- ಧಾರಾಕಾರವಾಗಿ ನೀರು ಹರಿದ ಕಾರಣ ಕೆಲಕಾಲ ಆಟೋ, ಬಸ್ ಸ್ಥಗಿತ
- ಕಲಬುರಗಿ ಜಿಲ್ಲೆಯ ಹಲವು ಕಡೆ ನಾಲ್ಕೈದು ದಿನ ಇನ್ನಷ್ಟು ಮಳೆ ಸಾಧ್ಯತೆ
ಕಲಬುರಗಿ ನಗರದಲ್ಲಿ ನಿನ್ನೆ (ಶುಕ್ರವಾರ) ಸಂಜೆ ಸುರಿದ ದಿಢೀರ್ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ತವಾಗಿದ್ದು, ವಾಹನ ಸವಾರರು ಹಾಗೂ ಬೀದಿಬದಿ ವ್ಯಾಪಾರಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜಿಲ್ಲೆಯ ಗ್ರಾಮೀಣ ಭಾಗದ ಬಹುತೇಕ ಕಡೆಗಳಲ್ಲಿ ಬೆಳಗ್ಗೆಯಿಂದಲೂ ಬಿರು ಬಿಸಿಲಿನಿಂದ ಕೂಡಿತ್ತು. ಮಧ್ಯಾಹ್ನದ ವೇಳೆ 35ಡಿಗ್ರಿಗಿಂತಲೂ ಹೆಚ್ಚಿನ ಉಷ್ಣಾಂಶ ದಾಖಲಾಗಿತ್ತು. 3 ಗಂಟೆ ನಂತರ ಮೋಡ ಮುಸಿಕಿದ ವಾತವರಣದಿಂದಾಗಿ ಬಿಸಿಲಿನ ತಾಪಮಾನ ಕಡಿಮೆಯಾಗಿತ್ತು.
ಸಂಜೆ 4 ಗಂಟೆ ಆಗುತ್ತಿದ್ದಂತೆ ಗುಡುಗು-ಸಿಡಿಲು ಸಹಿತ ಮಳೆ ಶುರುವಾಗಿ ರಾತ್ರಿಯವರೆಗೂ ಧಾರಾಕಾರವಾಗಿ ಸುರಿದಿದೆ. ಕೆಲವೆಡೆ ಬೃಹತ್ ಗಾತ್ರದ ಆಲಿಕಲ್ಲುಗಳು ಸುರಿದಿದ್ದರಿಂದ ಕೆಲಕಾಲ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು.
ಈ ಸುದ್ದಿ ಓದಿದ್ದೀರಾ? : ತುಮಕೂರು | ಮಾಜಿ ಡಿಸಿಎಂ ಜಿ ಪರಮೇಶ್ವರ್ ಮೇಲೆ ಕಲ್ಲು ತೂರಾಟ; ತಲೆಗೆ ಗಾಯ
ನಗರದ ಮುಖ್ಯ ರಸ್ತೆಯಲ್ಲಿ ನೀರು ಹರಿದ್ದಿದ್ದರಿಂದ ಬೀದಿಬದಿ ವ್ಯಾಪಾರಸ್ಥರು ಪರದಾಡುವಂತಾಗಿತ್ತು. ನಗರದ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ನೀರು ತುಂಬಿದ್ದರಿಂದ ಕೆಲಕಾಲ ಬಸ್ ಮತ್ತು ಆಟೋ ಸಂಚಾರ ಸ್ಥಗಿತಗೊಂಡಿತ್ತು.
ಶನಿವಾರ ಕೂಡ ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆಯು ಮಾಹಿತಿ ನೀಡಿದೆ.