ಒಂದು ಹಂತಕ್ಕೆ ಬಂದು ಮತ್ತೊಂದು ನೆಲೆಗೆ ಜಿಗಿಯಬೇಕಾದ ಸಂದರ್ಭದಲ್ಲಿ ಗುರುದತ್ 'ಸ್ವಮರುಕ'ದ ಆಕರ್ಷಣೆಗೆ ಬಲಿಯಾದರು. ಈ self pity ಎನ್ನುವುದರ ಬಲೆಯೊಳಗೆ ಒಮ್ಮೆ ಸಿಲುಕಿಕೊಂಡರೆ ಹೊರಗೆ ಬರುವುದು ಕಷ್ಟ. ಅದರಿಂದ ಉಂಟಾಗುವ ಸೋಲುಗಳು ಸ್ವಯಂಕೃತ.
ಗುರುದತ್ ಅವರ ಬಹು ಚರ್ಚಿತ, ಅತ್ಯಂತ ಜನಪ್ರಿಯ, ಅದ್ಭುತ ಎಂದು ಕರೆಯಲ್ಪಡುವ ‘ಪ್ಯಾಸಾ’ ಮತ್ತು ‘ಕಾಗಜ್ ಕೆ ಫೂಲ್’ ವಿಷಣ್ಣತೆಯನ್ನು ಆತ್ಮವಾಗಿಸಿಕೊಂಡ ನಾರ್ಸಿಸಂ ಮನಸ್ಥಿತಿಯ ಸಿನೆಮಾಗಳು.
ಇಲ್ಲಿನ ಪ್ರೊಟಗಾನಿಸ್ಟ್ ಈ ನಾರ್ಸಿಸಂ ವ್ಯಕ್ತಿತ್ವದ ಮೂಲಕ ಇಡೀ ಸಿನೆಮಾದ ತುಂಬಾ ವ್ಯಾಪಿಸಿಕೊಳ್ಳುತ್ತಾನೆ. ಸ್ವಮರುಕ(self pity) ಎನ್ನುವುದು ಆತನ ಗೀಳಾಗಿ ಪ್ರೇಕ್ಷಕರಿಗೂ ದಾಟಿಸುವಷ್ಟು ಪರಿಣಾಮಕಾರಿಯಾಗಿದೆ. ಸಾಹಿರ್ ಅವರ ಮನ ಮಿಡಿಯುವ ಸಾಹಿತ್ಯ, ಎಸ್.ಡಿ.ಬರ್ಮನ್‌ರ ಸದಾ ಕಾಡುವ ಸಂಗೀತ, ವಿ.ಕೆ. ಮೂರ್ತಿಯವರ ಚಕಿತಗೊಳಿಸುವ, ಪ್ರಯೋಗಾತ್ಮಕ ಸಿನಿಮಾಟೋಗ್ರಫಿ ಎಲ್ಲವೂ ನಾಯಕನ ಸ್ವಮರುಕದ ವೈಭವೀಕರಣಕ್ಕೆ ಬಳಕೆಯಾಗಿದೆ. ಇಂತಹ ಶ್ರಮ, ಸಾಮರ್ಥ್ಯ ಹೀಗೆ ನಾಯಕನ ‘ದೇವದಾಸಿಸಂ’ಗೆ ಸಂಕುಚಿತಗೊಳ್ಳುತ್ತದೆ.
‘ಪ್ಯಾಸಾ’ದಲ್ಲಿನ ಪಲಾಯನವಾದಕ್ಕೆ ಈ ಸ್ವಯಂ ಕನಿಕರ ಹೊದಿಕೆ ಹಾಕಿ ಮುಚ್ಚಿದರೆ ಈ ನಾರ್ಸಿಸಂ ಗೀಳು ‘ಕಾಗಜ್ ಕೆ ಫೂಲ್’ನಲ್ಲಿನ ಸ್ಥಗಿತತೆಯನ್ನು ಮುಚ್ಚುತ್ತದೆ. ಆದರೆ ‘ಪ್ಯಾಸಾ’ದಲ್ಲಿ ಪಲಾಯನವಾದವನ್ನು ರೋಮ್ಯಾಂಟಿಕ್‌ಗೊಳಿಸಿ ಯಶಸ್ವಿಯಾದ ಗುರುದತ್ ‘ಕಾಗಜ್ ಕೆ ಫೂಲ್’ನಲ್ಲಿ ಸ್ಥಗಿತತೆಯನ್ನು ರೋಮ್ಯಾಂಟಿಕ್‌ಗೊಳಿಸಲು ಹೋದಾಗ ಪ್ರೇಕ್ಷಕರು ತಿರಸ್ಕರಿಸಿದ್ದಾರೆ.
ಇದನ್ನು ಓದಿದ್ದೀರಾ?: ನೂರರ ನೆನಪು | ಉತ್ಕಟ ಪ್ರೇಮದ ದುರಂತ ನಾಯಕ ಗುರುದತ್
ಆದರೆ ಈ ಗುಣಲಕ್ಷಣಗಳೇ ಆ ಎರಡೂ ಸಿನೆಮಾಗಳಿಗೆ ‘ಸಾರ್ವತ್ರಿಕ ಶ್ರೇಷ್ಠತೆ’ ತಂದುಕೊಟ್ಟಿರುವುದು ಕುತೂಹಲಕರ. ‘ಪ್ಯಾಸಾ’ದ ಸ್ವಮರುಕವನ್ನು ಸ್ವತಃ ತಾವೂ ಅನುಭವಿಸಿ ಅಭೂತಪೂರ್ವ ಎಂಬಂತೆ ಬೆಂಬಲಿಸಿದ ಪ್ರೇಕ್ಷಕರು, ‘ಕಾಗಜ್ ಕೆ ಫೂಲ್’ನಲ್ಲಿ ಮತ್ತೆ ಮತ್ತೆ ಅದೇ ಪುನರಾವರ್ತನೆಗೊಂಡಾಗ ತಿರಸ್ಕರಿಸಿದ್ದಕ್ಕೆ ‘ಇವರಿಗೆ ಟೇಸ್ಟ್ ಇಲ್ಲ’ ಎಂದು ಟೀಕೆಗೆ ಒಳಗಾಗುತ್ತಾರೆ.
ಇದರಾಚೆಗೂ… ಪ್ರತಿಯೊಂದನ್ನೂ ದೃಶ್ಯಕಾವ್ಯವಾಗಿಸುವ ಗುರುದತ್ ಅವರ ಸಾಮರ್ಥ್ಯವೂ ಚಕಿತಗೊಳಿಸುತ್ತದೆ. ಈ ನಾರ್ಸಿಸ್ಟ್ ಕೃತಿಗಳಿಗಿಂತಲೂ ಗುರುದತ್ ತನ್ನ ವೃತ್ತಿಯ ಆರಂಭದಲ್ಲಿ ದೇವ್ ಆನಂದ್ ಜೊತೆಗೂಡಿ ಮಾಡಿದ ‘ಬಾಝಿ’, ‘ಜಾಲ್’ ಸಿನೆಮಾಗಳು ಮುಖ್ಯವಾಗುತ್ತವೆ. ‘noir’ ಘರಾಣಾದ ಈ ಸಿನೆಮಾಗಳು ಕೇವಲ ಟೈಮ್ ಪಾಸ್ ಆಗಿರಲಿಲ್ಲ. ಮುಂದಿನ ದೃಶ್ಯಗಳಲ್ಲಿ ಏನೋ ಸಂಭವಿಸುತ್ತದೆ ಎಂದು ಪ್ರೇಕ್ಷಕರನ್ನು ಕಾಯಿಸುವ ಶೈಲಿಯ ಈ ಸಿನೆಮಾಗಳ ಪ್ರೊಟಗಾನಿಸ್ಟ್, ಬದುಕನ್ನು ಅರಸಿ ನಗರಕ್ಕೆ ಬಂದವ, ಅದರ ಸುಳಿಗಳ ಆಳ, ಅಗಲ ಗೊತ್ತಾಗದೆ ಆ ತಿರುಗಣಿಯಲ್ಲಿ ಸಿಕ್ಕಿಕೊಂಡು ಸುಳಿ ಸುತ್ತುತ್ತಾ ಹೋಗುತ್ತಾನೆ. ಇದನ್ನು noir ಶೈಲಿಯಲ್ಲಿ ನಿರೂಪಿಸಿರುವುದು ಅದರ ವೈಶಿಷ್ಟತೆ. ನಿರ್ದಯಿ ಕ್ರಿಮಿನಲ್‌ಗಳು, ಅಪರಾಧ ಜಗತ್ತು, ಭ್ರಷ್ಟ ಪೊಲೀಸರು ಮತ್ತು ಅಸಹಾಯಕ ನಾಯಕನನ್ನು ಒಳಗೊಂಡ ಈ ಕಥನವನ್ನು ಕತ್ತಲು-ಬೆಳಕಿನ ಆಟದಲ್ಲಿ ನಿರೂಪಿಸಿರುವುದು ಈ ಸಿನೆಮಾಗಳ ಶಕ್ತಿ.

‘ಬಾಝಿ’ ಸಿನೆಮಾದಲ್ಲಿ ಸಾಹಿರ್ ಬರೆದ ಗೀತಾ ಬಾಲಿ ಅಭಿನಯಿಸಿ ಗೀತಾ ದತ್ ಹಾಡಿರುವ ‘ತದಬೀರ್ ಸೆ ಬಿಗಡೀ ಹುಯಿ ತಕದೀರ್ ಬನಾಲೆ'(ದುರದೃಷ್ಟದಿಂದ ಕಳೆದುಕೊಂಡಿರುವುದನ್ನು ಪರಿಶ್ರಮದ ಮೂಲಕ ಗಳಿಸು) ಒಂದು ಕಲ್ಟ್. ಈ ಸಿನೆಮಾಗಳ ಕಥನದ ಅತಿ ಎನಿಸುವ darkness ಅನ್ನು ಮುಂದೆ ‘ಆರ್ ಪಾರ್’, ‘ಸಿಐಡಿ'(ನಿರ್ದೇಶಕ: ರಾಜ್ ಖೋಸ್ಲಾ) ಸಿನೆಮಾಗಳಲ್ಲಿ ತಿಳಿಗೊಳಿಸಿ ಹಾಸ್ಯವನ್ನು ಲೇಪಿಸಿದರು.
ಎಲ್ಲವೂ ಒಂದು ಹಂತಕ್ಕೆ ಬಂದು ಮತ್ತೊಂದು ನೆಲೆಗೆ ಜಿಗಿಯಬೇಕಾದ ಸಂದರ್ಭದಲ್ಲಿ ಗುರುದತ್ ಸ್ವಮರುಕ ಆಕರ್ಷಣೆಗೆ ಬಲಿಯಾದರು. ಈ self pity ಎನ್ನುವುದರ ಬಲೆಯೊಳಗೆ ಒಮ್ಮೆ ಸಿಲುಕಿಕೊಂಡರೆ ಹೊರಗೆ ಬರುವುದು ಕಷ್ಟ. ಅದರಿಂದ ಉಂಟಾಗುವ ಸೋಲುಗಳು ಸ್ವಯಂಕೃತ. ಇದಕ್ಕೆ ಪ್ರೇಕ್ಷಕರನ್ನು ದೂಷಿಸುವುದು ಅರ್ಥಹೀನ.

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ