ ಬಳಸಿಕೊಳ್ಳಲು ಅವಕಾಶ
- ಭೂ ಸುಧಾರಣಾ ಕಾಯಿದೆಯ 63ನೇ ಸೆಕ್ಷನ್‌ಗೆ ತಿದ್ದುಪಡಿ ಮಾಡಿ ಭೂಮಿತಿಯನ್ನು ಇಪ್ಪತ್ತರಿಂದ 40 ಯೂನಿಟ್‌ಗೆ ಹೆಚ್ಚಿಸಲಾಯಿತು. ಭೂಮಿ ಕೊಳ್ಳಲು ಇದ್ದ ಆದಾಯ ಮಿತಿಯನ್ನೂ ತೆಗೆದುಹಾಕಲಾಯಿತು.
- 1995ರ ಭೂಸುಧಾರಣಾ (ತಿದ್ದುಪಡಿ) ಕಾಯ್ದೆಯಡಿ ಜಲಚರ ಕೃಷಿ/ ಪುಷ್ಪಕೃಷಿಗೆ ಸಂಬಂಧಿಸಿದ ಗೇಣಿದಾರರಾದರೆ 432 ಎಕರೆ ಭೂಮಿ ಹೊಂದಲು ಅವಕಾಶ ಮಾಡಿಕೊಡಲಾಗಿದೆ.
- ಭೂ ಸುಧಾರಣಾ ಕಾಯಿದೆಯ ಸೆಕ್ಷನ್ 80ರಲ್ಲಿ ಕೃಷಿಕರಲ್ಲದವರಿಗೆ ಕೃಷಿ ಭೂಮಿ ವರ್ಗಾವಣೆ ಮಾಡಲು ಇದ್ದ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಹಾಕಿ ಭೂಮಿ ವರ್ಗಾವಣೆಯನ್ನು ಸರಾಗಗೊಳಿಸಲಾಯಿತು.
ಭೂಸ್ವಾಧೀನ ನ್ಯಾಯೋಚಿತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯಿದೆ-2013ಕ್ಕೆ ತಂದಿರುವ ತಿದ್ದುಪಡಿಗಳು
- ಯೋಜಿಸಲಾದ ಪ್ರಾಜೆಕ್ಟಿನ ‘ಸಾಮಾಜಿಕ ಪರಿಣಾಮ ಮತ್ತು ಪರಿಸರ ಪರಿಣಾಮದ ಅಧ್ಯಯನ ಮಾಡಬೇಕು ಎನ್ನುವ ಅಧ್ಯಾಯವನ್ನೇ ತೆಗೆದುಹಾಕಿದೆ.
- ಹಾಗೂ ಶೇ. 70ರಿಂದ 80 ಜನರ ಒಪ್ಪಿಗೆ ಪಡೆಯಬೇಕು ಎನ್ನುವ ಕಲಂಗಳನ್ನು ಕಿತ್ತುಹಾಕಿ ಭೂಸ್ವಾಧೀನದ ವಿಚಾರದಲ್ಲಿ ಗ್ರಾಮಸಭೆ ಮತ್ತು ಗ್ರಾಮ ಪಂಚಾಯತಿಗಳಿಗೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ.
- ‘ಸಾರ್ವಜನಿಕ ಹಿತಾಸಕ್ತಿ’ ಎಂಬುದರ ವ್ಯಾಖ್ಯಾನವನ್ನು ತಿಳಿಗೊಳಿಸಿ, ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳನ್ನು ಐದು ಭಾಗವಾಗಿ ವರ್ಗೀಕರಿಸಿ ಬಹುತೇಕ ಎಲ್ಲಾ ಭೂಸ್ವಾಧೀನಗಳನ್ನು ಅದರಲ್ಲಿ ಒಳಪಡಿಸಿದೆ.
- ಬಹುಬೆಳೆ ಬೆಳೆಯುವ ನೀರಾವರಿ ಭೂಮಿ ಮತ್ತು ‘ಎ’ ವಿಭಾಗದ ಕೃಷಿ ಭೂಮಿಯ ಸ್ವಾಧೀನಕ್ಕೆ ನೀಡಿದ್ದ ವಿನಾಯಿತಿಗಳನ್ನು ಕೈ ಬಿಡಲಾಗಿದೆ.
- ಭೂಮಾಲೀಕರಿಗೆ ಹಾಗೂ ಸ್ವಾಧೀನ ಸಂತ್ರಸ್ತರಿಗೆ ಪುನರ್ವಸತಿ ಮತ್ತು ಪುನರ್ನೆಲೆ ಒದಗಿಸಬೇಕು ಎಂಬಂಶವನ್ನು ಕಿತ್ತುಹಾಕಿ ಸರ್ಕಾರವು ನಿರ್ಧರಿಸುವ ನಿಶ್ಚಿತ ಮೊತ್ತವನ್ನು ಒಂದು ಬಾರಿಯ ಪರಿಹಾರವಾಗಿ ಗೊತ್ತುಪಡಿಸಲಾಗಿದೆ.
- ಭೂಮಾಲೀಕರೊಂದಿಗೆ ಜಿಲ್ಲಾಧಿಕಾರಿಯು ನೇರವಾಗಿ ಒಪ್ಪಂದ ಮಾಡಿಕೊಂಡು, ಯಾವುದೇ ವಿಚಾರಣೆ ಇಲ್ಲದೆ ಪರಿಹಾರ ಪ್ರಕಟಿಸಲು ಅವಕಾಶ ಕಲ್ಪಿಸಲಾಗಿದೆ (ಸೆಕ್ಷನ್ 23ಎ).
- ಕಲಂ 10(ಎ)ನಲ್ಲಿ ಪಟ್ಟಿಮಾಡಲಾದ ಯೋಜನೆಗಳಿಗೆ ಭೂಮಿಯ ನಾಲ್ಕು ಪಟ್ಟು ಮೌಲ್ಯದ ಪರಿಹಾರ ನೀಡಬೇಕು ಎನ್ನುವುದನ್ನು ರದ್ದುಪಡಿಸಲಾಗಿದೆ.
- ಸ್ವಾಧೀನ ಪ್ರಕ್ರಿಯೆಯು ನಿಗಧಿತ ಅವಧಿಯಲ್ಲಿ ಮುಗಿಯದಿದ್ದಲ್ಲಿ ಇಡೀ ಪ್ರಕ್ರಿಯೆಯನ್ನು ಮತ್ತೆ ಮೊದಲಿನಿಂದ ನಡೆಸಬೇಕು ಎನ್ನುವ ಸೆಕ್ಷನ್ 24ಕ್ಕೆ ತಿದ್ದುಪಡಿ ಮಾಡಿ ಅದನ್ನು ಅನ್ವಯವಾಗದಂತೆ ಮಾಡಲಾಗಿದೆ.
- ಅಧ್ಯಾಯ 4ಎ ಸೆಕ್ಷನ್ 30ಎ ಎಂಬ ಹೊಸ ಅಂಶವೊಂದನ್ನು ಸೇರಿಸಿ, ಇದರಲ್ಲಿ ಭೂಮಾಲೀಕರು ಸ್ವಇಚ್ಛೆಯಿಂದ ಒಪ್ಪಿಸಲು ಬಯಸುವ ಯಾವುದೇ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಸರ್ಕಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
- ಭೂಸ್ವಾಧೀನಕ್ಕೆ ಸಂಬಂಧಿಸಿದ ಕರ್ನಾಟಕದ ಕೆಲವು ಕಾಯಿದೆಗಳಿಗೆ 2013ರ ಕಾಯಿದೆಯ ಎಲ್ಲ ನಿಯಮಗಳು ಅನ್ವಯವಾಗದಂತೆ ಅಥವಾ ಕೆಲವು ನಿಯಮಗಳು ಮಾತ್ರ ಅನ್ವಯವಾಗುವಂತೆ ಮಾಡಲಾಯಿತು.
II. ಭೂಸ್ವಾಧೀನದ ಜವಾಬ್ದಾರಿ ಹೊತ್ತಿದ್ದ ಅಧಿಕಾರಿಗಳನ್ನು ಕಾಯಿದೆಯ ಉಲ್ಲಂಘನೆಗೆ ನೇರ ಹೊಣೆಗಾರರನ್ನಾಗಿ ಮಾಡಲಾಗಿದ್ದ ಕಲಮು 87ನ್ನು ತೆಗೆಯುವ ಮೂಲಕ ಅಧಿಕಾರಿಗಳಿಗೆ ಮುಕ್ತ ಅಧಿಕಾರ ನೀಡಲಾಗಿದೆ.
- ಸ್ವಾಧೀನ ಮಾಡಿಕೊಂಡ ಭೂಮಿಯನ್ನು ಐದು ವರ್ಷಗಳ ಒಳಗೆ ಬಳಕೆ ಮಾಡದಿದ್ದಲ್ಲಿ ಭೂಮಾಲೀಕರಿಗೆ ಹಿಂದಿರುಗಿಸಬೇಕು ಎನ್ನುವ ಕಲಮು 101ಕ್ಕೆ ತಿದ್ದುಪಡಿ ಮಾಡಿ, ‘ಐದು ವರ್ಷದೊಳಗೆ ಅಥವಾ ಕೈಗಾರಿಕೆ ಯೋಜನೆಯನ್ನು ಪ್ರಾರಂಭಿಸಲು ನೀಡಲಾದ ಅವಧಿ-ಇವೆರಡರಲ್ಲಿ ಯಾವುದು ಹೆಚ್ಚೇ ಅಷ್ಟು ವರ್ಷಗಳ ಒಳಗೆ ಎಂದು ಸೇರಿಸಲಾಯಿತು. ಹೀಗಾಗಿ, ಸ್ವಾಧೀನ ಪಡಿಸಿಕೊಂಡ ಕೃಷಿ ಭೂಮಿ ದಶಕಗಟ್ಟಲೆ ಖಾಲಿ ಬಿದ್ದರೂ ಕೇಳುವಂತಿಲ್ಲವಾಗಿದೆ.
“ಜನತೆಗೆ ತಮ್ಮ ಹಿತ ಕಾಯ್ದುಕೊಳ್ಳುವ ಶ್ರೀರಕ್ಷೆಯಂತಿದ್ದ ಅವಕಾಶಗಳನ್ನು 2013ರ ಕಾಯಿದೆ ನೀಡಿತ್ತು. ಆದರೆ, ಬಿಜೆಪಿ ಸರ್ಕಾರ ಅವೆಲ್ಲವನ್ನೂ ತೆಗೆದುಹಾಕಿ ಬಯಲಲ್ಲಿ ನಿಲ್ಲಿಸಲಾಗಿದೆ. ಈ ತಿದ್ದುಪಡಿಗಳ ಬಳಿಕ ರಾಜ್ಯದ ಹಲವೆಡೆ ರೈತರು ವರ್ಷಾನುಗಟ್ಟಲೆಯಿಂದ ಹೋರಾಟ ಮಾಡುತ್ತಿದ್ದರೂ ಭೂಮಿ ಉಳಿಸಿಕೊಳ್ಳುವ ದಾರಿ ಕಾಣದೆ ಹತಾಷರಾಗುತ್ತಿದ್ದಾರೆ. ಹಾಗಾಗಿ ತಾವು ಕೂಡಲೇ ಈ ಕಾನೂನು ತಿದ್ದುಪಡಿಗಳನ್ನು ತೆಗೆದುಹಾಕಿ ರೈತರ ರಕ್ಷಣೆಗೆ ನಿಲ್ಲಬೇಕು” ಎಂದು ʼನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲʼ ಆಂದೋಲನದ ಸದಸ್ಯರು ಪ್ರಕಟಣೆಗೆ ತಿಳಿಸಿದ್ದಾರೆ.