ಹಲವು ಜನ ಸಂಭ್ರಮದಿಂದ ಬೆಳಕಿನ ಹಬ್ಬವನ್ನು ಪಟಾಕಿ ಹೊಡೆಯುವ ಮೂಲಕ ಆಚರಣೆ ಮಾಡುತ್ತಿದ್ದಾರೆ. ಆದರೆ, ಪಟಾಕಿ ಹೊಡೆಯುವ ವೇಳೆ, ಅಗತ್ಯ ಮುನ್ನೇಚ್ಚರಿಕೆಯ ನಡುವೆ ರಾಜಧಾನಿ ಬೆಂಗಳೂರಿನಲ್ಲಿ 80ಕ್ಕೂ ಹೆಚ್ಚು ಪಟಾಕಿ ಸಿಡಿತದಿಂದ ಅವಘಡಗಳು ಸಂಭವಿಸಿವೆ. ಹಬ್ಬದ ಮೊದಲ ದಿನ ರವಿವಾರ ಮಕ್ಕಳು ಸೇರಿದಂತೆ 26 ಜನ ಗಾಯಗೊಂಡಿದ್ದರು. ಪಟಾಕಿ ಹಚ್ಚುವವರಿಗಿಂತ ಪಟಾಕಿ ಹಚ್ಚದೇ, ಇರುವವರು ಈ ಬಾರಿ ಹೆಚ್ಚಾಗಿ ಗಾಯಗೊಂಡಿದ್ದಾರೆ.
ರವಿವಾರದಿಂದ ಅಂದರೆ ನವೆಂಬರ್ 12ರಿಂದ (ನರಕ ಚತುರ್ಥಶಿ) ಈವರೆಗೆ ಸುಮಾರು 80ಕ್ಕೂ ಹೆಚ್ಚು ಪಟಾಕಿ ಅವಘಡಗಳು ಸಂಭವಿಸಿದ್ದು, ಹಲವು ಜನ ಗಾಯಗೊಂಡಿದ್ದಾರೆ. ಹಬ್ಬದ ಎರಡನೇ ದಿನ ಅವಘಡದಿಂದ ಬೆಂಗಳೂರಿನಲ್ಲಿ ಗಾಯಗೊಂಡವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಗಾಯಗೊಂಡವರ ಪೈಕಿ ಸರ್ಕಾರಿ ಆಸ್ಪತ್ರೆಗೆ 17 ಜನ ದಾಖಲಾಗಿದ್ದರೆ, 26 ಜನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟಾಕಿ ಅವಘಡಗಳಿಂದ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
“ನಾರಾಯಣ ನೇತ್ರಾಲಯದಲ್ಲಿ ನವೆಂಬರ್ 12ರಿಂದ ಇಲ್ಲಿಯವರೆಗೆ ಪಟಾಕಿ ಅವಘಡದಿಂದ 26 ಜನ ಗಾಯಗೊಂಡವರು ದಾಖಲಾಗಿದ್ದಾರೆ. ಈ ಪೈಕಿ ಐದು ಜನರಿಗೆ ಗಂಭೀರ ಗಾಯವಾಗಿದೆ. 26 ಜನರ ಪೈಕಿ ಇನ್ನೊಬ್ಬರು ಸಿಡಿಸಿದ ಪಟಾಕಿಯಿಂದಲೇ 12 ಮಂದಿಗೆ ಗಾಯಗಳಾಗಿವೆ. ಸ್ವತಃ ಪಟಾಕಿ ಸಿಡಿಸುತ್ತಿದ್ದಾಗ 14 ಜನ ಗಾಯಗೊಂಡಿದ್ದಾರೆ. ಇನ್ನು ಅವಘಡದಲ್ಲಿ ಪಾದಚಾರಿಗಳು, ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವವರೂ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾದವರ ಪೈಕಿ ಟೈಲರ್ ಮತ್ತು 19 ವರ್ಷದ ಯುವಕನಿಗೆ ಗಂಭೀರ ಗಾಯವಾಗಿದೆ. ಉಳಿದ ಗಾಯಾಳುಗಳಿಗೆ ಸಣ್ಣಪುಟ್ಟ ಚಿಕಿತ್ಸೆಯ ಅಗತ್ಯವಿದ್ದು, ನೀಡಲಾಗುತ್ತಿದೆ” ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
“ಕಣ್ಣು ಸೂಕ್ಷ್ಮವಾಗಿದ್ದರಿಂದ ಸಣ್ಣ ಕಿಡಿಯೂ ಕಣ್ಣಿಗೆ ದೊಡ್ಡ ಹಾನಿ ಮಾಡುತ್ತದೆ. ಪಟಾಕಿ ಅವಘಡಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲು ಆರು ವೈದ್ಯರು ಹಾಗೂ 18 ರಿಂದ 20 ವೈದ್ಯಕೀಯ ಸಿಬ್ಬಂದಿ ನಿಯೋಜಿಸಿ, ದಿನದ 24 ಗಂಟೆಗಳೂ ಕಾರ್ಯ ನಿರ್ವಹಿಸಲಾಗುತ್ತಿದೆ” ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ರೋಹಿತ್ ಶೆಟ್ಟಿ ತಿಳಿಸಿದ್ದಾರೆ.
ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಸುಮಾರು ಏಳಕ್ಕೂ ಹೆಚ್ಚು ಜನ ಪಟಾಕಿ ಸಂಬಂಧಿತ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇಬ್ಬರು ಗಾಯಾಳುಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಐವರಿಗೆ ಓಪಿಡಿಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇವರಲ್ಲಿ 10 ವರ್ಷದ ಬಾಲಕಿ ಮತ್ತು 18 ವರ್ಷದ ಯುವಕನಿಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ಶುಲ್ಕ ವಸೂಲಿಗೆ ಆಕ್ರೋಶ: ಸಿಎಂ ಕಚೇರಿಗೆ ದೂರು
ಶಂಕರ ನೇತ್ರಾಲಯದಲ್ಲಿ ಎರಡು ಪಟಾಕಿ ಗಾಯದ ಪ್ರಕರಣ ವರದಿಯಾಗಿದೆ. ಇದರಲ್ಲಿ ಆರು ಮತ್ತು ಏಳು ವರ್ಷದ ಮಕ್ಕಳು ಪಟಾಕಿಯಿಂದ ಗಾಯಗೊಂಡಿದ್ದಾರೆ. ಪಟಾಕಿ ಹಚ್ಚುವುದನ್ನು ನೋಡುತ್ತಿದ್ದಾಗ ಏಳು ವರ್ಷದ ಬಾಲಕನಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ರಾಮಮೂರ್ತಿ ನಗರದ ಮೂರುವರೆ ವರ್ಷದ ಮಗುವಿಗೆ ಪಟಾಕಿಯಿಂದ ಗಂಭೀರ ಗಾಯವಾಗಿದೆ. ಈ ಘಟನೆ ಸೋಮವಾರ ನಡೆದಿದೆ. ಶ್ರೀರಾಂಪುರದ ಯುವಕನೊಬ್ಬ ನಡೆದುಕೊಂಡು ಹೋಗುತ್ತಿದ್ದ ವೇಳೆ, ಯಾರೋ ಹಚ್ಚಿದ ಪಟಾಕಿ ಯುವಕನ ಕಣ್ಣಿಗೆ ಸಿಡಿದಿದೆ. ಇದರಿಂದ ಐಬಾಲ್‌ಗೆ ಗಂಭೀರ ಗಾಯ ಆಗಿದ್ದು, ಒಳಗಡೆ ರಕ್ತ ಹೆಪ್ಪುಗಟ್ಟಿದೆ. ಇದೇ ರೀತಿ ಬನ್ನೇರುಘಟ್ಟದ ವ್ಯಕ್ತಿಯ ಕಣ್ಣಿಗೆ ಲಕ್ಷ್ಮೀ ಪಟಾಕಿ ಸಿಡಿದು ಗಾಯವಾಗಿದೆ.