ಕನ್ನಡ ನಾಮಫಲಕ ಹೋರಾಟವು ಕನ್ನಡಿಗರ ಬದುಕು ಕಟ್ಟುವ ಹೋರಾಟವಾಗಲಿ

Date:

Advertisements

ಕನ್ನಡದ ಸಮಸ್ಯೆಗಳು ಮಾತ್ರ ದಶಕಗಳಿಂದಲೂ ಹಾಗೇ ಇವೆ. ಶೈಕ್ಷಣಿಕವಾಗಿ ಕನ್ನಡದ ಮಹತ್ವ ಕಡಿಮೆಯಾಗುತ್ತಿದೆ. ಮುಖ್ಯವಾಗಿ, ಕನ್ನಡ ಅನ್ನದ ಭಾಷೆಯಾಗಿ ಬದಲಾಗಿಲ್ಲ. ಕನ್ನಡ ಓದಿದವರಿಗೆ ಕೆಲಸ ಸಿಗುತ್ತದೆ ಎನ್ನುವ ಭರವಸೆಯಿಲ್ಲ. ಕನ್ನಡ ಶಾಲೆಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ. ಕನ್ನಡ ನೆಲದಲ್ಲಿ ಕನ್ನಡಿಗನೇ ಅನ್ಯನಾಗುತ್ತಿದ್ದಾನೆ. ಕನ್ನಡ ನಾಮಫಲಕಗಳ ವಿಚಾರದಲ್ಲಿ ಆರಂಭವಾಗಿರುವ ಕನ್ನಡತನದ ಚರ್ಚೆ ಕನ್ನಡ ಬದುಕುಗಳ ಅಳಿವು ಉಳಿವಿನ ಚರ್ಚೆ, ಹೋರಾಟವಾಗಿ ಬದಲಾಗಬೇಕಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ಟಿ ಎ ನಾರಾಯಣಗೌಡ ಮತ್ತು ಇತರ ಕನ್ನಡ ಪರ ಕಾರ್ಯಕರ್ತರ ಬಂಧನದ ನಂತರ ಕನ್ನಡ ನಾಮಫಲಕ ಅಳವಡಿಕೆಯ ವಿಚಾರ ವಿವಾದವಾಗಿ ಹೊರಹೊಮ್ಮಿದೆ. ಕರ್ನಾಟಕದಲ್ಲಿ ಕನ್ನಡ ನಾಮಫಲಕಕ್ಕಾಗಿ ಹೋರಾಡಬೇಕಾಗಿ ಬಂದಿರುವುದು, ಅದೊಂದು ವಿವಾದದ ವಿಚಾರವಾಗಿ ಪರಿಣಮಿಸಿರುವುದು ಒಂದು ವಿಪರ್ಯಾಸ.

ಬಿಬಿಎಂಪಿ ಬೆಂಗಳೂರಿನಲ್ಲಿ 2024ರ ಫೆಬ್ರವರಿ 28ರೊಳಗೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60 ಕನ್ನಡ ಭಾಷೆಯಲ್ಲಿ ಇರಬೇಕೆಂದು ಗಡುವು ನೀಡಿದೆ. ಇದರ ನಡುವೆಯೇ ಕರವೇ ಬೀದಿಗಿಳಿದು ನಾಮಫಲಕ ತೆರವು ಕಾರ್ಯಾಚರಣೆಗಿಳಿದಿದ್ದು ವಿವಾದಕ್ಕೆ ಕಾರಣವಾಗಿದೆ.

Advertisements

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ (2022) ಸೆಕ್ಷನ್ 17 (6)ರ ಪ್ರಕಾರ, ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರದ ಅನುಮೋದನೆಯೊಂದಿಗೆ ನಡೆಯುತ್ತಿರುವ ಯಾವುದೇ ವ್ಯಾಪಾರ ಸಂಸ್ಥೆ, ಕೈಗಾರಿಕೆ, ಆಸ್ಪತ್ರೆ, ಮನರಂಜನಾ ಕೇಂದ್ರ, ಹೋಟೆಲ್ ಮತ್ತಿತರ ನಾಮಫಲಕಗಳಲ್ಲಿ ಮೇಲಿನ ಅರ್ಧ ಭಾಗವು ಕನ್ನಡದಲ್ಲಿ ಇರಬೇಕು.

ಯಾವುದೇ ವಾಣಿಜ್ಯ ಸಂಸ್ಥೆಯ ನಾಮಫಲಕ ಶೇ.60ರಷ್ಟು ಕನ್ನಡ ಭಾಷೆ ಹಾಗೂ ಶೇ.40ರಷ್ಟು ಇತರ ಭಾಷೆಯಲ್ಲಿ ಇರಬೇಕು ಎಂದು ಈ ಹಿಂದೆ ಸರ್ಕಾರ 2018ರಲ್ಲಿ ಸುತ್ತೋಲೆ ಹೊರಡಿಸಿತ್ತು. ಅದರಂತೆಯೇ ಸುಗ್ರೀವಾಜ್ಞೆ ಹೊರಡಿಸಿ, ಅನುಷ್ಠಾನಗೊಳಿಸಲು ಗಡುವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಿಂದಿ, ಇಂಗ್ಲಿಷ್ ಮತ್ತಿತರ ಭಾಷೆಗಳ ಮೇಲಾಟದಲ್ಲಿ ಕನ್ನಡದ ಅಸ್ತಿತ್ವ ಉಳಿಸಿಕೊಳ್ಳುವುದೇ ದುಸ್ತರವಾಗಿದೆ. ವಿಮಾನ ನಿಲ್ದಾಣ, ಬ್ಯಾಂಕ್, ಅಂಚೆ ಕಚೇರಿ, ಮೆಟ್ರೋ ಎಲ್ಲೆಲ್ಲೂ ಹಿಂದಿ ಹಾಗೂ ಇಂಗ್ಲಿಷ್‌ನದ್ದೇ ಪಾರುಪತ್ಯ. ಕನ್ನಡಕ್ಕೇನಿದ್ದರೂ ಅವುಗಳ ನಂತರದ ಸ್ಥಾನ. ಕನ್ನಡ ಬಿಟ್ಟು ಬೇರೊಂದು ಭಾಷೆ ಬಾರದವರು ತಮ್ಮ ತವರು ನೆಲದಲ್ಲೇ ತಬ್ಬಿಬ್ಬಾಗುವ ಪರಿಸ್ಥಿತಿ ಇದೆ. ಅದರ ನಿದರ್ಶನವನ್ನು ನಾವು ಬ್ಯಾಂಕ್‌ಗಳಲ್ಲಿ ಕಾಣಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಬ್ಯಾಂಕ್‌ಗಳಲ್ಲಿ ಹಿಂದಿ ಭಾಷಿಕರೇ ತುಂಬಿಹೋಗಿದ್ದಾರೆ. ಇದರಿಂದಾಗಿ ಕನ್ನಡಿಗರು ಅನುಭವಿಸುತ್ತಿರುವ ಕಷ್ಟಗಳು ಒಂದೆರಡಲ್ಲ. ಕನ್ನಡ ಗೊತ್ತಿಲ್ಲದ ಸಿಬ್ಬಂದಿಯಿಂದಾಗಿ ಕನಿಷ್ಠ ವ್ಯವಹಾರ ಮಾಡಲೂ ಕೂಡ ಕನ್ನಡಿಗರು ಪರದಾಡುವಂತಾಗಿದೆ. ಮಂಡ್ಯ ಸೇರಿದಂತೆ ಹಲವು ಕಡೆ ಬ್ಯಾಂಕ್‌ಗಳಲ್ಲಿ ಈ ಬಗ್ಗೆ ಜಗಳಗಳೂ ನಡೆದಿವೆ. ಈಗಲೂ ಕನ್ನಡಿಗರು ಸುಮ್ಮನಿದ್ದರೆ ಇದೇ ಪರಿಸ್ಥಿತಿ ಎಲ್ಲ ಕಡೆ, ಎಲ್ಲ ಇಲಾಖೆಗಳಲ್ಲೂ ಪುನರಾವರ್ತನೆಯಾಗಲಿದೆ. ಕನ್ನಡ ನೆಲದಲ್ಲಿ ಕನ್ನಡಿಗನೇ ಅನ್ಯನಾಗುತ್ತಿದ್ದಾನೆ.

ಕನ್ನಡ ಕಡ್ಡಾಯ

ನಾಮಫಲಕಗಳಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕೆನ್ನುವ ಒತ್ತಾಯ ಮತ್ತು ಹೋರಾಟ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ದೇಶದ ಹಲವು ರಾಜ್ಯಗಳಲ್ಲೂ ಹೆಚ್ಚೂಕಡಿಮೆ ಇಂಥದ್ದೇ ಸ್ಥಿತಿ ಇದೆ. ತೀರಾ ಈಚೆಗೆ ಇಂಥದ್ದೊಂದು ಕಾನೂನು ತಂದಿದ್ದು ಪಂಜಾಬ್ ರಾಜ್ಯ. 2023ರ ಫೆಬ್ರವರಿಯಲ್ಲಿ ಅಂಗಡಿ ಮತ್ತು ಸಂಸ್ಥೆ ಸ್ಥಾಪನೆ ಕಾನೂನಿಗೆ ತಿದ್ದುಪಡಿ ತಂದು ಪಂಜಾಬಿ ಭಾಷೆಯ ನಾಮಫಲಕ ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಪ್ರತಿ ನಾಮಫಲಕ ಪಂಜಾಬಿಯಲ್ಲಿ ಗುರಮುಖಿ ಲಿಪಿಯಲ್ಲಿ ಇರಬೇಕು. ಅದರ ಕೆಳಗೆ ಬೇಕಾದರೆ ಬೇರೆ ಭಾಷೆಗಳನ್ನು ಬಳಸಬಹುದು ಎಂದು ನಿಯಮ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ 2022ರ ಆರಂಭದಲ್ಲಿ ಅಲ್ಲಿನ ಸರ್ಕಾರವು ತಂದ ತಿದ್ದುಪಡಿಯ ಪ್ರಕಾರ, ನಾಮಫಲಕದಲ್ಲಿ ದೇವನಾಗರಿ ಲಿಪಿಯಲ್ಲಿ ಮರಾಠಿ ಭಾಷೆ ಬಳಕೆ ಕಡ್ಡಾಯ. ಈ ನಿಯಮದ ವಿರುದ್ಧ ಮುಂಬೈನ ವ್ಯಾಪಾರಿಗಳು ಹೈಕೋರ್ಟ್ ಮೊರೆ ಹೋದರು. ಆದರೂ ಕೋರ್ಟ್ ಎರಡು ತಿಂಗಳಲ್ಲಿ ಎಲ್ಲ ಅಂಗಡಿಗಳ ಮುಂದಿನ ಬೋರ್ಡ್‌ಗಳಲ್ಲಿ ಮರಾಠಿ ಬೋರ್ಡ್ ಅಳವಡಿಸುವಂತೆ ಸೆಪ್ಟೆಂಬರ್ 2023ರಲ್ಲಿ ಸೂಚಿಸಿತು.

ತೆಲಂಗಾಣ ಸೇರಿದಂತೆ ಅವಿಭಜಿತ ಆಂಧ್ರದಲ್ಲಿಯೂ ಸ್ಥಳೀಯ ಆಡಳಿತ ಭಾಷೆಯಲ್ಲಿಯೇ ನಾಮಫಲಕ ಇರುವುದು ಕಡ್ಡಾಯವಾಗಿದೆ. ಅದರಂತೆ, ಯಾವುದೆ ಅಂಗಡಿ ಯಾ ವ್ಯಾಪಾರಿ ಸಂಸ್ಥೆಯ ಹೆಸರು ಮೊದಲು ತೆಲುಗಿನಲ್ಲಿರಬೇಕು. ಇತರೆ ಭಾಷೆಗಳ ಅಕ್ಷರಗಳು ಅದರ ಕೆಳಗಿರಬೇಕು. 2017 ಮತ್ತು 2018ರಲ್ಲಿಯೇ ನಿಯಮ ಪಾಲಿಸದ ಅಂಗಡಿ ಮತ್ತಿತರ ವ್ಯಾಪಾರ ಕೇಂದ್ರಗಳ ಮೇಲೆ ತೆಲಂಗಾಣ ಸರ್ಕಾರ ಕ್ರಮ ಜರುಗಿಸಿತ್ತು.

ಗುಜರಾತ್‌ನಲ್ಲಿ ಮಾತ್ರ ಇದಕ್ಕೆ ವಿರುದ್ಧವಾದ ಸ್ಥಿತಿಯಿದೆ. ಆ ರಾಜ್ಯದಲ್ಲಿ ನಾಮಫಲಕ ಗುಜರಾತಿನಲ್ಲಿ ಇರುವುದು ಅಪೇಕ್ಷಣೀಯ ಎಂದಿದ್ದರೂ ಕಡ್ಡಾಯವೇನಲ್ಲ. ಸೆಪ್ಟೆಂಬರ್ 2023ರಲ್ಲಿ ಗುಜರಾತ್ ಹೈಕೋರ್ಟ್ ರಾಜ್ಯದಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿನ ನಾಮಫಲಕಗಳಲ್ಲಿ ಗುಜರಾತಿ ಭಾಷೆ ಇದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಎಂಟು ನಗರಪಾಲಿಕೆಗಳಿಗೆ ಆದೇಶಿಸಿತ್ತು. ಆದರೆ, ಅದು ಸಾರ್ವಜನಿಕ ಅಂಗಡಿ ಮತ್ತು ವ್ಯಾಪಾರಿಸ ಸಂಸ್ಥೆಗಳಿಗೆ ಅನ್ವಯವಾಗಿರಲಿಲ್ಲ.

ಕರ್ನಾಟಕವೂ ಸೇರಿದಂತೆ ಯಾವುದೇ ರಾಜ್ಯವಿರಲಿ, ಅಲ್ಲಿನ ನಾಮಫಲಕಗಳಲ್ಲಿ ಸ್ಥಳೀಯ ಭಾಷೆ ಬಳಕೆ ಬಗ್ಗೆ ಅನಾದರವಿದೆ ಎಂದರೆ, ಅದಕ್ಕೆ ಮುಖ್ಯ ಕಾರಣ, ಇದುವರೆಗೆ ಆ ರಾಜ್ಯಗಳನ್ನು ಆಳಿದ ಸರ್ಕಾರಗಳ ಇಚ್ಛಾಶಕ್ತಿ ಕೊರತೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಂತೂ ಹಿಂದೆ ಕನ್ನಡದ ಪರಿಸ್ಥಿತಿ ಹೀನಾಯವಾಗಿತ್ತು. ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ ಇತ್ತು. ಅಷ್ಟೇ ಅಲ್ಲ, ಇಲ್ಲಿ ಕನ್ನಡ ಚಿತ್ರಗಳ ಬಿಡುಗಡೆಗೂ ಸಾಕಷ್ಟು ಕಷ್ಟ ಪಡಬೇಕಿತ್ತು. ಅಂಥ ಸ್ಥಿತಿಯಲ್ಲಿ ಕನ್ನಡಕ್ಕಾಗಿ ಅನಕೃ, ಮ ರಾಮಮೂರ್ತಿ, ನಾರಾಯಣಕುಮಾರ್, ವಾಟಾಳ್ ನಾಗರಾಜ್ ಸೇರಿದಂತೆ ಅನೇಕರು ದುಡಿದಿದ್ದಾರೆ, ಪೊಲೀಸರಿಂದ ಪೆಟ್ಟು ತಿಂದಿದ್ದಾರೆ; ಇವತ್ತಿಗೂ ಕನ್ನಡ ಹೋರಾಟಗಾರರನ್ನು ಸರ್ಕಾರ ಜೈಲಿಗೆ ಹಾಕುವುದನ್ನು ಮುಂದುವರಿಸಿಯೇ ಇದೆ ಎನ್ನುವ ನೋವು ಕನ್ನಡ ಹೋರಾಟಗಾರರಲ್ಲಿದೆ.

ಈ ಸುದ್ದಿ ಓದಿದ್ದೀರಾ: ಕನ್ನಡ ಹೋರಾಟಗಾರರ ಕೈಗೆ ಕೋಳ ತೊಡಿಸಿದ್ದು ಸರಿಯೇ?

ಇನ್ನೊಂದೆಡೆ, ದಶಕಗಳಿಂದಲೂ ಕನ್ನಡದ ಸಮಸ್ಯೆಗಳು ಮಾತ್ರ ಹಾಗೇ ಇವೆ. ಶೈಕ್ಷಣಿಕವಾಗಿ ಕನ್ನಡದ ಮಹತ್ವ ಕಡಿಮೆಯಾಗುತ್ತಿದೆ. ಮುಖ್ಯವಾಗಿ, ಕನ್ನಡ ಅನ್ನದ ಭಾಷೆಯಾಗಿ ಬದಲಾಗಿಲ್ಲ. ಕನ್ನಡ ಓದಿದವರಿಗೆ ಕೆಲಸ ಸಿಗುತ್ತದೆ ಎನ್ನುವ ಭರವಸೆಯಿಲ್ಲ. ಕನ್ನಡ ಶಾಲೆಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ. ಮೂಲಸೌಕರ್ಯ, ಅಗತ್ಯ ಪ್ರಮಾಣದ ಶಿಕ್ಷಕರನ್ನು ಒದಗಿಸದೇ ಸರ್ಕಾರವೇ ಸರ್ಕಾರಿ ಶಾಲೆಗಳನ್ನು ಕೊಲ್ಲುತ್ತಿದೆ. ಕನ್ನಡ ನಾಮಫಲಕಗಳ ವಿಚಾರದಲ್ಲಿ ಆರಂಭವಾಗಿರುವ ಕನ್ನಡತನದ ಚರ್ಚೆ ಕನ್ನಡ ಬದುಕುಗಳ ಅಳಿವು ಉಳಿವಿನ ಚರ್ಚೆ, ಹೋರಾಟವಾಗಿ ಬದಲಾಗಬೇಕಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ವಿಚಾರದಲ್ಲಿ ದಿಟ್ಟ ಹೆಜ್ಜೆ ಇಡುವ ಮೂಲಕ ಕನ್ನಡಿಗರ ಬದುಕು ಕಟ್ಟುವ ಮಹತ್ವದ ಕೆಲಸಕ್ಕೆ ಮುಂದಾಗಬೇಕಿದೆ.

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ದಾವಣಗೆರೆ | ದಲಿತ ಸಂಘಟನೆಗಳ ಒಳಮೀಸಲಾತಿ ಪ್ರತಿಭಟನೆ; ಎಸಿ ಕಛೇರಿಗೆ ಬೀಗ

"ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿ ಒಂದು ವರ್ಷವಾದರೂ ಒಳಮೀಸಲಾತಿಯನ್ನು ಜಾರಿ ಮಾಡುವಲ್ಲಿ...

ಕರ್ನಾಟಕದಲ್ಲಿ ಒಂದು ವಾರ ಭಾರೀ ಮಳೆ: ಕರಾವಳಿ, ಒಳನಾಡಿನ ಜಿಲ್ಲೆಗಳಿಗೆ ರೆಡ್, ಆರೆಂಜ್ ಅಲರ್ಟ್

ಕರ್ನಾಟಕದಾದ್ಯಂತ ಆಗಸ್ಟ್ 17ರಿಂದ 21ರವರೆಗೆ ಭಾರೀ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ...

Download Eedina App Android / iOS

X