ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ವಿಚಾರವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾರ್ಯ ವೈಖರಿಯ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದ್ದು, ಕ್ರಮ ಕೈಗೊಳ್ಳದ ಪಾಲಿಕೆಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಅಲ್ಲದೇ, ನಗರದಲ್ಲಿರುವ ಎಲ್ಲ ಫುಟ್ ಪಾತ್‌ಗಳ ಒತ್ತುವರಿ ತೆರವು ಮಾಡಬೇಕು ಎಂದು ಆದೇಶ ನೀಡಿದೆ.
ಹೈಕೋರ್ಟ್ನ ಹಂಗಾಮಿ ಸಿಜೆ ಪಿ.ಎಸ್.ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡರಿದ್ದ ಪೀಠ ವಿಚಾರಣೆ ಕೈಗೆತ್ತಿಕೊಂಡು ಆದೇಶ ನೀಡಿದೆ.
“ನಗರದಲ್ಲಿ ಜನರು ಉತ್ತಮವಾದ ರಸ್ತೆ ಮತ್ತು ಫುಟ್‌ಪಾತ್ ನಿರ್ಮಾಣ ಮಾಡಲು ತೆರಿಗೆ ಕಟ್ಟುತ್ತಾರೆ. ಆದರೆ, ಬಿಬಿಎಂಪಿ ರಸ್ತೆ ಮತ್ತು ಫುಟ್ಪಾತ್ ಸಮಸ್ಯೆ ಸುಧಾರಿಸಲು ಮುಂದಾಗುತ್ತಿಲ್ಲ. ಒತ್ತುವರಿ ತೆರವಿಗೆ ಸ್ವಯಂಪ್ರೇರಿತ ಪಿಐಎಲ್ ದಾಖಲಿಸುತ್ತೇವೆ” ಎಂದು ಪೀಠ ಪಾಲಿಕೆಗೆ ಎಚ್ಚರಿಕೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಅಧಿಕಾರ ಕೇಂದ್ರೀಕರಣ ಪ್ರಜಾಪ್ರಭುತ್ವಕ್ಕೆ ಮಾರಕ: ಡಾ. ಮುಖ್ಯಮಂತ್ರಿ ಚಂದ್ರು
“ಅಲ್ಲದೇ, ಕೆಲವರು ನಗರದಲ್ಲಿರುವ ಫುಟ್‌ಪಾತ್‌ಗಳನ್ನು ವಾಹನ ನಿಲುಗಡೆ ಸ್ಥಳವಾಗಿ ಬಳಕೆ ಮಾಡುತ್ತಿದ್ದಾರೆ. ಎಲ್ಲ ಫುಟ್ಪಾತ್ಗಳ ಒತ್ತುವರಿಗಳನ್ನು ತೆರವುಗೊಳಿಸಬೇಕು. ಇನ್ನು ಫೆಬ್ರವರಿ 1ರಂದು ಬಿಬಿಎಂಪಿ ಮುಖ್ಯ ಆಯುಕ್ತರು ಖುದ್ದು ಹೈಕೋರ್ಟ್‌ಗೆ ಹಾಜರಾಗಿ ವಿವರಣೆ ನೀಡಬೇಕು” ಎಂದು ಹೈಕೋರ್ಟ್ ಸೂಚನೆ ನೀಡಿದೆ.