ಮಾದಕ ವಸ್ತು ಮಾರಾಟ ಆರೋಪದ ಮೇಲೆ ತೆಲುಗು ನಿರ್ಮಾಪಕ ಕೃಷ್ಣ ಪ್ರಸಾದ್ ಚೌಧರಿ ಎಂಬಾತನನ್ನು ಸೈಬರಾಬಾದ್ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ 78 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ನೈಜೀರಿಯಾ ಮೂಲದ ಗೇಬ್ರಿಯಲ್ ಎಂತಾನಿಂದ ಕೃಷ್ಣ ಪ್ರಸಾದ್ ಚೌಧರಿ ಗೋವಾದಲ್ಲಿ ಡ್ರಗ್ಸ್ ಖರೀದಿಸುತ್ತಿದ್ದ. ಬಳಿಕ ಹೈದರಾಬಾದ್‌ನಲ್ಲಿ ಟಾಲಿವುಡ್‌ನ ಕೆಲ ಸೆಲೆಬ್ರಿಟಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದಿದ್ದ ಪೊಲೀಸರು, ಆತನನ್ನು ಹಿಂಬಾಲಿಸಿ, ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿ ಬಂಧಿಸಿದ್ದಾರೆ. ಈ ವೇಳೆ ನಿರ್ಮಾಪಕನಿಂದ 82.75 ಗ್ರಾಂ ಕೊಕೇನ್, ಒಂದು ಕಾರು, 2.05 ಲಕ್ಷ ನಗದು, 4 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಗೇಬ್ರಿಯಲ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಸಿನಿಮಾದ ತೆಲುಗು ಅವತರಣಿಕೆಗೆ ಬಂಡವಾಳ ಹೂಡಿದ್ದ ಕೆಪಿ ಚೌಧರಿ, ಹಲವು ತೆಲುಗು ಮತ್ತು ತಮಿಳು ಸಿನಿಮಾಗಳಿಗೆ ವಿತರಕರಾಗಿಯೂ ಗುರುತಿಸಿಕೊಂಡಿದ್ದಾರೆ. ಸರ್ದಾರ್ ಗಬ್ಬರ್ ಸಿಂಗ್, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಮುಂತಾದ ಚಿತ್ರಗಳಿಗೂ ಚೌಧರಿ ವಿತರಕರಕನಾಗಿದ್ದ.
