ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ, ಇತರೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಏಪ್ರಿಲ್ 14ರ ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ ನಡೆಯಲಿದೆ. ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘ ಹೇಳಿದೆ.
2024ರ ಜೂನ್‌ನಲ್ಲಿ ರಾಜ್ಯ ಸರ್ಕಾರವು ಡಿಸೇಲ್ ದರವನ್ನು ಮೂರು ರೂಪಾಯಿ ಏರಿಸಿತ್ತು. ಈಗ ಮತ್ತೆ ಎರಡು ರೂಪಾಯಿ ಹೆಚ್ಚಿಸಿದೆ. ಈ ಏರಿಕೆಯನ್ನು ಹಿಂಪಡೆಯುವವರೆಗೂ ನಮ್ಮ ಮುಷ್ಕರ ನಿಲ್ಲದು ಎಂದು ಸಂಘಟನೆಗಳು ತಿಳಿಸಿದೆ. ಇದರೊಂದಿಗೆ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಸಂಘ ಆಗ್ರಹಿಸಿದೆ.
ಇದನ್ನು ಓದಿದ್ದೀರಾ? ರಾಯಚೂರು | ಲಾರಿ ಮಾಲೀಕರ ಸಂಘದ ಮುಷ್ಕರಕ್ಕೆ ಕರವೇ ಬೆಂಬಲ
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಸಂಘದ ಅಧ್ಯಕ್ಷ ಜಿ ಆರ್ ಷಣ್ಮುಖಪ್ಪ, “ಈ ಮುಷ್ಕರಕ್ಕೆ ಜಲ್ಲಿ, ಗ್ಯಾಸ್ ಟ್ಯಾಂಕ್, ಮರಳು ಸಾಗಣೆ ವಾಹನಗಳ ಮಾಲೀಕರ ಸಂಘ ಸೇರಿ ಒಟ್ಟು 69 ಸಂಘಟನೆಗಳು ಬೆಂಬಲ ನೀಡಿದೆ. ಇದರಿಂದಾಗಿ ರಾಜ್ಯದಲ್ಲಿ ಸುಮಾರು 700 ಗೂಡ್ಸ್ ಕಚೇರಿಗಳು ಬಂದ್ ಆಗಲಿದೆ. ಈಗಾಗಲೇ ಕಾರ್ಖಾನೆ, ಕೈಗಾರಿಕೆ, ಕಂಪನಿಗಳಿಗೆ ಮುಷ್ಕರದ ಬಗ್ಗೆ ಪತ್ರ ಬರೆಯಲಾಗಿದೆ” ಎಂದು ತಿಳಿಸಿದ್ದಾರೆ.
ಡಿಸೇಲ್ ಮಾತ್ರವಲ್ಲ ಪೆಟ್ರೋಲ್, ಟೋಲ್ ದರಗಳ ಪರಿಷ್ಕರಣೆ ಮಾಡಬೇಕು ಎಂಬುದು ನಮ್ಮ ಆಗ್ರಹ. ನಮ್ಮ ಮುಷ್ಕರಕ್ಕೆ ನಮ್ಮ ರಾಜ್ಯ ಮಾತ್ರವಲ್ಲ ಹೊರ ರಾಜ್ಯದ ಲಾರಿ ಮಾಲೀಕರು ಕೂಡಾ ಬೆಂಬಲ ಸೂಚಿಸಿದ್ದಾರೆ. ಪೆಟ್ರೋಲ್ ಬಂಕ್ ಸಂಘಟನೆಗಳ ಬೆಂಬಲವೂ ಇದೆ. ಸುಮಾರು ಆರು ಲಕ್ಷಕ್ಕೂ ಹೆಚ್ಚು ಲಾರಿಗಳು ರಸ್ತೆಗಳಿಯದು. ಹೊರ ರಾಜ್ಯದಿಂದ ಬರುವ ಲಾರಿಗಳನ್ನು ತಡೆಯಲಾಗುವುದು ಎಂದು ಷಣ್ಮುಖಪ್ಪ ಹೇಳಿದ್ದಾರೆ.
ಗಡಿ ಚೆಕ್‌ಪೋಸ್ಟ್‌ಗಳನ್ನು ರದ್ದು ಮಾಡಬೇಕು. ರಾಜ್ಯದಲ್ಲಿ ಟೋಲ್ ಸಂಗ್ರಹ ಮಾಡಬಾರದು. ವಾಹನಗಳ ಸಾಮರ್ಥ್ಯ ಅರ್ಹತಾ ಪತ್ರ (ಫಿಟ್‌ನೆಸ್ ಸರ್ಟಿಫಿಕೆಟ್) ನವೀಕರಣಕ್ಕೆ ಶುಲ್ಕವನ್ನು ಹೆಚ್ಚು ಮಾಡಿ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ರಾಜ್ಯದ ಪ್ರಮುಖ ನಗರಗಳಿಗೆ ಸರಕು ಸಾಗಣೆ ವಾಹನಗಳ ಪ್ರವೇಶಕ್ಕೆ ಕೇವಲ ಐದು ಗಂಟೆ ಅವಕಾಶ ನೀಡಿರುವುದನ್ನು ತೆಗೆದುಹಾಕಬೇಕು ಎಂಬುದು ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘದ ಬೇಡಿಕೆಯಾಗಿದೆ.
