“ಪ್ರಜಾತಂತ್ರವನ್ನು ಬಲಿಕೊಟ್ಟು ಇಂದು ಫ್ಯಾಸಿಸ್ಟ್ ಶಕ್ತಿಗಳು ಬೆಳೆಯುವಂತಾಗಿದೆ. ಪ್ರಜಾತಾಂತ್ರಿಕ ಮೌಲ್ಯಗಳೇ ಅಸ್ತಿತ್ವದಲ್ಲಿ ಇಲ್ಲದಂತಹ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಈ ಸಮ್ಮೇಳನ ದಿಕ್ಸೂಚಿಯಾಗಲಿ” ಎಂದು ಲೇಖಕಿ ರೂಪ ಹಾಸನ ಅಭಿಪ್ರಾಯ ವ್ಯಕ್ತಪಡಿಸಿದರು.
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜನವರಿ 6ರಂದು ರಾಜ್ಯ ಮಟ್ಟದ ಮಹಿಳಾ ಸಮ್ಮೇಳನ ನಡೆಯಿತು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಿ, ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯದ ಭದ್ರತೆಯನ್ನು ಖಾತ್ರಿ ಪಡಿಸಿ, ದುಡಿಯುವ ಮಹಿಳೆಯರಿಗೆ ಕನಿಷ್ಠ ವೇತನ, ಸೇವಾ ಭದ್ರತೆ ಖಚಿತಪಡಿಸಿ ಎಂಬ ಘೋಷ ವಾಕ್ಯದೊಂದಿಗೆ ಎಐಎಂಎಸ್‌ಎಸ್ 8ನೇ ರಾಜ್ಯ ಸಮ್ಮೇಳನವನ್ನು ಸಂಘಟಿಸಲಾಗಿತ್ತು.
ಸುಮಾರು 25 ಜಿಲ್ಲೆಗಳಿಂದ ಬಂದ ಸಾವಿರಾರು ಮಹಿಳಾ ಹೋರಾಟಗಾರರು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ, ಮಹಿಳಾ ವಿಮುಕ್ತಿಗಾಗಿ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದರು.
“ಇವತ್ತಿಗೂ ಕೆಲವೇ ಕ್ಷೇತ್ರಗಳಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರಿದ್ದಾರೆ. ದೇಶಕ್ಕೆ ಮುನ್ನಡೆಯನ್ನು ತೋರಿಸುವುದು ತಾಯ್ತನದ ಕರ್ತವ್ಯ ಕೂಡ. ಇಂದು ಸಮಗ್ರ ರಾಜಕೀಯ ಪ್ರಜ್ಞೆಯಿಲ್ಲದ ಮೇಲು ಮೇಲಿನ ಘೋಷಣೆಗಳಿಂದ, ವಾದ-ಪ್ರತಿವಾದಗಳಿಂದ ಪ್ರಯೋಜನವಿಲ್ಲ. ಅದು ಮೂಲಭೂತ ಬದಲಾವಣೆಯನ್ನು ಮಾಡುವುದೂ ಇಲ್ಲ. ಈ ಎಚ್ಚರದೊಂದಿಗೆ ಪ್ರತಿಯೊಂದು ಸಮಸ್ಯೆಗಳನ್ನು ರಾಜಕೀಯಗೊಳಿಸಬೇಕು. ಪುರುಷ ಪ್ರಧಾನ ಮನೋಭಾವ ಹೆಣ್ಣನ್ನು ದಮನಿಸಬೇಕು, ಅಂಚಿಗೆ ನೂಕಬೇಕು, ಅಧೀನಕ್ಕೊಳಪಡಿಸಬೇಕು ಎನ್ನುವ ಕ್ರೂರ ಹಿಂಸಾತ್ಮಕ ಪ್ರಯತ್ನಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 15 ನಿಮಿಷಕ್ಕೊಂದು ಅತ್ಯಾಚಾರ, ಪ್ರತಿ 2 ನಿಮಿಷಕ್ಕೊಂದು ದೌರ್ಜನ್ಯಕ್ಕೆ ಮಹಿಳೆ ಒಳಾಗಾಗುತ್ತಿದ್ದಾಳೆ” ಎಂದು ಆತಂಕ ವ್ಯಕ್ತಪಡಿಸಿದರು. ಮಹಿಳೆಯರು ಘನತೆ, ಗೌರವದಿಂದ ಬಾಳಲು ಬೇಕಾದುದಕ್ಕೆ ಹೋರಾಡಬೇಕು ಎಂದು ಕರೆ ಕೊಟ್ಟರು.
ಎಸ್ ಯು ಸಿ ಐ(ಸಿ)ನ ರಾಜ್ಯ ಕಾರ್ಯದರ್ಶಿ ಕೆ ಉಮಾ ಮಾತನಾಡಿ, “ಹೆಣ್ಣಿಗೆ ಧೈರ್ಯವಿಲ್ಲ ಎಂದಲ್ಲ, ಹೆಣ್ಣುಮಕ್ಕಳಿಗೆ ಈ ಸಮಾಜ ಧೈರ್ಯವಾಗಿರಲು ಬಿಟ್ಟಿಲ್ಲ. ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ವಿದ್ಯಾಸಾಗರ್, ಕುದ್ಮುಲ್ ರಂಗರಾವ್ ಮಹಿಳೆಯರ ಏಳಿಗೆಗಾಗಿ ಶ್ರಮಿಸಿದ್ದಾರೆ. ಪ್ರೀತಿಲತಾ ವದೆದಾರ್, ಮಾತಂಗಿನಿ ಹಜರಾ ಮೊದಲದವರ ಶೌರ್ಯ ನಮ್ಮ ಕಣ್ಣ ಮುಂದಿದೆ. ಇಲ್ಲಿಯವರೆಗೆ ಆಳಿದ ಎಲ್ಲ ಪಕ್ಷಗಳು ಮಹಿಳೆಯರ ರಕ್ಷಣೆಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಮಹಿಳೆಯರಿಗೆ ಸ್ವಾತಂತ್ರ‍್ಯ, ಸಮಾನತೆ ಇನ್ನೂ ದೂರದ ಮಾತಾಗಿದೆ” ಎಂದರು.
“ಸಮಸ್ಯೆಗೆ ಮೂಲ ಕಾರಣ ನಮ್ಮ ಸ್ವಾತಂತ್ರ‍್ಯ ಚಳುವಳಿಯ ವೈಫಲ್ಯದಲ್ಲಿದೆ. ಪ್ರಜಾತಾಂತ್ರಿಕರಣಗೊಂಡಿಲ್ಲದ ಕಾರಣ ಇಂದಿಗೂ ಅನ್ಯಾಯಕ್ಕೆ ಒಳಗಾದ ಮಹಿಳೆಯನ್ನೇ ಅಪವಾದಕ್ಕೆ ಗುರಿಮಾಡಲಾಗುತ್ತಿದೆ. ಜತೆಗೆ ಸಂಪ್ರದಾಯ, ಮೌಢ್ಯಗಳ ಚೌಕಟ್ಟಿನೊಳಗೆ ಮಹಿಳೆ ಬಂಧಿಯಾಗಿದ್ದಾಳೆ” ಎಂದು ತಿಳಿಸಿದರು.
“ಐತಿಹಾಸಿಕವಾಗಿ ನೋಡಿದಾಗ ಮಾತೃಪ್ರಧಾನ ಸಮಾಜವು ಖಾಸಗಿ ಆಸ್ತಿಯ ಹುಟ್ಟಿನೊಂದಿಗೆ ಪುರುಷ ಪ್ರಧಾನ ಸಮಾಜವಾಗಿ ಬದಲಾಯಿತು. ಅಲ್ಲಿಂದ ಮಹಿಳೆ ದೌರ್ಜನ್ಯ ಪ್ರಾರಂಭವಾಯಿತು. ಇಂದು ಮಹಿಳಾ ಸಮುದಾಯದ ಅನ್ಯಾಯಗಳ ವಿರುದ್ಧ ಒಗ್ಗಟ್ಟಿನ ಚಳುವಳಿ ಸಂಘಟಿಸಬೇಕಿದೆ. ಶೋಷಿತ ಕಾರ್ಮಿಕ ಸಮುದಾಯದ ಜತೆಗೆ ಸೇರಿ ಸಮಾಜವಾದಿ ಕ್ರಾಂತಿಗೆ ಮುಂದಾಗಬೇಕಿದೆ” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿ ತಲೆ ಎತ್ತಲಿದೆ ದೇಶದ ಅತಿ ಎತ್ತರದ ವೀಕ್ಷಣಾ ಗೋಪುರ
ಎಐಎಂಎಸ್‌ಎಸ್‌ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಛಬ್ಬಿ ಮೊಹಂತಿ ಅವರು ಮಾತನಾಡಿ, “ಮಹಿಳಾ ಹೋರಾಟದಲ್ಲಿ ವಿಭಿನ್ನವಾಗಿರುವ ಎಐಎಂಎಸ್‌ಎಸ್ ಮಹಾನ್ ಮಾರ್ಕ್‌ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷರ ಚಿಂತನೆಗಳ ಆಧಾರದ ಮೇಲೆ ಮಹಿಳಾ ಚಳುವಳಿಯನ್ನು ಕಟ್ಟುತ್ತಿದೆ. ಮಹಿಳೆಯರ ಸಮಸ್ಯೆಗಳಿಗೆ ಮೂಲಕಾರಣ ಇಂದಿನ ಸಾಮಾಜಿಕ-ಆರ್ಥಿಕ ವ್ಯವಸ್ಥೆಯಲ್ಲಿದೆ. ಇದರ ಅಂತ್ಯ ಈ ವ್ಯವಸ್ಥೆಯನ್ನು ಕಿತ್ತೊಗೆಯುವುದರಲ್ಲಿದೆ. ಆದ್ದರಿಂದ ನಾವು ಮಹಿಳಾ ವಿಮುಕ್ತಿಯ ಅಂತಿಮ ಗುರಿಯನ್ನು ಮುಟ್ಟುತ್ತೇವೆ ಎಂದರು.
ಎಐಎಂಎಸ್‌ಎಸ್ ಹೊರತಂದ ಕರ್ನಾಟಕದ ಸಾಮಾಜಿಕ ಹೋರಾಟಗಾರರಾದ ಕುದ್ಮುಲ್ ರಂಗರಾಯರ ಕುರಿತು ಪುಸ್ತಕವನ್ನು ಎಐಎಂಎಸ್‌ಎಸ್‌ನ ಅಖಿಲ ಭಾರತ ಅಧ್ಯಕ್ಷರಾದ ಕೆಯಾ ಡೆ ಬಿಡುಗಡೆ ಮಾಡಿದರು.