ದೇಶದಾದ್ಯಂತ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಸಾಮಾನ್ಯಕ್ಕಿಂತ ಅಧಿಕ ತಾಪಮಾನ ಇರಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಫೆಬ್ರವರಿ ಕೊನೆಯಿಂದಲೇ ರಾಜ್ಯದಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ನಡುವೆ ರಾಜ್ಯ ಆರೋಗ್ಯ ಇಲಾಖೆಯು ಜನರಿಗೆ ಮಾರ್ಗಸೂಚಿಯನ್ನು ಹೊರಡಿಸಿದೆ.
“ಮಧ್ಯಾಹ್ನ ಸುಮಾರು 12 ಗಂಟೆಯಿಂದ 3 ಗಂಟೆಯವರೆಗೂ ತೀರಾ ಅಗತ್ಯ ಇಲ್ಲದ ಹೊರತಾಗಿ ಹೊರ ಹೋಗಬೇಡಿ. ಈ ಸಂದರ್ಭದಲ್ಲಿ ತಾಪಮಾನ ಏರಿಕೆಯಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಅಧಿಕವಾಗಿದೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ” ಎಂದು ಆರೋಗ್ಯ ಇಲಾಖೆಯು ಬಿಸಿ ಗಾಳಿ ಸಂಬಂಧಿತ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಮಾರ್ಚ್‌ನಿಂದ ಸಾಮಾನ್ಯಕ್ಕಿಂತ ಅಧಿಕ ತಾಪಮಾನ; ಬಿಸಿ ಗಾಳಿಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಜನರು ಹೆಚ್ಚು ನೀರು ಕುಡಿಯಿರಿ, ನೀರಿನ ಅಂಶಗಳಿರುವ ಆಹಾರವನ್ನು ಸೇವಿಸಿ. ಬಾಯಾರಿಕೆಯಾಗದಿದ್ದರೂ ಪದೇ ಪದೇ ನೀರು ಕುಡಿಯುತ್ತಿರಿ. ನಿರ್ಜಲೀಕರಣ ಆಗುವವರೆಗೂ ಕಾಯಬೇಡಿ. ಸಾಧ್ಯವಾದಷ್ಟು ಒಳ ಆವರಣದಲ್ಲಿಯೇ ಇರಲು ಪ್ರಯತ್ನಿಸಿ ಎಂದು ತಿಳಿಸಿದೆ.
ಏನೆಲ್ಲಾ ಆಹಾರ ಸೇವಿಸಬೇಕು?
ನೀರು ಕುಡಿಯುವುದಕ್ಕೆ ಅಧಿಕ ಒತ್ತು ನೀಡಿರುವ ಆರೋಗ್ಯ ಇಲಾಖೆಯು ಮನೆಯಿಂದ ಹೊರ ಹೋಗುವಾಗ, ಬಸ್‌ಗಳಲ್ಲಿ ಇತರ ಸಾರಿಗೆ ವ್ಯವಸ್ಥೆಯಲ್ಲಿ ಸಂಚಾರ ಮಾಡುವಾಗಲೂ ಬಾಟಲಿಯಲ್ಲಿ ನೀರು ಇಟ್ಟುಕೊಳ್ಳಿ ಎಂದು ಹೇಳಿದೆ.
ಒಆರ್‌ಎಸ್ ಅಥವಾ ಮನೆಯಲ್ಲಿಯೇ ತಯಾರಿಸಿದ ನಿಂಬೆ ಹಣ್ಣಿನ ಪಾನಕ, ಮಜ್ಜಿಗೆ ಅಥವಾ ಹಣ್ಣಿನ ರಸವನ್ನು ಕುಡಿಯುವಂತೆ ತಿಳಿಸಿದೆ. ಹಾಗೆಯೇ ಕಲ್ಲಂಗಡಿ, ಖರ್ಬೂಜ, ಕಿತ್ತಳೆ, ದ್ರಾಕ್ಷಿ, ಸೌತೆಕಾಯಿ ಮತ್ತು ಲೆಟಿಸ್‌ನಂತಹ ಹೆಚ್ಚು ನೀರಿನಾಂಶವಿರುವ ತರಕಾರಿ, ಹಣ್ಣುಗಳನ್ನು ಸೇವಿಸಿ ಎಂದು ಸಲಹೆ ನೀಡಿದೆ.
ಇನ್ನು ಬಿಸಿಲಿನಲ್ಲಿ ಹೋಗುವಾಗ ಛತ್ರಿ, ಟೋಪಿ, ದುಪ್ಪಟ್ಟ ಯಾವುದಾದರನ್ನು ಬಳಸಿ. ಬಿಸಿಲಿನಲ್ಲಿ ನಡೆಯುವಾಗ ಪಾದರಕ್ಷೆ ಅಥವಾ ಶೂಗಳನ್ನು ಧರಿಸಿ. ಬರೀ ಕಾಲಿನಲ್ಲಿ ನಡೆಯದಿರಿ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಸಿ ಗಾಳಿ ಬೀಸುತ್ತಿದೆ – ತಾಪಮಾನ ಏರುತ್ತಿದೆ; ಪ್ರಕೃತಿ ತಿರುಗಿ ಬೀಳಲಿದೆ!
ಹೀಟ್ ಸ್ಟ್ರೋಕ್ (ತಾಪಾಘಾತ) ಆದಾಗ ಮಾಡುವುದೇನು?
ಹೀಟ್ ಸ್ಟ್ರೋಕ್ (ತಾಪಾಘಾತ) ಆದ ಸಂದರ್ಭದಲ್ಲಿ ಏನೆಲ್ಲಾ ಅನುಭವವಾಗುತ್ತದೆ ಮತ್ತು ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಸಲಹೆಯನ್ನು ಕೂಡಾ ಆರೋಗ್ಯ ಇಲಾಖೆ ನೀಡಿದೆ. ಬಿಸಿಲು ಅಧಿಕವಾಗಿರುವ ಕಾರಣದಿಂದಾಗಿ ಅಧಿಕ ಬಾಯಾರಿಕೆ, ವಾಕರಿಗೆ ಅಥವಾ ವಾಂತಿಯಾಗಬಹುದು. ಮೂತ್ರ ವಿಸರ್ಜನೆ ಸಮಸ್ಯೆ ಉಂಟಾಗಬಹುದು, ಉಸಿರಾಟ ಏರಿಳಿತವಾಗಬಹುದು. ಇಂತಹ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಿಳಿಸಿದೆ.
ತೀವ್ರವಾಗಿ ನಿರ್ಜಲೀಕರಣವಾದಾಗ, ಹೀಟ್ ಸ್ಟ್ರೋಕ್ ಉಂಟಾದಾಗ ವೈದ್ಯಕೀಯ ತುರ್ತು ಸಂದರ್ಭವೆಂದೇ ಪರಿಗಣಿಸಬೇಕು. ಉಷ್ಣಾಂಶ ಅಧಿಕವಾಗುವುದು, ಪ್ರಜ್ಞೆ ತಪ್ಪುವುದು, ಅತಿಯಾಗಿ ಬೆವರುವ ಸಮಸ್ಯೆ ಕಂಡುಬಂದರೆ ಕೂಡಲೇ ಸಹಾಯವಾಣಿ 108 ಅಥವಾ 102ಕ್ಕೆ ಕರೆ ಮಾಡಬಹುದು ಎಂದು ಸೂಚಿಸಿದೆ.
ಈಶಾನ್ಯ ಭಾರತ, ಉತ್ತರ ಭಾರತ, ಪರ್ಯಾಯ ದ್ವೀಪದ ನೈಋತ್ಯ ಮತ್ತು ದಕ್ಷಿಣ ಭಾಗಗಳನ್ನು ಹೊರತುಪಡಿಸಿ ದೇಶದ ಅಧಿಕ ಭಾಗಗಳಲ್ಲಿ ಮಾರ್ಚ್‌ನಿಂದ ಮೇ ತಿಂಗಳವರೆಗೆ ಸಾಮಾನ್ಯಕ್ಕಿಂತ ಅಧಿಕ ಶಾಖದ ಅಲೆಗಳು ಇರಬಹುದೆಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅತೀವ ತಾಪಮಾನಕ್ಕೆ ಬೇಕಾದ ಅಗತ್ಯ ಕ್ರಮವನ್ನು ಮಧ್ಯಮ ವರ್ಗಗಳು ಕೈಗೊಳ್ಳಬಹುದಾದರೂ, ಬಡ ವರ್ಗ ತಾಪಮಾನದ ಬಿಸಿಯಲ್ಲಿ ಬೆಂದು ಹೋಗುವ ಜನರಾಗುವ ಸಾಧ್ಯತೆಯಿದೆ. ದುಡಿಮೆಯೇ ಒಂದು ಹೊತ್ತಿನ ಆಹಾರವಾಗಿರುವ ಬಿಸಿಲು ಲೆಕ್ಕಿಸಿದೆ ಕೃಷಿ ಕೂಲಿ, ಕಟ್ಟಡ ನಿರ್ಮಾಣ ಮಾಡುವ ಕಾರ್ಯವನ್ನು ಬಡ ಜನರು ಮಾಡಲೇಬೇಕಾಗುತ್ತದೆ. ಈ ವರ್ಗದ ಸುರಕ್ಷತೆ ಯಾರ ಹೊಣೆ? ಮಾರ್ಗಸೂಚಿ ಹೊರಡಿಸಿದ ಸರ್ಕಾರ ಬಹುತೇಕ ಎಲ್ಲಾ ಸಮಸ್ಯೆಗೆ ಮೊದಲು ತುತ್ತಾಗುವ ಬಡ ಜನರನ್ನು ಈ ಹೀಟ್ ಸ್ಟ್ರೋಕ್‌ನಿಂದ ಕಾಪಾಡುವ ಕ್ರಮಕೈಗೊಳ್ಳುವುದು ಅನಿವಾರ್ಯ.
