ಬೆಂಗಳೂರು ವಿಮಾನ ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ಸೋಮವಾರ ಮಹಿಳೆ ಸೇರಿದಂತೆ ನಾಲ್ವರು ಪ್ರಯಾಣಿಕರಿಂದ ₹1 ಕೋಟಿ ಮೌಲ್ಯದ 1.5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಈ ಎಲ್ಲ ಪ್ರಯಾಣಿಕರು ಗಲ್ಫ್ ರಾಷ್ಟ್ರಗಳು ಮತ್ತು ಮಲೇಷ್ಯಾದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈಗ ದಾಖಲಾದ ಎಲ್ಲ ಪ್ರಕರಣಗಳಲ್ಲಿಯೂ ಬಟ್ಟೆಯೊಳಗೆ ಚಿನ್ನವನ್ನು ಮರೆಮಾಚಲಾಗಿದೆ. ಕಾರ್ಯವಿಧಾನ ಒಂದೇ ರೀತಿಯಾಗಿದೆ.
ಕೌಲಾಲಂಪುರದಿಂದ ಏರ್ ಏಷ್ಯಾ ವಿಮಾನದಲ್ಲಿ (ಎಕೆ-053) ರಾತ್ರಿ 11 ಗಂಟೆ ಸುಮಾರಿಗೆ ಬೆಂಗಳೂರಿನ ಏರ್‌ಪೋರ್ಟ್‌ಗೆ ಬಂದಿಳಿದ 30 ವರ್ಷದ ಯುವಕನ ಬಳಿ 197.43 ಗ್ರಾಂ ತೂಕದ ಚಿನ್ನ ಪತ್ತೆಯಾಗಿದೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ ₹12,55,655 ಆಗಿದೆ. ದೇಶದೊಳಗೆ ಕಚ್ಚಾ ಚಿನ್ನವನ್ನು ಯಾವುದೇ ರೂಪದಲ್ಲಿ ತರುವುದನ್ನು ನಿಷೇಧಿಸಲಾಗಿದೆ.
ಈತ ಬೆಂಗಳೂರಿನಲ್ಲಿ ಐಟಿ ಮತ್ತು ಹಾರ್ಡ್‌ವೇರ್ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದನು.
ಮತ್ತೊಂದು ಘಟನೆಯಲ್ಲಿ, ಏರ್ ಅರೇಬಿಯಾ ವಿಮಾನದಲ್ಲಿ (ಜೆ 9-431) ಕುವೈತ್‌ನಿಂದ ಆಗಮಿಸಿದ ಮಹಿಳಾ ಪ್ರಯಾಣಕಿ ಒಟ್ಟು 196.73 ಗ್ರಾಂ ತೂಕದ ಕಚ್ಚಾ ಚಿನ್ನದ ಕಟ್ ಚೈನ್‌ಗಳು, ಬಳೆಗಳು ಮತ್ತು ಪೆಂಡೆಂಟ್‌ಗಳನ್ನು ತನ್ನ ಬಟ್ಟೆಯೊಳಗೆ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಇದರ ಮೌಲ್ಯ ₹12,51,203 ಇದೆ.
ಮದೀನಾ ಮತ್ತು ಬಹ್ರೇನ್‌ನಿಂದ ಆಗಮಿಸಿದ ಇನ್ನಿತರ ಇಬ್ಬರು ಪ್ರಯಾಣಿಕರು ವಿದೇಶಿ ಮೂಲದ ಕಚ್ಚಾ ಚಿನ್ನವನ್ನು ಚೈನ್‌ಗಳು ಮತ್ತು ಸಣ್ಣ ಚಿನ್ನದ ಬಾರ್‌ಗಳ ರೂಪದಲ್ಲಿ ಕಳ್ಳಸಾಗಣೆ ಮಾಡಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಪಾಯಕಾರಿ ಶ್ವಾನ ತಳಿ ಸಂತಾನೋತ್ಪತ್ತಿ ನಿಷೇಧಿಸಿದ ಕೇಂದ್ರ: ಹೈಕೋರ್ಟ್ ತಡೆ
ಈ ಇಬ್ಬರಿಂದಲೂ ₹74,64,986 ಮೌಲ್ಯದ ಒಟ್ಟು 1.167 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಪ್ರಯಾಣಿಕರು ಮದೀನಾದಿಂದ ಏರ್ ಅರೇಬಿಯಾ ವಿಮಾನಗಳ ಮೂಲಕ ಶಾರ್ಜಾಕ್ಕೆ (G9-176) ಮತ್ತು ಶಾರ್ಜಾದಿಂದ ಬೆಂಗಳೂರಿಗೆ (G9-496) ಬಹ್ರೇನ್‌ನಿಂದ ಗಲ್ಫ್ ಏರ್ (GF-282) ಮೂಲಕ ಬೆಂಗಳೂರಿಗೆ ಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.