ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದಲ್ಲಿ ವೈರಲ್ ಫೀವರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಜ್ವರ, ಶೀತ, ಕೆಮ್ಮು, ಟೈಫಡ್ ಜತೆಗೆ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 30 ದಿನದಲ್ಲಿ 2,970 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದರೆ, ಇಡೀ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಪಾಸಿಟಿವಿಟಿ ಸಂಖ್ಯೆ 15 ಸಾವಿರ ಗಡಿ ದಾಟಿದೆ. 9 ಜನ ಮಾರಕ ಡೆಂಗ್ಯೂಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಕಳೆದ ತಿಂಗಳು ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇಳಿಕೆಯತ್ತ ಸಾಗುತ್ತಿತ್ತು. ಈ ತಿಂಗಳು ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 7,673 ಹೊಸ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿದ್ದವು. ಆದರೆ, ಕಳೆದ ಒಂದೇ ತಿಂಗಳಿನಲ್ಲಿ 2,970 ಪ್ರಕರಣ ಪತ್ತೆಯಾಗಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 7,228 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಆದರೆ, ಬೆಂಗಳೂರಿನಲ್ಲಿಯೇ 7,673 ಡೆಂಗ್ಯೂ ಪ್ರಕರಣಗಳು ದಾಖಲಾಗಿರುವುದು ಆರೋಗ್ಯ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತಲೆನೋವಿಗೆ ಕಾರಣವಾಗಿದೆ.
ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಇದುವರೆಗೆ 15,089 ಮಂದಿ ಡೆಂಗ್ಯೂಗೆ ತುತ್ತಾಗಿದ್ದಾರೆ. ಈ ವರ್ಷ ಜುಲೈ ಮತ್ತು ಸೆಪ್ಟಂಬರ್ನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ವರದಿಯಾಗಿದೆ.
ಈ ವರ್ಷ ಮಾರಕ ಡೆಂಗ್ಯೂಗೆ 9 ಜನ ಬಲಿಯಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 4 ಜನ, ಕೊಡಗು, ಹಾಸನ, ಹಾಗೂ ತುಮಕೂರು ವ್ಯಾಪ್ತಿಯಲ್ಲಿ ತಲಾ ಒಬ್ಬರು, ಉಡುಪಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
2021ರಲ್ಲಿ 6,300 ಪ್ರಕರಣ ದಾಖಲಾಗಿದ್ದು, ಐವರು ಮೃತಪಟ್ಟಿದ್ದರು. 2022ರಲ್ಲಿ 8,500 ಪ್ರಕರಣ ಪಾಸಿಟಿವ್ ಇದ್ದು, 9 ಮಂದಿ ಸಾವಿಗೀಡಾಗಿದ್ದರು.
ರಾಜಧಾನಿಯಲ್ಲಿ ನಿಲ್ಲದ ಡೆಂಗ್ಯೂ ಜ್ವರದ ಹಾವಳಿಯಿಂದ ಜನರು ಹೈರಾಣಾಗಿದ್ದು, ವೈದ್ಯರು ಈ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಡೆಂಗ್ಯೂ ಜ್ವರ
ಈಡಿಸ್ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರ ಬರುತ್ತದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಸೊಳ್ಳೆ ಕಚ್ಚಿದ 5-7 ದಿನಗಳಲ್ಲಿ ವ್ಯಕ್ತಿಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.
ಈ ಸುದ್ದಿ ಓದಿದ್ದೀರಾ? ರೋಗಿಗಳ ಜೀವದೊಂದಿಗೆ ಚೆಲ್ಲಾಟ; 1,434ಕ್ಕೂ ಹೆಚ್ಚು ನಕಲಿ ವೈದ್ಯರ ವಿರುದ್ಧ ದೂರು ದಾಖಲು
ರೋಗದ ಲಕ್ಷಣಗಳು
ಇದ್ದಕ್ಕಿದಂತೆ ವಿಪರೀತ ಜ್ವರ, ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ನೋವು, ತೀವ್ರ ತಲೆನೋವು, ಮೈ–ಕೈ ಮತ್ತು ಕೀಲು ನೋವು, ವಾಕರಿಕೆ ವಾಂತಿ ಜತೆಗೆ ತೀವ್ರ ಹೊಟ್ಟೆ ನೋವು, ಬಾಯಿ, ಮೂಗು & ವಸಡುಗಳಲ್ಲಿ ರಕ್ತಸ್ರಾವ, ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗಂಧೆಗಳು, ಕಪ್ಪು ಬಣ್ಣದ ಮಲ ವಿಸರ್ಜನೆ, ವಿಪರೀತ ಬಾಯಾರಿಕೆ, ತಣ್ಣನೆಯ ಬಿಳಿಚಿದ ಚರ್ಮ, ಜ್ಞಾನ ತಪ್ಪುವುದು, ರಕ್ತದ ಒತ್ತಡದ ಕುಸಿತ ಹಾಗೂ ನಾಡಿಬಡಿತದ ಕುಸಿತ ಇವು ಡೆಂಗ್ಯೂ ರೋಗದ ಲಕ್ಷಣಗಳಾಗಿವೆ.