ಬೆಂಗಳೂರಿನ ಜೆಟ್‌ಲಾಗ್ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಜಗದೀಶ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಣಕಾಸಿನ ವಿಚಾರದಲ್ಲಿ ಸಂಕಷ್ಟ ಎದುರಿಸುತ್ತಿದ್ದ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಮೃತದೇಹವನ್ನು ಇಡಲಾಗಿದೆ.
‘ರಾಮ್‌ಲೀಲಾ’, ‘ಅಪ್ಪು ಪಪ್ಪು’, ‘ಸ್ನೇಹಿತರು’, ‘ಮಸ್ತ್ ಮಜಾ ಮಾಡಿ’ ಸೇರಿದಂತೆ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. ಬೆಂಗಳೂರಿನಲ್ಲಿ ಜೆಟ್‌ಲಾಗ್ ಪಬ್ ಹೊಂದಿದ್ದರು. ಜತೆಗೆ, ಬಿಲ್ಡರ್ ಕೂಡ ಆಗಿದ್ದರು. ಅಲ್ಲದೇ, ನಟ ದರ್ಶನ್ ಹಾಗೂ ರಾಕ್‌ಲೈನ್ ವೆಂಕಟೇಶ್ ಅವರ ಜತೆಗೆ ಆಪ್ತ ಒಡನಾಟ ಹೊಂದಿದ್ದರು.
ಸಿನಿಮಾ ನಿರ್ಮಾಣ ಮಾತ್ರವದಲ್ಲದೆ ಕಟ್ಟಡ ನಿರ್ಮಾಣ, ಉದ್ಯಮ ಮುಂತಾದ ಕ್ಷೇತ್ರಗಳಲ್ಲಿ ಸೌಂದರ್ಯ ಜಗದೀಶ್ ತೊಡಗಿಕೊಂಡಿದ್ದರು.
ರವಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಜಗದೀಶ್ ಅವರು ತಮ್ಮ ಸ್ವಂತ ನಿವಾಸದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಅವರನ್ನು ಸುಗಣ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದಾರೆ. ಆದರೆ, ಜಗದೀಶ್ ಅವರನ್ನು ಆಸ್ಪತ್ರೆಗೆ ಕರೆತರುವ ಮೊದಲೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಜಗದೀಶ್ ಅವರು ತಮ್ಮ ಮಗಳ ಮದುವೆಯನ್ನು ನೆರವೇರಿಸಿದ್ದರು. ರಾಜಾಜಿನಗದ ಐದನೇ ಬ್ಲಾಕ್ ಹಾಗೂ ಆರನೇ ಬ್ಲಾಕ್‌ನಲ್ಲಿರುವ ಅವರ ಎರಡು ಮನೆ ಸೀಸ್ ಆಗಿತ್ತು. ಕೆಲವು ತಿಂಗಳ ಹಿಂದೆ ‘ಕಾಟೇರ’ ಚಿತ್ರತಂಡದವರು ‘ಜೆಟ್‌ಲಾಗ್’ ಪಬ್ನಲ್ಲಿ ರಾತ್ರಿ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪ ಕೂಡ ಕೇಳಿಬಂದಿತ್ತು. ಆ ಬಳಿಕ 25 ದಿನಗಳ ಕಾಲ ರೆಸ್ಟೋ ಬಾರ್ ಲೈಸೆನ್ಸ್ ರದ್ದು ಮಾಡಲಾಗಿತ್ತು. ಇವರ ಪತ್ನಿ ರೇಖಾ ಜಗದೀಶ್ ಈ ಬಾರ್‌ನ ಸಂಸ್ಥಾಪಕರು ಮತ್ತು ಡೈರೆಕ್ಟರ್ ಆಗಿದ್ದಾರೆ. ಅವರ ಮೇಲೂ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅಪರಿಚಿತ ವಾಹನ ಡಿಕ್ಕಿ: ಫ್ಲೈ ಓವರ್‌ನಿಂದ ಬಿದ್ದು ಯುವಕ ಸಾವು
ಅನೇಕ ವಿವಾದಗಳ ಕಾರಣದಿಂದಲೂ ಸೌಂದರ್ಯ ಜಗದೀಶ್ ಅವರು ಆಗಾಗ ಸುದ್ದಿ ಆಗಿದ್ದರು. ನೆರೆಹೊರೆಯವರ ಜೊತೆ ಅವರ ಕುಟುಂಬದವರು ಗಲಾಟೆ ಮಾಡಿಕೊಂಡಿದ್ದು ಕೂಡ ಭಾರಿ ವಿವಾದ ಸೃಷ್ಟಿಸಿತ್ತು. ನಿರ್ಮಾಪಕ ಜಗದೀಶ್ ಅವರು ಪತ್ನಿ ರೇಖಾ ಜಗದೀಶ್ ಮಗ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಆದರೆ, ಹಣಕಾಸಿನ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.