ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಇಂದು ನಡೆದ ದೇವನಹಳ್ಳಿ ಚಲೋ ರೈತರ ಬಂಧನದೊಂದಿಗೆ ಮತ್ತೊಂದು ತಿರುವಿಗೆ ಹೊರಳಿದೆ. ಹೋರಾಟಗಾರರು ಜಾಮೀನು ಪಡೆಯದಿರುವ ನಿರ್ಧಾರ ಮಾಡಿದ್ದಾರೆ. ಬಂಧನದ ಸುಳಿವು ಸಿಗುತ್ತಿದ್ದಂತೆ ತುರ್ತುಸಭೆ ನಡೆಸಿ ಈ ತೀರ್ಮಾನ ಮಾಡಿದ್ದಾರೆ. ಅಷ್ಟೇ ಅಲ್ಲ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಸಂಯುಕ್ತ ಹೋರಾಟ ಕರ್ನಾಟಕ ಕರೆ ನೀಡಿದೆ.
ಸಂಜೆ ಆರು ಗಂಟೆಗೆ ಸ್ಥಳಕ್ಕೆ ಬಂದ ಡಿಎಸ್‌ಪಿ ಸಜಿತ್ ತಂಡ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ ಪ್ರತಿಭಟನೆ ನಿಲ್ಲಿಸುವಂತೆ ಮನವೊಲಿಸಲು ಪ್ರಯತ್ನಿಸಿದರು. ಅದಕ್ಕೆ ಮಣಿಯದು ರೈತ ಮುಖಂಡ ಬಡಗಲಪುರ ನಾಗೇಂದ್ರ, ನೂರ್ ಶ್ರೀಧರ್, ಮಾವಳ್ಳಿ ಶಂಕರ್, ವರಲಕ್ಷ್ಮಿ ಮುಂತಾದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಬೇಕು. ಅಲ್ಲಿಯವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದರು. ಏಳು ಗಂಟೆಯ ಸುಮಾರಿಗೆ ವೇದಿಕೆಗೆ ಬಂದ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸಿ ಕರೆದೊಯ್ದರು.
ಬೆಳಿಗ್ಗೆಯಿಂದ ನಡೆಯುತ್ತಿದ್ದ ಶಾಂತಿಯುತ ಹೋರಾಟವು ಮುಂದುವರಿದಿತ್ತು. ಹೋರಾಟಗಾರರನ್ನು ಪೊಲೀಸರು ಎಳೆದಾಡಿ, ವ್ಯಾನಿಗೆ ತುಂಬಿಸಿದ್ದಾರೆ.


