ಕರ್ನಾಟಕ ರಾಜ್ಯದ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರ ಯಾವುದಾದರೂ ಒಂದು ತೀರ್ಮಾನ ಮಾಡದಿದ್ದರೆ ಜೂನ್ 1ರಂದು ರಾಜ್ಯದ ಎಲ್ಲಾ ಪುರುಷ ಪ್ರಯಾಣಿಕರಿಗೂ ಶಕ್ತಿ ಯೋಜನೆಯ ಉಚಿತ ಟಿಕೆಟ್ ವಿತರಿಸಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ. ಮತ್ತು ಬಿ.ಎಂ.ಟಿ.ಸಿ. ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್ ಸಂಘದ ಅಧ್ಯಕ್ಷ ಕೆ.ಆರ್.ವಿಜಯ ಕುಮಾರ್ ಹೇಳಿದ್ದಾರೆ.
ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸಾರಿಗೆ ಸಂಸ್ಥೆಗಳ ಹಲವು ಕಾರ್ಮಿಕ ಸಂಘಟನೆಗಳು ಎರಡು ಬಣಗಳಾಗಿ ಎರಡು ಪ್ರತ್ಯೇಕ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ನಮ್ಮ ಬೇಡಿಕೆಯನ್ನೇ ಮಾನ್ಯ ಮಾಡಬೇಕೆಂದು ಹಠಕ್ಕೆ ಬಿದ್ದಿವೆ. ಇದರಿಂದಾಗಿ ಸರಕಾರ, ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತುಕೊಂಡಿದೆ ಎಂದು ಅವರು ತಿಳಿಸಿದರು.
ನಮ್ಮ ಬೇಡಿಕೆಗಳನ್ನೇ ಈಡೇರಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಹಠಕ್ಕೆ ಬಿದ್ದಿರುವುದು ಮತ್ತು ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸರಕಾರ ಕೈಚೆಲ್ಲಿ ಕುಳಿತುಕೊಂಡಿರುವುದರಿಂದ ನೌಕರರಿಗೆ ಅನ್ಯಾಯವಾಗುತ್ತಿದೆ. ಇನ್ನೂ ದಿನ ಮುಂದೂಡದೆ ಎರಡೂ ಬಣಗಳ ಬೇಡಿಕೆಯ ಬಗ್ಗೆ ಮುಖ್ಯಮಂತ್ರಿ, ಸಾರಿಗೆ ಸಚಿವರು ಹಾಗೂ ಸಂಬಧಿಸಿದ ಅಧಿಕಾರಿಗಳು ಒಟ್ಟು ಸೇರಿ ಯಾವುದಾದರೂ ಒಂದು ತೀರ್ಮಾನ ತೆಗೆದುಕೊಳ್ಳಬೇಕು. ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧರಾಗಿದ್ದೇವೆ. ತೀರ್ಮಾನದಿಂದ ಯಾವುದಾದರೂ ಲೋಪ ಕಂಡ ಬಂದರೆ ಬಳಿಕ ಸಂಬಂಧಿಸಿದವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇವೆ ಎಂದರು.
ಸಾರಿಗೆ ನೌಕರರ ವೇತನ ಪರಿಷ್ಕರಣೆ ಮತ್ತು ಇತರ ಬೇಡಿಕೆಗಳ ಈಡೇರಿಕೆ ಬಗ್ಗೆ ಯಾವುದಾದರೂ ತೀರ್ಮಾನ ಮಾಡಲು ಮೇ 31ರ ವರೆಗೆ ಸರಕಾರಕ್ಕೆ ಗಡುವು ನೀಡುತ್ತಿದ್ದೇವೆ. ಇದಕ್ಕೆ ತಪ್ಪಿದಲ್ಲಿ ಜೂನ್ 1ರಂದು ರಾಜ್ಯದ ಎಲ್ಲಾ ಪುರುಷ ಪ್ರಯಾಣಿಕರಿಗೂ ಶಕ್ತಿ ಯೋಜನೆಯ ಉಚಿತ ಟಿಕೆಟ್ ಅನ್ನು ವಿತರಿಸುವ ಮೂಲಕ ಪ್ರತಿಭಟನೆ ನಡೆಸಲಿದ್ದೇವೆ ಎಂದು ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ.ರಾಜಶೇಖರ್, ಕಾರ್ಯಾಧ್ಯಕ್ಷ ಬಿ.ಸಿ.ಮಹೇಶ್, ಉಪಾಧ್ಯಕ್ಷ ಎಂ.ರಾಮು, ಕಾರ್ಯದರ್ಶಿ ಶ್ಯಾಮರಾವ್ ಉಪಸ್ಥಿತರಿದ್ದರು.